
ಅಮೆರಿಕದ ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದಲ್ಲಿ ಶಿಸ್ತು ಕ್ರಮವನ್ನು ಎದುರಿಸಿ ದುರಂತವಾಗಿ ಆತ್ಮHತ್ಯೆ ಮಾಡಿಕೊಂಡ ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿ ವೈಭವ್ ದುಗ್ಗಲ್ ಅವರ ಪೋಷಕರು ನ್ಯಾಯಕ್ಕಾಗಿ ದೊಡ್ಡ ಮಟ್ಟದ ಹೋರಾಟವನ್ನು ಆರಂಭಿಸಿದ್ದಾರೆ. ವಿಶ್ವವಿದ್ಯಾಲಯದ ದೋಷಪೂರಿತ ಶಿಸ್ತು ಪ್ರಕ್ರಿಯೆ ಮತ್ತು ಮಾನಸಿಕ ಬೆಂಬಲದ ವೈಫಲ್ಯವೇ ತಮ್ಮ ಮಗನ ಸಾವಿಗೆ ಕಾರಣ ಎಂದು ಆರೋಪಿಸಿರುವ ಕುಟುಂಬವು, ಸಂಸ್ಥೆಯಿಂದ 30 ಮಿಲಿಯನ್ ಡಾಲರ್ ಪರಿಹಾರದ ಜೊತೆಗೆ ವಿಶ್ವವಿದ್ಯಾಲಯದ ನೀತಿಗಳಲ್ಲಿ ಮಹತ್ವದ ಸುಧಾರಣೆಗಳನ್ನು ಕೋರಿದೆ.
ಎಲ್ ಪಾಸೊದಲ್ಲಿರುವ ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ಕೇಂದ್ರದಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ 24 ವರ್ಷದ ವೈಭವ್ ದುಗ್ಗಲ್, ಜುಲೈ 2025 ರಲ್ಲಿ ಆತ್ಮHತ್ಯೆ ಮಾಡಿಕೊಂಡಿದ್ದರು. ಮಗನನ್ನು ಕಳೆದುಕೊಂಡು ಒಂದು ವರ್ಷ ಕಳೆದ ನಂತರವೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಟುಂಬವು, ವಿಶ್ವವಿದ್ಯಾಲಯದ ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಲಿಲ್ಲ ಮತ್ತು ಸರಿಯಾದ ಕಾನೂನು ಪ್ರಕ್ರಿಯೆಯನ್ನು (Due Process) ನಿರಾಕರಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ.
ಒಬ್/ಜಿವೈಎನ್ (OB/GYN) ಚಿಕಿತ್ಸಾಲಯದಲ್ಲಿ ಕ್ಲಿನಿಕಲ್ ತರಬೇತಿಯಲ್ಲಿದ್ದಾಗ ವೈಭವ್ ದುಗ್ಗಲ್ ವಿರುದ್ಧ ಶಿಸ್ತು ಕ್ರಮ ಆರಂಭವಾಗಿತ್ತು. ಎಸ್‌ಟಿಡಿ (STD) ಪರೀಕ್ಷೆಗಾಗಿ ಚಿಕಿತ್ಸಾಲಯಕ್ಕೆ ಬಂದಿದ್ದ ಮಹಿಳಾ ರೋಗಿಯೊಬ್ಬರು ವೈದ್ಯಕೀಯ ಇತಿಹಾಸದ ಸಂದರ್ಭದಲ್ಲಿ ತನ್ನ ಸಂಬಂಧದ ಬಗ್ಗೆ ದುಗ್ಗಲ್ ಬಳಿ ಮಾತನಾಡಿದ್ದರು. ವೈದ್ಯಕೀಯ ತರಬೇತಿಯ ಭಾಗವಾಗಿ ಮತ್ತು ರೋಗಿಯ ಒಪ್ಪಿಗೆಯ ಮೇರೆಗೆ ದುಗ್ಗಲ್ ಪರೀಕ್ಷಾ ಕೋಠಡಿಯಲ್ಲಿದ್ದರು. ಇಬ್ಬರೂ ವೃತ್ತಿಪರರಾಗಿದ್ದರಿಂದ ಸ್ವಯಂಪ್ರೇರಣೆಯಿಂದ ಇನ್‌ಸ್ಟಾಗ್ರಾಮ್ ಖಾತೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ಆದರೆ ಇದು ವೃತ್ತಿಪರ ಮಿತಿಗಳನ್ನು ಮೀರುವ ಸಾಧ್ಯತೆಯಿದೆ ಎಂದು ಅರಿತ ಕೂಡಲೇ ದುಗ್ಗಲ್ ಆ ರೋಗಿಯನ್ನು ಅನ್‌ಫಾಲೋ ಮಾಡಿ ಬ್ಲಾಕ್ ಮಾಡಿದ್ದರು. ಅಪಾಯಿಂಟ್ಮೆಂಟ್ ಮುಗಿದ 4 ಗಂಟೆಗಳ ನಂತರ ರೋಗಿಯು ತನಗೆ ಅನಾನುಕೂಲವಾಯಿತು ಎಂದು ದೂರು ನೀಡಿದರು. ಕೆಲವೇ ದಿನಗಳಲ್ಲಿ ದುಗ್ಗಲ್ ಅವರನ್ನು ಚಿಕಿತ್ಸಾಲಯದಿಂದ ಹೊರಹಾಕಿ ಕಠಿಣ ತನಿಖೆಗೆ ಒಳಪಡಿಸಲಾಯಿತು.
ವಿಶ್ವವಿದ್ಯಾಲಯದ ತನಿಖೆ ತೀವ್ರಗೊಂಡಂತೆ ವೈಭವ್ ತೀವ್ರ ಮಾನಸಿಕ ಒತ್ತಡಕ್ಕೊಳಗಾದರು. ವೈದ್ಯಕೀಯ ಶಾಲೆಯಿಂದ ತಮ್ಮನ್ನು ವಜಾಗೊಳಿಸಲಾಗುತ್ತದೆ ಎಂಬ ಭೀತಿ ಮತ್ತು ಅಪಮಾನವನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಆತ್ಮHತ್ಯೆ ಪತ್ರದಲ್ಲಿ, ನಾನು ಒಳ್ಳೆಯ ಮಗನಾಗುವಲ್ಲಿ ವಿಫಲನಾಗಿದ್ದೇನೆ. ವೃತ್ತಿಪರತೆಯ ಕೊರತೆಯಿಂದ ಶಾಲೆಯಿಂದ ವಜಾಗೊಳ್ಳುವ ಭೀತಿಯಲ್ಲಿದ್ದೇನೆ ಎಂದು ಅವರು ನೋವು ತೋಡಿಕೊಂಡಿದ್ದರು. ವಿಶ್ವವಿದ್ಯಾಲಯದ ಮೂಲಕ ಮಾನಸಿಕ ಆರೋಗ್ಯ ಸೇವೆಗಳನ್ನು ಪಡೆಯಲು ಪ್ರಯತ್ನಿಸಿದರೂ ಅವರಿಗೆ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ಒತ್ತಡವನ್ನು ತಡೆಯಲಾರದೆ ಅವರು ಬಂದೂಕನ್ನು ಖರೀದಿಸಿ ಅಸುನೀಗಿದರು.
ವೈಭವ್ ದುಗ್ಗಲ್ ಸಂಸ್ಥೆಯ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದು, $60,000 ವಿದ್ಯಾರ್ಥಿವೇತನವನ್ನು ಪಡೆದಿದ್ದರು. ವಿಶ್ವವಿದ್ಯಾಲಯವು ಅವರನ್ನು ತೀವ್ರ ಸಂಕಷ್ಟಕ್ಕೆ ತಳ್ಳುವ ವಾತಾವರಣವನ್ನು ಸೃಷ್ಟಿಸಿದೆ ಎಂದು ಪೋಷಕರು ದಾಖಲಿಸಿರುವ ಮೊಕದ್ದಮೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ವೈಭವ್ ಅವರ ಗೆಳತಿ ಕೂಡ ವಿಶ್ವವಿದ್ಯಾಲಯದ ವಿರುದ್ಧ ಪ್ರತ್ಯೇಕ ಮೊಕದ್ದಮೆ ಹೂಡಿದ್ದಾರೆ. ರೋಗಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನುಸರಿಸಿರುವುದರ ಬಗ್ಗೆ ವೈಭವ್ ಮೊದಲೇ ತಮಗೆ ತಿಳಿಸಿದ್ದಾಗಿ ಮತ್ತು ಅದನ್ನು ತಕ್ಷಣವೇ ಬ್ಲಾಕ್ ಮಾಡಲು ತಾವೇ ಸಲಹೆ ನೀಡಿರುವುದಾಗಿ ಅವರು ನ್ಯಾಯಾಲಯದ ದಾಖಲೆಗಳಲ್ಲಿ ತಿಳಿಸಿದ್ದಾರೆ. ವೈಭವ್ ನಿಗದಿತ ಕ್ಲಿನಿಕ್ ಅಪಾಯಿಂಟ್ಮೆಂಟ್‌ಗೆ ಬಾರದೆ ಇದ್ದಾಗ ಉಂಟಾದ ಆತಂಕದ ಬಳಿಕ ಈ ದುರ್ಘಟನೆ ಬೆಳಕಿಗೆ ಬಂದಿತು.
"ಬೇರೆ ಯಾವುದೇ ವಿದ್ಯಾರ್ಥಿಗೆ ಇಂತಹ ಪರಿಸ್ಥಿತಿ ಬರಬಾರದು. ವಿಶ್ವವಿದ್ಯಾಲಯವು ತಕ್ಕ ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಮತ್ತು ಸ್ವತಂತ್ರ ಪರಿಶೀಲನೆ ಹಾಗೂ ಉತ್ತಮ ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆಯನ್ನು ಜಾರಿಗೆ ತರಬೇಕು" ಎಂದು ದುಗ್ಗಲ್ ಅವರ ಪೋಷಕರು ಆರಂಭಿಸಿರುವ ವಕಾಲತ್ತು ಅಭಿಯಾನವು ಬಲವಾಗಿ ಆಗ್ರಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ