
ನವದೆಹಲಿ: ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕಥಾಹಂದರ ಹೊಂದಿರುವ ‘ದ ಕಾಶ್ಮೀರಿ ಫೈಲ್ಸ್’ ಚಿತ್ರವು ಕೇಂದ್ರ ಸರ್ಕಾರ ಪ್ರಾಯೋಜಿತವೂ ಅಲ್ಲ, ಜೊತೆಗೆ ಚಿತ್ರ ಇಸ್ಲಾಮೋಫೋಬಿಯಾದಿಂದಲೂ ಮಾಡಿದ್ದಲ್ಲ. ಆದರೂ ಕೆಲ ವಿದೇಶಿ ಮಾದ್ಯಮಗಳು ಚಿತ್ರದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಅಭಿಯಾನ ನಡೆಸುತ್ತಿವೆ ಎಂದು ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದ ಕುರಿತ ಕೆಲ ಅನುಮಾನ ಬಗೆಹರಿಸಲು ವಿವೇಕ್ ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಆದರೆ ಯಾವುದೇ ಕಾರಣ ನೀಡದೇ ಅವರ ಪತ್ರಿಕಾಗೋಷ್ಠಿಯನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮತ್ತು ವಿದೇಶಿ ಪತ್ರಕರ್ತರ ಒಕ್ಕೂಟ ಬಹಿಷ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ ಮಾತನಾಡಿದ ವಿವೇಕ್ ‘ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಅವರ ಸಾಮೂಹಿಕ ವಲಸೆ ಕುರಿತ ಭರ್ಜರಿ ಯಶಸ್ಸು ಕಾಣುತ್ತಲೇ, ಇದು ಇದುವರೆಗೂ ತಾವು ಕಾಶ್ಮೀರ ಕುರಿತು ಹೆಣೆದ ಕಥೆಗಳಿಗೆ ಭಾರೀ ಹೊಡೆತ ನೀಡುತ್ತಿದೆ ಎಂಬುದು ಕೆಲ ವಿದೇಶಿ ಮಾದ್ಯಮಗಳಿಗೆ ಅರಿವಾಗತೊಡಗಿತು. ಹೀಗಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಳಂಕ ಮೆತ್ತುವ ಕೆಲಸ ಮಾಡುವ ಕೆಲ ವಿದೇಶಿ ಮಾದ್ಯಮಗಳು ಸತ್ಯವನ್ನು ಅರಿಯುವ ಯತ್ನ ಮಾಡದೆಯೇ, ಇಡೀ ಚಿತ್ರವನ್ನು ಕೇವಲ ಹಿಂದೂ- ಮುಸ್ಲಿಂ ಎಂಬ ದೃಷ್ಟಿಕೋನದಲ್ಲೇ ವಿಶ್ಲೇಷಿಸಿ ನನಗೆ ಕರೆ ಮಾಡತೊಡಗಿದರು. ಒಬ್ಬರೇ ಒಬ್ಬರು ಕೂಡಾ, ಚಿತ್ರದಲ್ಲಿ ನಾನು ಸಂದರ್ಶನ ಮಾಡಿರುವ ಸಂತ್ರಸ್ತರ ಬಗ್ಗೆ ವಿಚಾರಿಸುವ ಗೋಜಿಗೆ ಹೋಗಲಿಲ್ಲ, ನಾನು ಚಿತ್ರದಲ್ಲಿ ತೋರಿಸಿದ ಸಾಕ್ಷ್ಯಗಳ ಬಗ್ಗೆ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ನಮ್ಮ ಚಿತ್ರ ತಂಡದ ಬಹುತೇಕ ಸದಸ್ಯರು ಮುಸ್ಲಿಮರೇ ಆಗಿದ್ದರು. ಅದರಲ್ಲೂ ಕಾಶ್ಮೀರದಲ್ಲಂತೂ ಶೇ.100ರಷ್ಟುಮುಸ್ಲಿಂ ಸಿಬ್ಬಂದಿಗಳೇ ಇದ್ದರು. ಅದರಲ್ಲೂ ಇಡೀ ಚಿತ್ರದ ಅತ್ಯಂತ ಪ್ರಮುಖ ದೃಶ್ಯವೆನ್ನಿಸಿದ, ಶಿಕಾರಾ ಎಂಬ ಬಾಲಕನನ್ನು ನಾಯಕ ಮಾತನಾಡಿಸುವ ಸನ್ನಿವೇಶವನ್ನು ಬರೆದುಕೊಡುವಂತೆ ನಾನು ಕಾಶ್ಮೀರಿ ಮುಸ್ಲಿಂ ಹೋರಾಟಗಾರರನ್ನು ಕೇಳಿಕೊಂಡಿದ್ದೆ. ಇಂಥ ವಿಷಯಗಳನ್ನೂ ನಾನು ಹೀಗೆ ಎಲ್ಲರ ಮುಂದೆ ಹೇಳಬೇಕಾದ ಅನಿವಾರ್ಯತೆ ಎದುರಾಗಿರುವುದು ತೀರಾ ಮುಜುಗರದ ಸಂಗತಿ. ಜೊತೆಗೆ ನಮ್ಮನ್ನು ಇಸ್ಲಾಮೋಫೋಬಿಯಾದಿಂದ ಬಳಲುತ್ತಿದ್ದಾರೆ ಎಂದೆಲ್ಲಾ ಟೀಕಿಸಲಾಯಿತು. ಆದರೆ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಈ ಪದವನ್ನು, ಚಿತ್ರದ ವಿರುದ್ಧದ ಅಂತಾರಾಷ್ಟ್ರೀಯ ಸಂಚಿನ ಭಾಗವಾಗಿ ರಾಜಕೀಯ ಅಸ್ತ್ರವಾಗಿ ಬಳಸಲಾಗಿದೆ. ವಾಸ್ತವವಾಗಿ ಇಡೀ ಚಿತ್ರ ಭಯೋತ್ಪಾದನೆ ವಿರುದ್ಧ ಇರುವಂಥದ್ದು. ಚಿತ್ರದಲ್ಲಿ ಒಂದೇ ಒಂದು ಬಾರಿ ಕೂಡಾ ಮುಸ್ಲಿಂ ಎಂದಾಗಲೀ, ಪಾಕಿಸ್ತಾನ ಎಂದಾಗಲೀ ಬಳಸಿಲ್ಲ’ ಎಂದರು.
ಇದೇ ವೇಳೆ ಚಿತ್ರ ಸರ್ಕಾರದ ಪ್ರಾಯೋಜಿತ ಎಂಬ ಟೀಕೆಗೆ ಉತ್ತರಿಸಿದ ಅವರು ‘ ಚಿತ್ರ ಬಿಡುಗಡೆಯಾದ ಮೊದಲ 4 ದಿನದಲ್ಲೇ ಯಶಸ್ಸಿನ ಹಾದಿ ಹಿಡಿದಿತ್ತು. ಆಗಲೇ ಅದು ಇತಿಹಾಸ ನಿರ್ಮಿಸುವ ಸುಳಿವು ನೀಡಿತ್ತು. ಅಲ್ಲಿಯವರೆಗೂ ಯಾರೂ ಅದನ್ನು ಸರ್ಕಾರಿ ಪ್ರಾಯೋಜಿತ ಎಂದಿರಲಿಲ್ಲ. ಆದರೆ ಪ್ರಧಾನಿಯವರು ಬೇರೊಂದು ಸನ್ನಿವೇಶದಲ್ಲಿ ಚಿತ್ರದ ಬಗ್ಗೆ ಮಾತನಾಡಿದಾಗ ಎಲ್ಲರೂ ಚಿತ್ರವನ್ನು ಸರ್ಕಾರಿ ಪ್ರಾಯೋಜಿತ ಎಂದು ಟೀಕಿಸತೊಡಗಿದರು’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ