ಪ್ರವಾಹಕ್ಕೆ ಈಶಾನ್ಯ ಭಾರತ ತತ್ತರ, ಸತತ 5ನೇ ದಿನವೂ ಭಾರಿ ಮಳೆ!

By Suvarna NewsFirst Published Jun 18, 2022, 11:20 AM IST
Highlights

* 1702 ಗ್ರಾಮಗಳು ಸಂಕಷ್ಟಕ್ಕೆ

* 150 ಪರಿಹಾರ ಕೇಂದ್ರಗಳ ಸ್ಥಾಪನೆ

* ಅಪಾಯದ ಮಟ್ಟಮೀರಿ ಹರಿಯುತ್ತಿರುವ ನದಿಗಳು

* ಭಾರಿ ಮಳೆ: ಪ್ರವಾಹಕ್ಕೆ ಈಶಾನ್ಯ ಭಾರತ ತತ್ತರ

* ಸತತ 5ನೇ ದಿನವೂ ಭಾರಿ ಮಳೆ

ಗುವಾಹಟಿ(ಜೂ.18): ಸತತ ಐದನೇ ದಿನವೂ ಭಾರಿ ಮಳೆ ಮುಂದುವರೆದ ಪರಿಣಾಮ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಶುಕ್ರವಾರವೂ ಮುಂದುವರೆದಿದೆ. ಎಲ್ಲಾ ನದಿಗಳೂ ಉಕ್ಕೇರಿ ಹರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂನ 25 ಜಿಲ್ಲೆಗಳಲ್ಲಿ 11 ಲಕ್ಷಕ್ಕೂ ಅಧಿಕ ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ. ಅಲ್ಲದೇ ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಲ್ಲೂ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಹಲವು ರಸ್ತೆಮಾರ್ಗಗಳು ಹಾಳಾಗಿದ್ದು, ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಅಸ್ಸಾಂನ ದಿಮಾ ಹಸಾವೋ, ಗೋಲ್ಪಾರಾ, ಹೊಜಾಯ್‌, ಕಮ್ರುಪ್‌ಗಳಲ್ಲಿ ಶುಕ್ರವಾರ ಭೂಕುಸಿತ ಸಂಭವಿಸಿದೆ. ಓರ್ವ ವ್ಯಕ್ತಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.

Latest Videos

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ ಪ್ರವಾಹ ಪರಿಸ್ಥಿತಿಯ ಕುರಿತಾಗಿ ಚರ್ಚೆ ನಡೆಸಿದ್ದಾರೆ. ಪ್ರವಾಹದಿಂದಾಗಿ ಸುಮಾರು 1,702 ಗ್ರಾಮಗಳು ತೊಂದರೆಗೊಳಗಾಗಿವೆ. 150 ನೆರವು ಕೇಂದ್ರಗಳಲ್ಲಿ 68 ಸಾವಿರಕ್ಕೂ ಹೆಚ್ಚು ಜನರಿಗೆ ಆಶ್ರಯ ಒದಗಿಸಲಾಗಿದೆ. ಈವರೆಗೆ ಸುಮಾರು 5,840 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಚಿರಾಪುಂಜಿಯಲ್ಲಿ 97 ಸೆಂ.ಮೀ ಮಳೆ: ಶತಮಾನದ 3ನೇ ಗರಿಷ್ಠ

ಶುಕ್ರವಾರ ಮುಂಜಾನೆ 8.30ಕ್ಕೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ಮೇಘಾಲಯದ ಚಿರಾಪುಂಜಿಯಲ್ಲಿ ಭರ್ಜರಿ 97.22 ಸೆ.ಮೀ.ನಷ್ಟುಮಳೆ ಸುರಿದಿದೆ. ಇದು ಕಳೆದ 122 ವರ್ಷಗಳಲ್ಲೇ ಮೂರನೇ ಅತ್ಯಧಿಕ ಮಳೆಯ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಎರಡು ದಿನಗಳ ಹಿಂದಷ್ಟೇ ಚಿರಾಪುಂಜಿಯಲ್ಲಿ 81.16 ಸೆ.ಮೀನಷ್ಟುಮಳೆ ಸುರಿದಿತ್ತು.

ವಿಶ್ವದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಹಿರಿಮೆ ಹೊಂದಿದ್ದ ಚಿರಾಪುಂಜಿಯಲ್ಲಿ 1995ರ ಜೂ.15ರಂದು 156.33 ಸೆ.ಮೀನಷ್ಟುದಾಖಲೆಯ ಮಳೆ ಸುರಿದಿತ್ತು. ಆದರೆ ನಂತರದ ವರ್ಷಗಳಲ್ಲಿ ನಾನಾ ಕಾರಣದಿಂದಾಗಿ ಹಂತಹಂತವಾಗಿ ಮಳೆ ಪ್ರಮಾಣ ಇಳಿಕೆಯಾಗುತ್ತಾ ಬಂದಿತ್ತು. ಜೊತೆಗೆ ದೇಶದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಹಿರಿಮೆಯನ್ನೂ ಕಳೆದುಕೊಂಡಿತ್ತು. ಆದರೆ ಈ ವರ್ಷ ಈಗಾಗಲೇ ನಗರದಲ್ಲಿ ಭಾರೀ ಮಳೆಯಾಘಿದೆ. ತಿಂಗಳ ಆರಂಭದಿಂದ ಜೂ.17ರವರೆಗೆ ಚಿರಾಪುಂಜಿ ಒಟ್ಟಾರೆ 408.13 ಸೆಂ.ಮೀ ಮಳೆ ಪಡೆದುಕೊಂಡಿದೆ.

ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಚಿರಾಪುಂಜಿಯಲ್ಲಿ ಸಾಮಾನ್ಯವಾಗಿ 50ರಿಂದ 60 ಸೆಂ.ಮೀ. ಮಳೆಯಾಗುತ್ತದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಸಾಮಾನ್ಯಕ್ಕಿಂತ ಅಧಿಕವಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

click me!