ಚೀನಾ ಹಾಗೂ ಭಾರತದ ನಡುವೆ ಯುದ್ಧವೂ ಸ್ವಲ್ಪದರಲ್ಲೇ ಮಿಸ್ ಆಗಿದೆ. ಲಡಾಕ್‌ನಲ್ಲಿ ನಡೆಯಬೇಕಿದ್ದ ಯುದ್ಧವು ಸೇನೆಯ ಜಾಣ್ಮೆಯಿಂದ ತಪ್ಪಿದೆ.
ನವದೆಹಲಿ (ಫೆ.19): ಭಾರತ ಮತ್ತು ಚೀನಾ ದೇಶಗಳ ನಡುವೆ ಪೂರ್ವ ಲಡಾಖ್ ಬಿಕ್ಕಟ್ಟು ತೀವ್ರಗೊಂಡಿದ್ದ ಕಳೆದ ಆಗಸ್ಟ್ ತಿಂಗಳ ವೇಳೆ, ಉಭಯ ದೇಶಗಳು ಯುದ್ಧ ಸ್ಥಿತಿಗೆ ಬಂದು ನಿಂತಿದ್ದವು. ಆದರೆ ಭಾರತೀಯ ಸೇನೆ ತೋರಿದ ಅಪಾರ ಸಂಯಮದಿಂದಾಗಿ ಸಂಭವನೀಯ ಯುದ್ಧ ತಪ್ಪಿತು ಎಂದು ಭಾರತೀಯ ಸೇನೆಯ ಹಿರಿಯ ಕಮಾಂಡರ್ ಲೆ.ಜ.ವೈ.ಕೆ.ಜೋಶಿ ತಿಳಿಸಿದ್ದಾರೆ. ಈ ಮೂಲಕ ಉಭಯ ದೇಶಗಳ ನಡುವಿನ ಸುಮಾರು 9 ತಿಂಗಳ ಸುದೀರ್ಘ ಸಂಘರ್ಷ ಯಾವ ಹಂತಕ್ಕೆ ತಲುಪಿತ್ತು ಎಂಬುದರ ಕುರಿತು ಮೊದಲ ಬಾರಿಗೆ ಬೆಳಕು ಚೆಲ್ಲಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾಹಿತಿ ನೀಡಿರುವ ಲೆ.ಜ.ಜೋಶಿ, ‘ಉಭಯ ದೇಶಗಳ ನಡುವಿನ 9 ತಿಂಗಳ ಸುದೀರ್ಘ ಬಿಕ್ಕಟ್ಟು ಹಲವು ಏಳು-ಬೀಳು ಕಂಡಿತ್ತು. ಆದರೆ ಭಾರತೀಯ ಸೇನೆ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವವಾದ ಕೈಲಾಶ ಪರ್ವದ ಶ್ರೇಣಿಯ ದಕ್ಷಿಣದ ಭಾಗಗಳನ್ನು ಆ.29 ಮತ್ತು ಆ.30ರಂದು ತನ್ನ ವಶಕ್ಕೆ ಪಡೆದುಕೊಂಡಿದ್ದು, ಚೀನಾವನ್ನು ಇನ್ನಿಲ್ಲದಂತೆ ಕಂಗೆಡುವಂತೆ ಮಾಡಿತ್ತು. ಕಾರಣ ಆ ಪ್ರದೇಶದ ಮೇಲಿನ ನಿಯಂತ್ರಣವು ಭಾರತಕ್ಕೆ ಸುತ್ತಮುತ್ತಲ ಪ್ರದೇಶಗಳ ಮೇಲೆ ಕಣ್ಗಾವಲು, ನಿಯಂತ್ರಣದ ದೃಷ್ಟಿಯಿಂದ ಮಹತ್ವದ ಮುನ್ನಡೆ ನೀಡಿದ್ದರೆ, ಚೀನಾಕ್ಕೆ ಭಾರೀ ಹಿನ್ನಡೆ ತಂದಿತ್ತು. ಭಾರತದ ಈ ದಿಢೀರ್ ಆಕ್ರಮಣಕಾರಿ ನೀತಿಯಿಂದ ಅವಕ್ಕಾದ ಚೀನಾ ಸೇನೆ ಆ.31ರಂದು ಭಾರೀ ಪಡೆಗಳೊಂದಿಗೆ ಭಾರತೀಯ ಪಡೆಗಳತ್ತ ಆಕ್ರಮಣಕಾರಿ ನುಗ್ಗಿಬಂದಿತ್ತು’
ಪ್ಯಾಂಗಾಂಗ್ ಲೇಕ್‌ನಿಂದ ಚೀನಾ ಸೇನೆ ಹಿಂದಕ್ಕೆ; ಜಾಗ ಖಾಲಿ ಮಾಡುತ್ತಿರುವ ವಿಡಿಯೋ ವೈರಲ್! .
‘ಈ ವೇಳೆಗಾಗಲೇ ಗಲ್ವಾನ್‌ನಲ್ಲಿ ಭೀಕರ ಸಂಘರ್ಷ ನಡೆದು, ಪರಿಸ್ಥಿತಿ ಮತ್ತಷ್ಟುಹದಗೆಟ್ಟಿದ್ದ ಹಿನ್ನೆಲೆಯಲ್ಲಿ, ಪರಿಸ್ಥಿತಿ ಎದುರಿಸಲು ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ನಮ್ಮ ಗನ್, ರಾಕೆಟ್ ಲಾಂಚರ್, ಟ್ಯಾಂಕ್ ಎಲ್ಲವೂ ದಾಳಿಗೆ ಸನ್ನದ್ಧ ಸ್ಥಿತಿಯಲ್ಲಿದ್ದವು. ಬಟನ್ ಒತ್ತುವುದೊಂದೇ ಬಾಕಿ ಎನ್ನುವ ಸ್ಥಿತಿ ಅದು. ಆದರೆ ಇಂಥದ್ದಕ್ಕೆಲ್ಲಾ ಸದಾ ಸಜ್ಜಾಗಿರುವ ನಮ್ಮ ಯೋಧರಿಗೆ ಅದಕ್ಕೆ ಹೆಚ್ಚೇನು ಧೈರ್ಯ ಬೇಕಾಗಿರುವುದಿಲ್ಲ, ಬದಲಾಗಿ ಅಂಥ ಸಮಯದಲ್ಲಿ ಬೇಕಾಗಿರುವುದು ಬಟನ್ ಒತ್ತದೇ ಇರುವುದಕ್ಕೆ ತೋರಬೇಕಾದ ಧೈರ್ಯ. ನಮ್ಮ ಸೇನೆ ಆ ಧೈರ್ಯ ತೋರಿತು. ಹೀಗೆ ತ್ವೇಷ ಮಯವಾದ ಸಂದರ್ಭದಲ್ಲಿ ಭಾರತೀಯ ಸೇನೆ ಅಪಾರ ಸಂಯಮ ತೋರುವ ಮೂಲಕ ಸಂಭವನೀಯ ಯುದ್ಧದ ಸ್ಥಿತಿಯನ್ನು ತಪ್ಪಿಸಿತು’ ಎಂದು ಜೋಶಿ ತಿಳಿಸಿದ್ದಾರೆ.