ಅನಾರೋಗ್ಯಕ್ಕೀಡಾದಾಗ ಆಸ್ಪತ್ರೆಗೆ ತೆರಳಲೇಬೇಕು. ಆಸ್ಪತ್ರೆಗೆ ಹೋದ್ರೆ ಡಾಕ್ಟರ್ ಇಂಜೆಕ್ಷನ್ ಕೊಡ್ತಾರೆ ಅಂತ ಕೆಲವರು ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕ್ತಾರೆ. ಇನ್ನು ಸಣ್ಣ ಮಕ್ಕಳನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದ ವೇಳೆ ಇಂಜೆಕ್ಷನ್ ಕೊಡುವಾಗ ಮಕ್ಕಳು ಜೋರಾಗಿ ಕಿರುಚಾಡಿ ಅಳುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಇದೇ ರೀತಿ ವಯಸ್ಕರೊಬ್ಬರು ಜೋರಾಗಿ ಅತ್ತು ಬೊಬ್ಬೆ ಹಾಕಿದರೆ ಹೇಗಿರುತ್ತೆ? ವಿಚಿತ್ರ ಅನಿಸುವುದು ಅಲ್ಲವೇ? ಜೊತೆಗೆ ಅವರ ವರ್ತನೆಗೆ ಬಿದ್ದು ಬಿದ್ದು ನಗಬೇಕೆನಿಸುವುದು ಅಲ್ಲವೇ?
ಸಾಮಾನ್ಯವಾಗಿ ಮಕ್ಕಳು ಅಳುವುದನ್ನು ಎಲ್ಲರೂ ನೋಡಿರುತ್ತೀರಿ ಆದರೆ ದೊಡ್ಡವರು ಹೀಗೆ ಮಕ್ಕಳಂತೆ ಅತ್ತಿದ್ದನ್ನು ನೋಡಿದ್ದು ಕಡಿಮೆ. ಆದರೆ ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಅಂದಾಜು 50 ದಾಟಿದ ವ್ಯಕ್ತಿಯೊಬ್ಬರು ಜೋರಾಗಿ ಅಳುತ್ತಿರುವ ದೃಶ್ಯ ಸೆರೆಯಾಗಿದೆ. ತಪಾಸಣೆಗಾಗಿ ರಕ್ತದ ಮಾದರಿ ಸಂಗ್ರಹಿಸುವ ವೇಳೆ ಈ ಘಟನೆ ನಡೆದಿದೆ. ಹೀಗೆ ಜೋರಾಗಿ ಅತ್ತು ಕರೆದ ವ್ಯಕ್ತಿಯನ್ನು ಉತ್ತರಪ್ರದೇಶದ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ.
ಉತ್ತರಪ್ರದೇಶದ ಉನ್ನಾವೋದಲ್ಲಿರುವ ಪೊಲೀಸ್ ತರಬೇತಿ ಕ್ಯಾಂಪ್‌ನಲ್ಲಿ ಈ ವಿಡಿಯೋ ಸೆರೆಯಾಗಿದೆ. ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸ್ ರಕ್ತದ ಮಾದರಿಯನ್ನು ನೀಡಬೇಕಿತ್ತು. ಹೀಗಾಗಿ ತಪಾಸಣಾ ಕೇಂದ್ರಕ್ಕೆ ಬಂದ ಪೊಲೀಸ್ ಸಿಬ್ಬಂದಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಈ ವೇಳೆ ರಕ್ತ ಸಂಗ್ರಹಿಸಲು ಸಿರೀಂಜ್ ಹಿಡಿದು ಹತ್ತಿರ ಬಂದ ವೈದ್ಯಕೀಯ ಸಿಬ್ಬಂದಿ ನೋಡಿ ಅವರು ಜೋರಾಗಿ ಅತ್ತು ಕೂಗಾಡಲು ಶುರು ಮಾಡಿದ್ದಾರೆ. ಈ ವೇಳೆ ಮತ್ತೊಬ್ಬ ಪೊಲೀಸ್ ಅವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ವೇಳೆ ಆತ ಕೈಯನ್ನು ಜೋಡಿಸಿ ಅಳಲು ಶುರು ಮಾಡಿದ್ದಾರೆ. ಅಲ್ಲದೇ ರಕ್ತ ತೆಗೆಯದಂತೆ ಅಡ್ಡಿ ಮಾಡಿದ್ದಾರೆ. ಬಳಿಕ ಇನ್ನಿಬ್ಬರು ಪೊಲೀಸ್ ಸಿಬ್ಬಂದಿ ಅವರನ್ನು ಹಿಡಿದು ರಕ್ತದ ಮಾದರಿ ತೆಗೆದಿದ್ದಾರೆ.
ಭಾರತದಲ್ಲಿ ಮೊದಲ ಬಾರಿ ವ್ಯಕ್ತಿಯಲ್ಲಿ ವಿಶಿಷ್ಟ ಬ್ಲಡ್ ಗ್ರೂಪ್ ಪತ್ತೆ !
ವೈದ್ಯರು ಸೂಜಿಯನ್ನು ಹಾಕಿದ ತಕ್ಷಣ ಪೊಲೀಸ್ ಅಳುವುದರ ಜೊತೆ ಕೇಳುಗರು ನಗುವಂತೆ ಕೆಲವು ತಮಾಷೆಯ ಶಬ್ದಗಳನ್ನು ಮಾಡಲು ಪ್ರಾರಂಭಿಸಿದರು, ಇದು ಅವರ ಸಹೋದ್ಯೋಗಿಗಳನ್ನು ನಗೆಗಡಲಲ್ಲಿ ತೇಲಿಸಿತು. ಅದಾಗ್ಯೂ ವೈದ್ಯರು ರಕ್ತದ ಸ್ಯಾಂಪಲ್ ತೆಗೆದು ಅವನ ರಕ್ತನಾಳದ ಮೇಲೆ ಹತ್ತಿಯನ್ನು ಹಾಕಿದರು. ಬಳಿಕ ಅವರ ತೋಳನ್ನು ಮಡಚಿ, ಬೆನ್ನು ತಟ್ಟಿ ಸಮಾಧಾನಪಡಿಸಿದರು. ನಂತರ ಇತರ ಪೊಲೀಸರು ಅವನ ಕೈಯನ್ನು ಬಿಟ್ಟುಬಿಟ್ಟರು . ಇತರ ಪೊಲೀಸ್ ಸಿಬ್ಬಂದಿ ನಗುವ ಜೊತೆ ಆತನ ಕಣ್ಣೀರು ಒರೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಮೇಲ್ಮುಖವಾಗಿ ಚಲಿಸುವ ನೀರು... ನಾನೆಘಾಟ್ ಜಲಾಶಯದ ಅದ್ಭುತ ದೃಶ್ಯಕಾವ್ಯ
ಜನ ಸಾಮಾನ್ಯ ಅತ್ತಿದ್ದರೆ ಇದು ದೊಡ್ಡ ವಿಚಾರ ಎನಿಸುತ್ತಿರಲಿಲ್ಲ. ಆದರೆ ಶಿಸ್ತು ಹಾಗೂ ಗಾಂಭೀರ್ಯತೆಗೆ ಹೆಸರಾದ ಪೊಲೀಸ್ ಇಲಾಖೆಯ ಸಿಬ್ಬಂದಿ ಹೀಗೆ ಮಕ್ಕಳಂತೆ ಜೋರಾಗಿ ಅತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಪೊಲೀಸ್ ವೃತ್ತಿ ಸ್ವಲ್ಪ ಕಠಿಣವೆನಿಸುವ ಕೆಲಸ. ಅಲ್ಲಿ ಅಳುವಿಗೆಲ್ಲಾ ಜಾಗವಿಲ್ಲ. ಏಳು ಎಂದಾಗ ಎದ್ದು ಕೂರು ಎಂದಾಗ ಕೂತು ಅಭ್ಯಾಸವಿರುತ್ತದೆ. ಇಲಾಖೆಯೂ ತುಂಬಾ ಸಧೃಡವಾಗಿ ತನ್ನ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡುತ್ತಿರುತ್ತದೆ. ಮಾನಸಿಕವಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿ ಸಧೃಡವಾಗಿರುತ್ತಾರೆ. ಅಂತಹ ಇಲಾಖೆಯ ಸಿಬ್ಬಂದಿ ಒಬ್ಬರು ಹೀಗೆ ಅತ್ತಿರುವುದು ಅಚ್ಚರಿ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ