11 ರಾಜ್ಯಗಳಿಗೆ ವಿಸ್ತರಿಸಿದ ಪ್ರತಿಭಟನೆಯ ಜ್ವಾಲೆ, ಅಗ್ನಿಪಥ ವಿರೋಧಿಸಿ ಹಿಂಸಾಚಾರ, 2 ಬಲಿ!

By Suvarna News  |  First Published Jun 18, 2022, 10:42 AM IST

* ತೆಲಂಗಾಣದಲ್ಲಿ ಗೋಲಿಬಾರ್‌ಗೆ 1 ಸಾವು, ಒಡಿಶಾದಲ್ಲಿ ಒಬ್ಬನ ಆತ್ಮಹತ್ಯೆ

* 7 ರೈಲು, ಹಲವು ರೈಲು ನಿಲ್ದಾಣಗಳಿಗೆ ಬೆಂಕಿ, 500 ರೈಲು ಸಂಚಾರ ಸ್ತಬ್ಧ

* ಬಿಹಾರ ಡಿಸಿಎಂ, ಬಿಜೆಪಿ ರಾಜ್ಯಾಧ್ಯಕ್ಷನ ಮನೆಗೆ ಪ್ರತಿಭಟನಾಕಾರರ ದಾಳಿ


ನವದೆಹಲಿ(ಜೂ.18): ಅಲ್ಪಾವಧಿಗೆ ಯೋಧರನ್ನು ನೇಮಕ ಮಾಡಿಕೊಳ್ಳುವ ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆ ವಿರೋಧಿಸಿ ಆರಂಭವಾಗಿರುವ ದೇಶವ್ಯಾಪಿ ಹೋರಾಟ ಶುಕ್ರವಾರ ಇನ್ನಷ್ಟುವ್ಯಾಪಕವಾಗಿದ್ದು, 11 ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಿದೆ. ಹೈದರಾಬಾದ್‌ನಲ್ಲಿ ಹಿಂಸಾನಿರತರ ಮೇಲೆ ಪೊಲೀಸರು ಹಾರಿಸಿದ ಗುಂಡಿಗೆ 19 ವರ್ಷದ ಯುವಕ ಬಲಿಯಾಗಿದ್ದರೆ, ಸೇನಾ ಹುದ್ದೆ ಕೈತಪ್ಪುವ ಭೀತಿಯಲ್ಲಿ ಒಡಿಶಾದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮತ್ತೊಂದೆಡೆ ಪ್ರತಿಭಟನಾನಿರತರು ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ರೈಲ್ವೆ ನಿಲ್ದಾಣಗಳ ಮೇಲೆ ದಾಳಿ ನಡೆಸಿ, ಕನಿಷ್ಠ 7 ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಉಳಿದ ರಾಜ್ಯಗಳಲ್ಲಿ ರಸ್ತೆ, ಹೆದ್ದಾರಿ, ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಾಹನಗಳು, ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಹೀಗಾಗಿ ರಸ್ತೆ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಶುಕ್ರವಾರ ಒಟ್ಟಾರೆ 316 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, 200 ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

Tap to resize

Latest Videos

ಅಗ್ನಿಪಥ ಯೋಜನೆ ಕುರಿತು ಎದ್ದಿರುವ ಅನುಮಾನಗಳನ್ನು ನಿವಾರಿಸಲು ಕೇಂದ್ರದ ಹಲವು ಸಚಿವರು, ಬಿಜೆಪಿ ನಾಯಕರು ಸಾಕಷ್ಟುಭರವಸೆ ನೀಡಿದ ಹೊರತಾಗಿಯೂ ಪ್ರತಿಭಟನೆಯ ಕಿಚ್ಚು ಕಡಿಮೆಯಾಗುವ ಸುಳಿವು ಕಂಡುಬರುತ್ತಿಲ್ಲ. ಮತ್ತೊಂದೆಡೆ ವಿಪಕ್ಷಗಳು ಕೂಡ ಪ್ರತಿಭಟನೆ ಬೆಂಬಲಿಸುತ್ತಿರುವ ಕಾರಣ ಹೋರಾಟದ ಕಿಚ್ಚು ಭುಗಿಲೆದ್ದಿದೆ.

ಗೋಲಿಬಾರ್‌ಗೆ ಒಬ್ಬ ಬಲಿ:

ತೆಲಂಗಾಣದ ಸಿಕಂದರಾಬಾದ್‌ನಲ್ಲಿ 300ರಿಂದ 500ರಷ್ಟಿದ್ದ ಉದ್ರಿಕ್ತರ ಗುಂಪು ರೈಲು ನಿಲ್ದಾಣಕ್ಕೆ ನುಗ್ಗಿ ಪ್ರಯಾಣಿಕರ ಬೋಗಿಯೊಂದಕ್ಕೆ ಬೆಂಕಿ ಹಚ್ಚಿದೆ. ಆಗ ಉದ್ರಿಕ್ತರನ್ನು ಬೆದರಿಸಲು ರೈಲ್ವೆ ರಕ್ಷಣಾ ದಳ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರೂ, ಒಬ್ಬನಿಗೆ ಗುಂಡು ತಾಗಿ ಆತ ಮೃತಪಟ್ಟಿದ್ದಾನೆ. ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರದಲ್ಲಿ 2 ರೈಲಿಗೆ ಬೆಂಕಿ:

ಸೇನಾ ಆಕಾಂಕ್ಷಿಗಳು ಹೆಚ್ಚಿರುವ ಬಿಹಾರದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ನವದೆಹಲಿ-ಭಾಗಲ್ಪುರ ವಿಕ್ರಮಶಿಲಾ ಎಕ್ಸ್‌ಪ್ರೆಸ್‌ ಅನ್ನು ಲಖೀಸರಾಯ್‌ನಲ್ಲಿ, ನವದೆಹಲಿ-ದರ್ಭಾಂಗ್‌ ಬಿಹಾರ ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್‌ ರೈಲನ್ನು ಸಮಷ್ಟಿಪುರದಲ್ಲಿ ಸುಡಲಾಗಿದೆ. ಇನ್ನು ಪಟನಾದಲ್ಲಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕಿ ರೇಣು ದೇವಿ, ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್‌ ಜೈಸ್ವಾಲ್‌ ಮನೆ ಮೇಲೆ ಉದ್ರಿಕ್ತರು ದಾಳಿ ನಡೆಸಿದ್ದಾರೆ. ಬಕ್ಸರ್‌, ಭಾಗಲ್ಪುರ ಹಾಗೂ ಸಮಷ್ಟಿಪುರದಲ್ಲಿ ಹೆದ್ದಾರಿ ಹಾಗೂ ರೈಲ್‌ ರೋಕೋ ನಡೆಸಲಾಗಿದೆ. ಮತ್ತೊಂದೆಡೆ ದರ್ಭಾಂಗ್‌ನಲ್ಲಿ ಶಾಲಾ ಬಸ್‌ನಲ್ಲಿದ್ದ ಚಿಕ್ಕ ವಿದ್ಯಾರ್ಥಿಗಳು, ಪ್ರತಿಭಟನಾಕಾರರ ಹಿಂಸಾಕೃತ್ಯಕ್ಕೆ ಬೆಚ್ಚಿಬಿದ್ದ ವಿಡಿಯೋ ವೈರಲ್‌ ಆಗಿದೆ.

ಯುವಕ ಆತ್ಮಹತ್ಯೆ:

ಅಗ್ನಿಪಥ ಯೋಜನೆಯಿಂದ ನಿರಾಶರಾಗಿ ಸೇನಾ ಸೇವಾಕಾಂಕ್ಷಿಯಾಗಿದ್ದ ಒಡಿಶಾದ ಧನಂಜಯ್‌ ಮೊಹಾಂತಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ದೈಹಿಕ, ವೈದ್ಯಕೀಯ ಪರೀಕ್ಷೆಯಲ್ಲಿ ಈ ಹಿಂದೆ ಪಾಸಾಗಿದ್ದ. ಪ್ರವೇಶ ಪರೀಕ್ಷೆ ನಿರೀಕ್ಷೆಯಲ್ಲಿದ್ದ ಈತ, ಅಗ್ನಿಪಥ ಯೋಜನೆಯಿಂದ ತನಗೆ ಹುದ್ದೆ ಸಿಗದೇ ಹೋಗಬಹುದು ಎಂಬ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉತ್ತರಪ್ರದೇಶದಲ್ಲಿ ರೈಲಿಗೆ ಬೆಂಕಿ:

ಉತ್ತರ ಪ್ರದೇಶದ ಬಲಿಯಾ, ವಾರಾಣಸಿ, ಫಿರೋಜ್‌ಪುರ, ಅಮೇಠಿಯಲ್ಲಿ ಪ್ರತಿಭಟನೆಗಳು ಹಿಂಸಾರೂಪ ಪಡೆದಿವೆ. ಬಲಿಯಾದಲ್ಲಿ ಖಾಲಿ ರೈಲೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಜನರನ್ನು ಚದುರಿಸಲು ಲಾಠಿಪ್ರಹಾರ ನಡೆಸಲಾಗಿದೆ. ವಾರಾಣಸಿ, ಫಿರೋಜ್‌ಪುರ ಹಾಗೂ ಅಮೇಠಿಯಲ್ಲಿ ಬಸ್ಸುಗಳ ಮೇಲೆ ಕಲ್ಲು ತೂರಿ, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಲಾಗಿದೆ.

ಇತರೆಡೆ ಪ್ರತಿಭಟನೆ:

ಉಳಿದಂತೆ ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಇಂದೋರ್‌ನಲ್ಲಿ 600 ಯುವಕರು ರೈಲು ತಡೆ ನಡೆಸಿ ಕಲ್ಲು ತೂರಿದ್ದಾರೆ. ಹರ್ಯಾಣದ ಜಿಂದ್‌-ಬಠಿಂಡಾ ರೈಲು ಮಾರ್ಗ ಹಾಗೂ ನರ್ವಾಣಾ ಎಂಬಲ್ಲಿ ಪ್ರತಿಭಟನಾಕಾರರು ಹಳಿಗಳ ಮೇಲೆ ಟೈರ್‌ ಇಟ್ಟು ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಫರೀದಾಬಾದ್‌ ಜಿಲ್ಲೆಯಲ್ಲಿ ಮೊಬೈಲ್‌ ಇಂಟರ್ನೆಟ್‌ ಹಾಗೂ ಎಸ್ಸೆಮ್ಮೆಸ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಬಂಗಾಳದ ಉತ್ತರ ಪರಗಣ ಜಿಲ್ಲೆಯ ಸಿಯಾಲ್‌ದಹ-ಬಂಗೋನ್‌ ಮಾರ್ಗದಲ್ಲಿ, ಸಿಲಿಗುರಿಯಲ್ಲಿ ರೈಲು ಹಳಿಗಳ ಮೇಲೆ ಮಲಗಿ ಯುವಕರು ಪ್ರತಿಭಟಿಸಿದರು. ಇನ್ನು ಜಾರ್ಖಂಡ್‌, ರಾಜಸ್ಥಾನ, ಪಂಜಾಬ್‌ನಲ್ಲೂ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ಕಾಲ ಆಯ್ದ ಮೆಟ್ರೋ ನಿಲ್ದಾಣಗಳು ಎಂಟ್ರಿ, ಎಕ್ಸಿಟ್‌ ಗೇಟ್‌ ಬಂದ್‌ ಮಾಡಲಾಯಿತು. ಪರಿಣಾಮ ಮೆಟ್ರೋ ಸೇವೆ ಬಾಧಿತವಾಯಿತು.

ಮುಂದಿನ ವಾರದಿಂದ ಅಗ್ನಿವೀರರ ನೇಮಕ

ನವದೆಹಲಿ: ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕದ ಕುರಿತಾಗಿ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿರುವ ನಡುವೆಯೇ ಮುಂದಿನ ವಾರದಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಘೋಷಣೆ ಮಾಡಿವೆ. ಈ ಹೊಸ ಯೋಜನೆಯಡಿ ವಾಯುಪಡೆಗೆ ನೇಮಕಾತಿ ಪ್ರಕ್ರಿಯೆ ಜೂ.24ರಿಂದ ಆರಂಭವಾಗಲಿದೆ ಎಂದು ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಹೇಳಿದ್ದಾರೆ. ಮತ್ತೊಂದೆಡೆ ಸೇನಾಪಡೆಗೆ ನೇಮಕಾತಿ ಸಂಬಂಧ ಇನ್ನು ಎರಡು ದಿನದಲ್ಲಿ ಅಧಿಸೂಚನೆ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದ್ದರೆ, ನೌಕಾಪಡೆಯಲ್ಲಿ ನೇಮಕಾತಿಗೆ ಒಂದು ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಹಿರಿಯ ನೌಕಾ ಕಮಾಂಡರ್‌ವೊಬ್ಬರು ಹೇಳಿದ್ದಾರೆ. ಸೇನೆಯ ಮೂರು ದಳಗಳು ಮುಂದಿನ ಜೂನ್‌ ವೇಳೆಗೆ ಈ ಯೋಜನೆಯಡಿ ಮೊದಲ ತಂಡವನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿವೆ. ಅಲ್ಲದೇ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಯುವಕರು ಈ ಯೋಜನೆ ಕುರಿತಾಗಿ ಸಂಪೂರ್ಣವಾಗಿ ತಿಳಿದುಕೊಂಡಿಲ್ಲ ಎಂದು ಮೂಲಗಳು ಹೇಳಿವೆ.

click me!