
ವಾರಣಾಸಿ (ಡಿ. 23): ಪ್ರಧಾನಿ ನರೇಂದ್ರ ಮೋದಿ (Narendra Modi)ಅವರ ಸ್ವಕ್ಷೇತ್ರ ವಾರಣಾಸಿ (Varanasi) ಹೊಸ ಹೊಸ ಯೋಜನೆಗಳ ಕಾರಣದಿಂದಾಗಿ ಪ್ರತಿ ನಿತ್ಯ ಸುದ್ದಿಯಾಗುತ್ತಿದೆ. ಕಾಶಿ ವಿಶ್ವನಾಥ ಧಾಮ ನವೀಕರಣ, ದೆಹಲಿ-ವಾರಣಾಸಿ ಹೈಸ್ಪೀಡ್ ರೈಲು ಯೋಜನೆಗಳ ಬಳಿಕ ಈಗ ರೋಪ್ ವೇ ಕಾರಣದಿಂದಾಗಿ ಸುದ್ದಿಯಾಗಿದೆ. ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ವಾರಣಾಸಿ ರೋಪ್ ವೇ (Varanasi Ropeway project)ಕಾಮಗಾರಿಗೆ ಮುಂದಿನ ವರ್ಷ ಚಾಲನೆ ಸಿಗುವುದು ನಿಶ್ಚಿತವಾಗಿದೆ. ಅದರೊಂದಿಗೆ ಇನ್ನು ಮುಂದೆ ಕಾಶಿಯ ದೈವ ಪ್ರಪಂಚವನ್ನು ಆಗಸದಿಂದಲೂ ವೀಕ್ಷಣೆ ಮಾಡಬಹುದಾಗಿದೆ.
ಮೊದಲ ಹಂತದ ಕಾಮಗಾರಿಯಲ್ಲಿ ಕಾಶಿಯ ಕಂಟೋನ್ಮೇಟ್ ಸ್ಟೇಷನ್ ನಿಂದ (Cantt station ) ಗೊಡೌಲಿಯಾವರೆಗೆ (Godauliya)ರೋಪ್ ವೇ ನಿರ್ಮಾಣವಾಗಲಿದೆ. ಆ ಮೂಲಕ ಲಾಪಜ್ (Lapaz ) ಹಾಗೂ ಮೆಕ್ಸಿಕೋ (Mexico) ಬಳಿಕ ದಿನನಿತ್ಯದ ಪ್ರಯಾಣಕ್ಕೆ ಜನರು ರೋಪ್ ವೇ ಬಳಕೆ ಮಾಡುವ ವಿಶ್ವದ ಮೂರನೇ ನಗರ ಎನ್ನುವ ಖ್ಯಾತಿಗೆ ಕಾಶಿ ಭಾಜನವಾಗಲಿದೆ. ಚಿಕ್ಕಚಿಕ್ಕ ದಾರಿಗಳು, ಗಲ್ಲಿಗಳು ಕಾಶಿಯ ನಿಜವಾದ ಗುರುತು ಎಂದು ಹೇಳಬಹುದಾದರೂ, ಪ್ರತಿನಿತ್ಯ ಬರುವ ಪ್ರವಾಸಿಗರು ಹಾಗೂ ಭಕ್ತಾದಿಗಳಿಂದ ಸಾಕಷ್ಟು ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಸ್ಥಳೀಯ ಆಡಳಿತ ಕೂಡ ವಾಹನಗಳ ಸುಗಮ ಸಂಚಾರಕ್ಕೆ ಹರಸಾಹಸ ಪಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸ್ಥಳೀಯ ಆಡಳಿತ ಭೂ ಮಾರ್ಗದ ಮೂಲಕ ನಡೆಸುವ ಸಾರಿಗೆ ಬದಲು ವಾಯುಮಾರ್ಗದ ಸಾರಿಗೆಯ ಬಗ್ಗೆ ಗಮನಕೇಂದ್ರೀಕರಿಸಿದೆ.
ರೋಪ್ ವೇ ಕಾಮಗಾರಿ ಮುಗಿದ ಬಳಿಕ ಕಾಶಿಯ ಆಗಸದಿಂದ ಜನರು ಗಂಗಾ ನದಿಯ (Ganga) ವೈಭವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ. ಗಂಟೆಗಳ ಕಾಲ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಪರಿಸ್ಥಿತಿಯೂ ಪ್ರವಾಸಿಗರಿಗೆ ಇರುವುದಿಲ್ಲ. ಆಕಾಶದಿಂದಲೇ ವಿಶ್ವನಾಥನ ಸನ್ನಿಧಿಯನ್ನು(Vishwanath Temple)ನೋಡುವ ಅವಕಾಶ ಇದರಿಂದ ಸಿಗಲಿದೆ. ಸ್ವತಃ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ಇದಾಗಿರುವುದರಿಂದ, ಕಂಟೋನ್ಮೆಂಟ್ ಸ್ಟೇಷನ್ ನಿಂದ ಗೊಡೌಲಿಯಾವರೆಗೆ ಮೊದಲ ಹಂತದ ರೋಪ್ ವೇ ಕಾಮಗಾರಿ ನಡೆಸುವಂತೆ ಅವರಿಂದಲೇ ಸೂಚನೆ ಸಿಕ್ಕಿದೆ.
ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣ ಮಾಡಲು ತೀರ್ಮಾನ
ಇದರಿಂದಾಗಿ ವಿಶ್ವನಾಥನ ಸನ್ನಿದಿ ಹಾಗೂ ಗಂಗಾ ಘಾಟ್ ಗೆ ಪ್ರವಾಸಿಗರು ಹಾಗೂ ಭಕ್ತಾದಿಗಳು ಯಾವುದೇ ಸಮಸ್ಯೆಯಿಲ್ಲದೆ ತೆರಳಲು ಸಾಧ್ಯವಾಗಲಿದೆ. ಕಾಶಿ ಕ್ಷೇತ್ರದ ಮೂಲ ಅಂಶವನ್ನು ಉಳಿಸಿಕೊಂಡು ಇಡೀ ನಗರವನ್ನು ಜಪಾನ್ ನ ಕ್ಯೋಟೋ (Kyoto) ಮಾದರಿಯಲ್ಲಿ ಬದಲಾವಣೆ ಮಾಡುವ ಮೋದಿ ಅವರ ಮಹತ್ವಾಕಾಂಕ್ಷೆಯ ಮತ್ತೊಂದು ಯೋಜನೆ ಇದಾಗಿದೆ.
ರೋಪ್ ವೇ ವಿಶೇಷತೆಗಳೇನು: ಭೂಮಟ್ಟದಿಂದ 45 ಮೀಟರ್ ಎತ್ತರದಲ್ಲಿ ರೋಪ್ ವೇ ನಿರ್ಮಾಣವಾಗಲಿದೆ. ಒಟ್ಟು ನಾಲ್ಕು ಕಿಲೋಮೀಟರ್ ದೂರದ ಮಾರ್ಗ ಇದಾಗಿರಲಿದೆ. ಇದರಲ್ಲಿ ಒಟ್ಟು 220 ಟ್ರಾಲಿಗಳು ಇರಲಿದ್ದು, ಒಂದು ಟ್ರಾಲಿಯಲ್ಲಿ ಗರಿಷ್ಠ 10 ಜನ ಕುಳಿತು ಪ್ರಯಾಣ ಮಾಡಬಹುದಾಗಿದೆ. ಕಂಟೋನ್ಮೆಂಟ್ ಸ್ಟೇಷನ್ ನಿಂದ ಗೊಡೌಲಿಯಾವರೆಗೆ ಒಟ್ಟು ನಾಲ್ಕು ಸ್ಟೇಷನ್ ಗಳು ಸಿಗಲಿವೆ.
ಉತ್ತರ ಕನ್ನಡ: ಜೋಯಿಡಾದಲ್ಲಿ ದೇಶದ ಅತಿದೊಡ್ಡ ರೋಪ್ ವೇ..!
ಕಂಟೋನ್ಮೆಂಟ್ ಹಾಗೂ ಗೊಡೌಲಿಯಾ ಅಲ್ಲದೆ, ಸಾಜನ್ ತಿರಾಹಾ ಹಾಗೂ ರಥ ಯಾತ್ರಾ ಸ್ಟೇಷನ್ ಗಳು ಇರಲಿದೆ. ಪ್ರತಿ ಒಂದೂವರೆ ಅಥವಾ ಎರಡು ನಿಮಿಷಕ್ಕೆ ಪ್ರಯಾಣಿಕರು ಟ್ರಾಲಿಗಳನ್ನು ಪಡೆದುಕೊಳ್ಳಲಿದ್ದಾರೆ. ಎರಡೂ ಬದಿಯಿಂದ ಒಟ್ಟು 8 ಸಾವಿರ ಪ್ರಯಾಣಿಕರು ಸಾಗುವ ಮಾರ್ಗ ಇದಾಗಿದೆ. ಇನ್ನು ರಾತ್ರಿಯ ವೇಳೆಯಲ್ಲೂ ರೋಪ್ ವೇ ವ್ಯವಸ್ಥೆ ಇರುವುದರಿಂದ, ಕಾಶಿ ಹಾಗೂ ಗಂಗಾ ನದಿಯ ವೈಭವವನ್ನು ರಾತ್ರಿಯಲ್ಲೂ ಕಣ್ತುಂಬಿಕೊಳ್ಳಬಹುದು.
400 ಕೋಟಿ ರೂಪಾಯಿ ವೆಚ್ಚ: ವಾರಣಾಸಿ ವಿಭಾಗೀಯ ಜಿಲ್ಲಾಧಿಕಾರಿ ದೀಪಕ್ ಅಗರ್ ವಾಲ್ ಈ ಕುರಿತಾಗಿ ಮಾಹಿತಿ ನೀಡಿದ್ದು, ನರೇಂದ್ರ ಮೋದಿ ಅವರ ಸ್ಫೂರ್ತಿಯಿಂದ ಸಾಕಷ್ಟು ದಿನಗಳಿಂದ ಮಾತುಕತೆಯ ಹಂತದಲ್ಲಿದ್ದ ರೋಪ್ ವೇ ಯೋಜನೆಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇವೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇದನ್ನು ಅಂತಿಮ ಮಾಡಿದ ಬಳಿಕ ಹೊಸ ವರ್ಷದ ಆರಂಭದಲ್ಲಿ ಕಾಮಗಾರಿ ನಡೆಯಲಿದೆ. ಪಿಪಿಪಿ ಮಾದರಿಯಲ್ಲಿ ಒಟ್ಟು 400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಪೂರ್ಣ ಮಾಡಲಾಗುತ್ತದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ