ಲಸಿಕೆ ಪಡೆದವರಿಗೆ ಗುಡ್‌ ನ್ಯೂಸ್: ಅಧ್ಯಯನದಲ್ಲಿ ಬಯಲಾಯ್ತು ಅಚ್ಚರಿಯ ಮಾಹಿತಿ!

By Suvarna NewsFirst Published Jul 18, 2021, 11:15 AM IST
Highlights

* ಡೆಲ್ಟಾವಿರುದ್ಧ ಲಸಿಕೆ ಶೇ.99ರಷ್ಟುಪರಿಣಾಮಕಾರಿ

* ಲಸಿಕೆ ಪಡೆದವರಲ್ಲೂ ಸೋಂಕಿಗೆ ಡೆಲ್ಟಾರೂಪಾಂತರಿ ಪ್ರಮುಖ ಕಾರಣ

* ಆದರೆ ಲಸಿಕೆ ಪಡೆದರೆ ಸಾವು ಸಾಧ್ಯತೆ ತೀರಾ ಕಮ್ಮಿ

* ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಕಡಿಮೆ

* ಲಸಿಕೆ ಪಡೆದವರಲ್ಲೂ ಸೋಂಕಿಗೆ ಕಾರಣ ಪತ್ತೆ ಅಧ್ಯಯನದಲ್ಲಿ ಬೆಳಕಿಗೆ

ಮುಂಬೈ/ಪುಣೆ(ಜು.18): ಲಸಿಕೆಯ ಎರಡೂ ಡೋಸ್‌ ಪಡೆದವರಲ್ಲೂ ಸೋಂಕು ಕಾಣಿಸಿಕೊಳ್ಳಲು ಕಾರಣವೇನು ಎಂದು ತಿಳಿಯಲು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ, ಕರ್ನಾಟಕದ 181 ಸೋಂಕಿತರಿ ಸೇರಿದಂತೆ ದೇಶದ 244 ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಿದೆ. ಈ ವೇಳೆ ಡೆಲ್ಟಾತಳಿಯ ವೈರಸ್‌ ಮೇಲೆ ಲಸಿಕೆ ಶೇ.99ರಷ್ಟುಪರಿಣಾಮಕಾರಿಯಾಗಿದ್ದು, ಸಾವಿನಿಂದ ಅವರನ್ನು ರಕ್ಷಿಸಿದೆ ಎಂಬ ಮಹತ್ವದ ಅಂಶ ದೃಢಪಟ್ಟಿದೆ.

ವಿಶ್ವದಲ್ಲೇ ಅತ್ಯಂತ ಸೋಂಕುಕಾರಕ ಎಂಬ ಕಳಂಕ ಹೊಂದಿರುವ ಡೆಲ್ಟಾವೈರಸ್‌, ಒಂದು ಅಥವಾ ಎರಡೂ ಡೋಸ್‌ ಲಸಿಕೆ ಪಡೆದವರಲ್ಲೂ ಸೋಂಕು ಹಬ್ಬಲು ಪ್ರಮುಖ ಕಾರಣ ಎಂದು ಅಧ್ಯಯನ ವರದಿ ಹೇಳಿದೆ. ಆದರೆ ಲಸಿಕೆ ಡೆಲ್ಟಾವೈರಸ್‌ ವಿರುದ್ಧ ಶೇ.99ರಷ್ಟುಪರಿಣಾಮಕಾರಿ ಕೂಡಾ ಹೌದು. ಸೋಂಕು ಕಾಣಿಸಿಕೊಂಡರೂ, ಲಸಿಕೆ ಪಡೆದಿರುವ ಕಾರಣ ಅಂಥ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವ ಅಥವಾ ಸೋಂಕಿನಿಂದ ಸಾವನ್ನಪ್ಪುವ ಸಾಧ್ಯತೆ ತೀರಾ ಕಡಿಮೆ ಎಂದು ವಿವರಿಸಿದೆ.

ಬ್ರೇಕ್‌ಥ್ರೂ ಇನ್ಪೆಕ್ಷನ್ಸ್‌ (ಲಸಿಕೆ ಪಡೆದವರಲ್ಲೂ ಸೋಂಕು) ಅಧ್ಯಯನವು, ಲಸಿಕೆಯ ಮಹತ್ವವನ್ನು, ಇರುವ ಲಸಿಕೆಯನ್ನು ಹೇಗೆ ಬಳಸಬೇಕು ಎಂಬುದನ್ನು ಮತ್ತು ಹೊಸ ಹೊಸ ರೂಪಾಂತರಿಗಳಿಗೆ ಅನುಗುಣವಾಗಿ ಲಸಿಕೆಯನ್ನು ಹೇಗೆ ಮರು ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ವರದಿ ಹೇಳಿದೆ.

ಅಧ್ಯಯನ ಹೇಳಿದ್ದೇನು?:

- ಕರ್ನಾಟಕದಿಂದ ಗರಿಷ್ಠ 181, ಬಂಗಾಳದಿಂದ ಕನಿಷ್ಠ 10 ಮತ್ತು ಮಹಾರಾಷ್ಟ್ರದಿಂದ 53 ಸೋಂಕಿತರ ಮಾದರಿಯನ್ನು ಅಧ್ಯಯನಕ್ಕೆ ಬಳಸಲಾಗಿತ್ತು.

- ಯಾರಿಂದ ಮಾದರಿ ಸಂಗ್ರಹಿಸಲಾಗಿತ್ತೋ ಅವರೆಲ್ಲಾ ಒಂದು ಅಥವಾ ಎರಡು ಡೋಸ್‌ ಲಸಿಕೆ ಪಡೆದ ಬಳಿಕ ಕೊರೋನಾ ಸೋಂಕಿಗೆ ತುತ್ತಾಗಿದ್ದರು.

- ಸೋಂಕಿತರ ಪೈಕಿ ಬಹುತೇಕರಲ್ಲಿ ಡೆಲ್ಟಾವೈರಸ್‌ ಪತ್ತೆಯಾಗಿತ್ತು. ಜೊತೆಗೆ ಡೆಲ್ಟಾಪಸ್‌್ಲ, ಆಲ್ಪಾ, ಬೀಟಾ, ಕಪ್ಪಾ ರೂಪಾಂತರಿಗಳೂ ಕಂಡುಬಂದಿದ್ದವು.

- ಅತ್ಯಂತ ಸಾಂಕ್ರಾಮಿಕ ಡೆಲ್ಟಾವೈರಸ್‌ ತಗುಲಿದ್ದೂ, ಲಸಿಕೆ ಪಡೆದ ಪರಿಣಾಮ ಅದು ಆಸ್ಪತ್ರೆ ದಾಖಲು, ಸಾವಿನಿಂದ ಶೇ.99ರಷ್ಟುರಕ್ಷಣೆ ನೀಡಿತ್ತು.

- ಸೋಂಕಿಗೆ ತುತ್ತಾದವರಲ್ಲಿ ಶೇ.9.8ರಷ್ಟುಜನ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದರೆ, ಸೋಂಕಿನಿಂದ ಸಾವಿನ ಪ್ರಮಾಣ ಕೇವಲ ಶೇ.0.4ರಷ್ಟಿತ್ತು.

click me!