
ನ್ಯೂಯಾರ್ಕ್(ಮಾ.07): ಉಕ್ರೇನಿನ ಮೇಲೆ ಅಪ್ರಚೋದಿತವಾಗಿ ದಾಳಿ ನಡೆಸಿದ್ದಕ್ಕಾಗಿ ರಷ್ಯಾದಲ್ಲಿ ಮಾಸ್ಟರ್ ಕಾರ್ಡ್ ಹಾಗೂ ವೀಸಾ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿವೆ ಎಂದು ಕಂಪನಿ ಶನಿವಾರ ಹೇಳಿದೆ. ರಷ್ಯಾದಲ್ಲಿ ಶೇ.74 ರಷ್ಟುಹಣಕಾಸಿನ ವಹಿವಾಟಿಗಾಗಿ ಮಾಸ್ಟರ್ ಕಾರ್ಡ್ ಹಾಗೂ ವೀಸಾಗಳನ್ನೇ ಬಳಸಲಾಗುತ್ತಿದ್ದ ಹಿನ್ನೆಲೆಯಲ್ಲಿ ಕಂಪನಿಯ ಈ ಕ್ರಮದಿಂದಾಗಿ ರಷ್ಯಾದ ಜನಸಾಮಾನ್ಯರೂ ಭಾರೀ ಬೆಲೆ ತೆರಬೇಕಾಗಿದೆ.
‘ರಷ್ಯಾದ ಬ್ಯಾಂಕುಗಳು ನೀಡಿದ ಕಾರ್ಡ್‌ಗಳನ್ನು ಸ್ಥಗಿತಗೊಳಿಸಲಾಗುವುದು. ಅಲ್ಲದೇ ಇತರೆ ದೇಶಗಳ ಮಾಸ್ಟರ್ ಕಾರ್ಡ್ ಸಹ ರಷ್ಯಾದ ಮಾರುಕಟ್ಟೆಹಾಗೂ ಎಟಿಎಂಗಳಲ್ಲಿ ಇನ್ನು ಕಾರ್ಯ ನಿರ್ವಹಿಸುವುದಿಲ’್ಲ ಎಂದು ಮಾಸ್ಟರ್ ಕಾರ್ಡ್ ಕಂಪನಿ ಹೇಳಿದೆ. ಅದರಂತೇ ಮುಂಬರುವ ದಿನಗಳಲ್ಲಿ ವೀಸಾ ಕಾರ್ಡಿನ ಎಲ್ಲ ವಹಿವಾಟುಗಳನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ವೀಸಾ ಕಂಪನಿಯ ಮುಖ್ಯಸ್ಥ ಎ.ಐ. ಕೆಲ್ಲಿ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧದ ಕರಾಳ ಮುಖ ಬಿಚ್ಚಿಟ್ಟ ಪತ್ರಕರ್ತ
ಉಕ್ರೇನಿನ ಅಧ್ಯಕ್ಷ ವ್ಲಾದಿಮಿರ್ ಜೆಲೆನ್‌ಸ್ಕಿ ರಷ್ಯಾದಲ್ಲಿ ಮಾಸ್ಟರ್ ಕಾರ್ಡ್ ಹಾಗೂ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಬೇಕು ಎಂದು ಅಮೆರಿಕದ ಶಾಸಕರೊಂದಿಗಿನ ಖಾಸಗಿ ಸಂವಾದದಲ್ಲಿ ವಿನಂತಿಸಿಕೊಂಡಿದ್ದರು. ನಂತರ ಕೇವಲ 16 ನಿಮಿಷಗಳ ಅಂತರದಲ್ಲಿ ಎರಡೂ ಕಂಪನಿಗಳು ತಮ್ಮ ಸೇವೆಯನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಿವೆ.
Russia Ukraine War: ಯುದ್ಧದ ನಡುವೆ ಭುಗಿಲೆದ್ದ ನೋ ಫ್ಲೈ ಝೋನ್ ವಿವಾದ!
ತಮ್ಮ ದೇಶದ ಮೇಲೆ ಬಾಂಬ್, ಕ್ಷಿಪಣಿ, ಶೆಲ್‌ಗಳ ಮಳೆ ಸುರಿಸುತ್ತಿರುವ ರಷ್ಯಾಗೆ ತಡೆಯೊಡ್ಡುವ ಕೊನೆಯ ಪ್ರಯತ್ನವಾಗಿ, ಉಕ್ರೇನ್ ಅನ್ನು ‘ವಿಮಾನ ಹಾರಾಟ ನಿರ್ಬಂಧಿತ ವಲಯ’ (ನೋ ಫ್ಲೈ ಜೋನ್) ಎಂದು ಘೋಷಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಅವರು ನ್ಯಾಟೋಗೆ ಮನವಿ ಮಾಡಿದ್ದಾರೆ. ಆದರೆ ಈ ಬೇಡಿಕೆಯನ್ನು ಮನ್ನಿಸಲು ನ್ಯಾಟೋ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಟೋ ವಿರುದ್ಧ ಜೆಲೆನ್‌ಸ್ಕಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ‘ನೋ ಫ್ಲೈ ಜೋನ್’ ಈಗ ಯುದ್ಧದಲ್ಲಿ ಹೊಸ ಬಿಕ್ಕಟ್ಟಿನ ವಿಷಯವಾಗಿ ಮಾರ್ಪಟ್ಟಿದೆ.
ಉಕ್ರೇನ್ ಮೇಲೆ ರಷ್ಯಾದಿಂದ ಇನ್ನಷ್ಟುದಾಳಿ ನಡೆಯಲಿದೆ, ಅದರಿಂದ ಅನಾಹುತಗಳಾಗಲಿವೆ ಎಂದು ಗೊತ್ತಿದ್ದೂ ಉಕ್ರೇನ್ ಆಗಸವನ್ನು ಮುಚ್ಚಲು ನ್ಯಾಟೋ ನಿರಾಕರಿಸಿದೆ. ತನ್ಮೂಲಕ ಉಕ್ರೇನ್‌ನ ಮತ್ತಷ್ಟುನಗರ, ಹಳ್ಳಿಗಳ ಮೇಲೆ ಬಾಂಬ್ ಹಾಕಲು ರಷ್ಯಾಗೆ ಹಸಿರು ನಿಶಾನೆ ತೋರಿದೆ ಎಂದು ಜೆಲೆನ್‌ಸ್ಕಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: Russia-Ukraine War: ನಮ್ಮನ್ನು ಇಲ್ಲಿಂದ ಕಾಪಾಡಿ: ಉಕ್ರೇನ್‌ನಲ್ಲಿ ಭಾರತೀಯರ ಆರ್ತನಾದ
ಈ ಮಧ್ಯೆ, ಉಕ್ರೇನ್ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸಿದರೆ ಮಾಸ್ಕೋ ಜತೆ ನೇರ ಸಂಘರ್ಷಕ್ಕೆ ಇಳಿದಂತಾಗುತ್ತದೆ. ಅದು ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಉಕ್ರೇನ್ ಬೇಡಿಕೆಯಂತೆ ನೋ ಫ್ಲೈ ಜೋನ್ ಪ್ರಸ್ತಾವವನ್ನು ಸಾಕಾರಕ್ಕೆ ತರಲು ನ್ಯಾಟೋ ವಿಮಾನಗಳನ್ನು ಉಕ್ರೇನ್‌ಗೆ ಕಳುಹಿಸಬೇಕು. ರಷ್ಯಾ ವಿಮಾನಗಳನ್ನು ಹೊಡೆದುರುಳಿಸಬೇಕು. ಹಾಗೆ ಮಾಡಿದರೆ, ಯುರೋಪ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧವೇ ಆರಂಭವಾಗುತ್ತದೆ. ಹಲವು ದೇಶಗಳು ಭಾಗಿಯಾಗಿ ಅಪಾರ ಜನರಿಗೆ ತೊಂದರೆಯಾಗುತ್ತದೆ ಎಂದು ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟನ್‌ಬರ್ಗ್ ಹೇಳಿದ್ದಾರೆ.
ನೋ ಫ್ಲೈ ಜೋನ್ ಎಂದರೇನು?: ನೋ ಫ್ಲೈ ಜೋನ್ ಅಥವಾ ನೋ ಫ್ಲೈಟ್ ಝೋನ್ ಎಂದರೆ ಆಗಸದ ಮೇಲೆ ಯಾವುದೇ ವಿಮಾನ ಕಾರಾರಯಚರಣೆಯನ್ನು ನಡೆಸದೇ ಇರುವುದು. ಅಂದರೆ, ಪ್ರಯಾಣಿಕ, ಸರಕು ಸಾಗಣೆ, ಮಿಲಿಟರಿ ಸೇರಿದಂತೆ ಎಲ್ಲಾ ವಿಧದ ವಿಮಾನ ಕಾರಾರಯಚರಣೆ ಅಥವಾ ಹಾರಾಟ ರದ್ದು ಎಂದರ್ಥ.
ಒಂದು ವೇಳೆ ಈ ನಿಷೇಧ ವಲಯದಲ್ಲಿ ನಿಯಮ ಉಲ್ಲಂಘಿಸಿ ಯಾವುದೇ ವಿಮಾನ ಹಾರಾಟ ಕಂಡುಬಂದರೆ ಮಿಲಿಟರಿ ಶಕ್ತಿ ಬಳಸಿ ಅದನ್ನು ಹೊಡೆದುರುಳಿಸಲಾಗುತ್ತದೆ. ಹಿಂದೆ, ಇರಾಕ್ (ಗಲ್ಫ್ ಯುದ್ಧ), ಬೋಸ್ನಿಯಾ-ಹರ್ಜೆಗೋವಿನಾ (1995ರ ಕೊಸೊವೊ ಯುದ್ಧ) ಮತ್ತು ಲಿಬಿಯಾ (2011ರ ಅಂತಾರಾಷ್ಟ್ರೀಯ ಹಸ್ತಕ್ಷೇಪದ ಸಮಯದಲ್ಲಿ) ಮೇಲೆ ನೋ ಫ್ಲೈ ಜೋನ್ ಸ್ಥಾಪಿಸಲಾಗಿತ್ತು.
ಇದನ್ನೂ ಓದಿ: Russia Ukraine Crisis: ಮತ್ತೊಂದು ಅಣುಸ್ಥಾವರ ವಶದತ್ತ ರಷ್ಯಾ!
ಉಕ್ರೇನ್ ಬೇಡಿಕೆ ಏಕೆ?: ಉಕ್ರೇನ್ ಮೇಲೆ ರಷ್ಯಾ ಭೀಕರ ಕ್ಷಿಪಣಿ, ಬಾಂಬ್, ಶೆಲ್, ರಾಕೆಟ್ ದಾಳಿ ನಡೆಸುತ್ತಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ನಷ್ಟದ ಜೊತೆಗೆ ಸಾವು ನೋವು ಉಂಟಾಗುತ್ತಿದೆ. ನ್ಯಾಟೋ ಪಡೆಗಳು ಉಕ್ರೇನ್‌ನಲ್ಲಿ ನೋ ಫ್ಲೈ ಜೋನ್ ನಿರ್ಬಂಧ ವಿಧಿಸಿದರೆ ರಷ್ಯಾದ ಬಾಂಬ್, ಕ್ಷಿಪಣಿ, ಕ್ಷಸ್ಟರ್ ಬಾಂಬ್ ದಾಳಿಯಿಂದ ಉಕ್ರೇನ್ ಪಾರಾಗಬಹುದು. ಆಗ ಸುಲಭವಾಗಿ ರಷ್ಯಾಗೆ ಪ್ರತಿರೋಧ ಒಡ್ಡಿ ಅದನ್ನು ಎದುರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ