ಎಐಎಡಿಎಂಕೆ ಬಾಸ್ ಹುದ್ದೆಗಾಗಿ ಕೋರ್ಟ್ ಮೆಟ್ಟಿಲೇರಿದ ಶಶಿಕಲಾ | ತಮಿಳುನಾಡು ಸಿಎಂ ಇ. ಪಳನಿಸ್ವಾಮಿ ಮತ್ತು ಡಿಸಿಎಂ ಪನ್ನೀರ್‌ಸೆಲ್ವಂ ವಿರುದ್ಧ ಚೆನ್ನೈನ ಕೋರ್ಟ್‌ನಲ್ಲಿ ಶಶಿಕಲಾ ಅರ್ಜಿ
ಚೆನ್ನೈ(ಫೆ.19): ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಆಗಿರುವ ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಪಟ್ಟವನ್ನು ಮರಳಿ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮನ್ನು ಹುದ್ದೆಯಿಂದ ಉಚ್ಚಾಟಿಸಿದ ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರ ವಿರುದ್ಧ ಶಶಿಕಲಾ ಚೆನ್ನೈನ ಕೋರ್ಟ್‌ನಲ್ಲಿ ಹೊಸದಾಗಿ ಅರ್ಜಿಯೊಂದನ್ನು ದಾಖಲಿಸಿದ್ದಾರೆ.
ಶಶಿಕಲಾ ಆಪ್ತರ ಆಸ್ತಿ ಜಪ್ತಿ: ಚೆನ್ನೈ ತಲುಪುವ ಮುನ್ನವೇ ತಮಿಳ್ನಾಡು ಸರ್ಕಾರ ಶಾಕ್!
ಶಶಿಕಲಾ ಜೈಲಿಗೆ ಹೋದ ಬಳಿಕ ಪಳನಿಸ್ವಾಮಿ ಹಾಗೂ ಪನ್ನೀರ್‌ಸೆಲ್ವಂ ಅವರು ಎಐಎಡಿಎಂಕೆಯ ಜನರಲ್ ಕೌನ್ಸಿಲ್ ಸಭೆಯನ್ನು ಕರೆದು ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಿದ್ದರು.
ಈ ನಿರ್ಧಾರದ ವಿರುದ್ಧ ಶಶಿಕಲಾ 2017ರಲ್ಲಿ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದರು. ಈದೀಗ ತಮ್ಮ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಕೋರಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಕೋರ್ಟ್ ಮಾ.15ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತ ಸಹಾಯಕರಾದ ಶಶಿಕಲಾ ಜಯಲಲಿತಾ ಮರಣದ ನಂತರ ಪಕ್ಷದ ಮುಖ್ಯಸ್ಥರಾಗುವತ್ತ ಹೆಜ್ಜೆ ಹಾಕಿದ್ದರು. ಇನ್ನೇನು ಸಿಎಂ ಪಟ್ಟ ಅಲಂಕರಿಸಬೇಕು ಎನ್ನುವಷ್ಟರಲ್ಲಿ ಭ್ರಷ್ಟಾಚಾರದ ಆರೋಪವನ್ನು ಎದುರಿಸಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.