* ನಕಲಿ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕುವ ಮಹತ್ವದ ಯೋಜನೆ
* ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಯೋಜನೆ
* ಹೊಸ ಮತದಾರರಿಗೆ, ಮತಪಟ್ಟಿಗೆ ಹೆಸರು ಸೇರಿಸಲು ವರ್ಷಕ್ಕೆ 4 ಅವಕಾಶ ನೀಡುವ ಅವಕಾಶ
ನವದೆಹಲಿ(ಜೂ.18): ನಕಲಿ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕುವ ಮಹತ್ವದ ಯೋಜನೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರ, ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಯೋಜನೆ ಸಂಬಂಧ ಶುಕ್ರವಾರ ಅಧಿಸೂಚನೆ ಜಾರಿಗೊಳಿಸಿದೆ. ಶುಕ್ರವಾರ ಒಟ್ಟು 4 ಅಧಿಸೂಚನೆ ಹೊರಡಿಸಲಾಗಿದ್ದು, ಅದರನ್ವಯ ಚುನಾವಣಾ ಕಾನೂನನ್ನು ಲಿಂಗ ತಾಟಸ್ಥ್ಯಗೊಳಿಸುವ, ಹೊಸ ಮತದಾರರಿಗೆ, ಮತಪಟ್ಟಿಗೆ ಹೆಸರು ಸೇರಿಸಲು ವರ್ಷಕ್ಕೆ 4 ಅವಕಾಶ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಚುನಾವಣಾ ಕಾನೂನು (ತಿದ್ದುಪಡಿ) ಕಾಯ್ದೆ, 2021 ಅನ್ನು ಕಳೆದ ವರ್ಷವೇ ಸಂಸತ್‌ನಲ್ಲಿ ಅಂಗೀಕರಿಸಲಾಗಿತ್ತು. ಅದನ್ನು ಇದೀಗ ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಧಾರ್ ಜೋಡಣೆ:
ಒಬ್ಬರೇ ವ್ಯಕ್ತಿ ಹಲವು ಕ್ಷೇತ್ರಗಳ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದನ್ನು ತಪ್ಪಿಸುವ ಸಲುವಾಗಿ, ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಸೇರ್ಪಡೆ ಪ್ರಕ್ರಿಯೆಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಪ್ರಕಟಿಸುವ ಸಾಧ್ಯದೆ ಇದೆ. ಆದರೆ ಇದು ಐಚ್ಛಿಕವಾಗಿದ್ದು, ಕಡ್ಡಾಯವಲ್ಲ.
ಇನ್ನು ಹೊಸ ಮತದಾರರಿಗೆ, ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಇನ್ನು ವರ್ಷಕ್ಕೆ 4 ಬಾರಿ ಅವಕಾಶ ಸಿಗಲಿದೆ. 18 ವರ್ಷ ತುಂಬಿದವರು ಇನ್ನು ಮಂದೆ ಜ.1, ಏ.1, ಜು.1 ಮತ್ತು ಅ.1ರಂದು ತಮ್ಮ ಹೆಸರು ಸೇರ್ಪಡೆ ಮಾಡಬಹುದು.
ಇನ್ನೊಂದು ಮಹತ್ವದ ನಿರ್ಧಾರದಲ್ಲಿ ಚುನಾವಣಾ ಕಾನೂನನ್ನು ಲಿಂಗ ತಾಟಸ್ಥ್ಯ ಮಾಡುವ ನಿಟ್ಟಿನಲ್ಲಿ, ಪಟ್ಟಿಯಲ್ಲಿ ಇದುವರೆಗೂ ಪತ್ನಿ ಎಂದು ಬರೆಯಲಾಗುತ್ತಿದ್ದ ಸ್ಥಳದಲ್ಲಿ ಇನ್ನು ಮುಂದೆ ಸಂಗಾತಿ ಎಂದು ಬರೆಯಲಾಗುವುದು.
ಜೊತೆಗೆ ಚುನಾವಣಾ ಆಯೋಗವು, ಚುನಾವಣೆ ಸಂಬಂಧಿತ ವಸ್ತುಗಳನ್ನು ಸಂಗ್ರಹಿಸಲು ಯಾವುದೇ ಜಾಗಕ್ಕೆ ಕೋರಿಕೆ ಸಲ್ಲಿಸಿ ಅದನ್ನು ಪಡೆದುಕೊಳ್ಳುವ ಕಾನೂನು ಜಾರಿಯಾಗಿದೆ.