* ಲಸಿಕೆ ಪಡೆದವರಲ್ಲಿ ಸಾವು ಕಡಿಮೆ!, ಲಸಿಕೆ ಕರಾಮತ್ತು
* 2ನೇ ಅಲೆಯ ವೇಳೆ 50 ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ ಭಾರಿ ಇಳಿಕೆ ಕಾರಣ ವ್ಯಾಕ್ಸಿನ್: ತಜ್ಞರು
* ಮೊದಲ ಅಲೆ ವೇಳೆ 10212 ಹಿರಿಯರು ಬಲಿ, ಭೀಕರ 2ನೇ ಅಲೆಯಲ್ಲಿ 7832 ಸಾವು
ರಾಕೇಶ್ ಎನ್.ಎಸ್.
ಬೆಂಗಳೂರು(ಮೇ.22): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಘಾತಕ ಸ್ವರೂಪ ಪಡೆದಿದ್ದರೂ ಲಸಿಕೆ ಪಡೆಯುವ ಅವಕಾಶ ಹೊಂದಿದ್ದ ವಯೋಮಾನದವರಲ್ಲಿ ಸಾವಿನ ದರ ಮೊದಲ ಅಲೆಗಿಂತ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೇ ವೇಳೆ ಲಸಿಕೆ ಪಡೆಯುವ ಅವಕಾಶ ಇಲ್ಲದ ವಯೋಮಾನದವರಲ್ಲಿ ಸಾವಿನ ದರ ಮೊದಲ ಅಲೆಯಷ್ಟೆಇದೆ.
undefined
ಆರೋಗ್ಯ ತಜ್ಞರ ಪ್ರಕಾರ, ಈ ವರ್ಷ ಮೊದಲ ಬಾರಿಗೆ ಮಾಚ್‌ರ್ 28ರಂದು 3,000ಕ್ಕಿಂತ ಹೆಚ್ಚು ಕೊರೋನಾ ಪ್ರಕರಣ ವರದಿಯಾಗಿದ್ದವು. ಅದನ್ನು ಎರಡನೇ ಅಲೆಯ ಪ್ರಾರಂಭ ಎಂದು ಪರಿಗಣಿಸುವುದಾದರೆ, 2020ರ ಮಾರ್ಚ್ 8ರಿಂದ 2021ರ ಮಾಚ್‌ರ್ 27ರವರೆಗಿನ ಅವಧಿಯನ್ನು ಮೊದಲ ಅಲೆ ಏರಿ ತಗ್ಗಿದ ಅವಧಿ ಎಂದು ಪರಿಗಣಿಸಬಹುದು. ಈ ಅವಧಿಯಲ್ಲಿನ ಅಂಕಿ-ಅಂಶವನ್ನು ಪರಿಗಣಿಸಿದಾಗ ಮೊದಲ ಅಲೆಯಲ್ಲಿ 50 ವರ್ಷದೊಳಗಿನ 2,205 ಮಂದಿ ಮತ್ತು 50 ವರ್ಷ ಮೇಲ್ಪಟ್ಟ10,212 ಮಂದಿ ಮೃತರಾಗಿದ್ದಾರೆ. ಎರಡನೇ ಅಲೆಯಲ್ಲಿ ಮಾಚ್‌ರ್ 28ರಿಂದ ಮೇ 17ರವರೆಗೆ 50 ವರ್ಷದೊಳಗಿನ 2,304 ಮಂದಿ ಮತ್ತು 50 ವರ್ಷ ಮೇಲ್ಪಟ್ಟ7,832 ಮಂದಿ ಮೃತರಾಗಿದ್ದಾರೆ.
ಅಂದರೆ, 50 ವರ್ಷಕ್ಕಿಂತ ಕೆಳಗಿನವರ ಮರಣ ದರ ಬಹುತೇಕ ಮೊದಲ ಅಲೆಯಷ್ಟೇ ಇದೆ. ಆದರೆ ಹಾಸಿಗೆ ಕೊರತೆ, ಆಮ್ಲಜನಕ ಸಮಸ್ಯೆ, ಔಷಧಿಯ ಅಲಭ್ಯತೆ ಮುಂತಾದ ಘೋರ ಸಮಸ್ಯೆಗಳ ಮಧ್ಯೆಯೂ ಹಿರಿಯ ನಾಗರಿಕರ ಮರಣ ದರದಲ್ಲಿ ಕುಸಿತವಾಗಿದೆ. ತಜ್ಞರ ಪ್ರಕಾರ, ಕೋವಿಡ್ ಲಸಿಕೆಯಿಂದಾಗಿ ರಾಜ್ಯದಲ್ಲಿ 50 ವರ್ಷ ಮೇಲ್ಪಟ್ಟಸುಮಾರು 6 ಸಾವಿರ ನಾಗರಿಕರ ಜೀವ ಉಳಿದಿದೆ. ಎರಡನೇ ಅಲೆಯಲ್ಲಿ 50 ವರ್ಷ ಮೇಲ್ಪಟ್ಟ3.42 ಲಕ್ಷ ಮಂದಿ ಸೋಂಕಿನಿಂದ ಬಾಧಿತರಾಗಿದ್ದಾರೆ. ಈ ವಯೋಮಾನದ ಸಾವಿನ ದರ ಶೇ.2.13 ಇದೆ. ಮೊದಲ ಅಲೆಗೆ ಹೋಲಿಸಿದರೆ (ಶೇ.3.70) ಈ ವರ್ಗದ ಸಾವಿನ ದರದಲ್ಲಿ ಶೇ.1.57ರಷ್ಟುಕಡಿಮೆಯಾಗಿದೆ. ಒಂದು ವೇಳೆ ಈ ಕುಸಿತ ದಾಖಲಾಗದೆ ಇರುತ್ತಿದ್ದರೆ ಹಿರಿಯ ನಾಗರಿಕರ ಸಾವಿನ ಪ್ರಮಾಣ 13 ಸಾವಿರ ದಾಟಿರುತ್ತಿತ್ತು!
ಯುವಕರ ಮರಣ ದರ ಯಥಾಸ್ಥಿತಿ:
9 ವರ್ಷದೊಳಗಿನ ಮಕ್ಕಳು ಮತ್ತು 20ರಿಂದ 29 ವರ್ಷದೊಳಗಿನ ಯುವಕರಲ್ಲಿ ಎರಡೂ ಅಲೆಯಲ್ಲಿಯೂ ಶೇ. 0.1ರ ಮರಣ ದರ ಇದೆ. 10 ರಿಂದ 19 ವರ್ಷದೊಳಗಿನವರಲ್ಲಿ ಮೊದಲ ಅಲೆಯಲ್ಲಿ ಶೇ.0.1ರ ಮರಣ ದರ ಇದ್ದರೆ, ಎರಡನೇ ಅಲೆಯಲ್ಲಿ ತುಸು ಕುಸಿತ ದಾಖಲಾಗಿದೆ. ಇನ್ನು 30ರಿಂದ 39 ವರ್ಷದೊಳಗಿನವರಲ್ಲಿ ಮೊದಲ ಅಲೆಯಲ್ಲಿ ಶೇ.0.3ರಷ್ಟಿದ್ದ ಮರಣ ದರ ಈಗ ಶೇ.0.2ಕ್ಕೆ ಕುಸಿದಿದೆ. ಇದೇ ಪ್ರವೃತ್ತಿ 40ರಿಂದ 49 ವರ್ಷದೊಳಗಿವರಲ್ಲಿಯೂ ಕಂಡು ಬಂದಿದ್ದು ಮೊದಲ ಅಲೆಯಲ್ಲಿ ಶೇ.0.8ರಷ್ಟಿದ್ದ ಮರಣ ದರ ಶೇ.0.7ಕ್ಕೆ ಕುಸಿದಿದೆ.
ಅಂದರೆ, 30 ವರ್ಷ ಮೇಲ್ಪಟ್ಟಮಧ್ಯ ವಯಸ್ಕರ ಎರಡು ವಯೋಮಾನದಲ್ಲಿಯೂ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಮರಣ ದರ ಶೇ.0.1ರ ಅತ್ಯಲ್ಪ ಪ್ರಮಾಣದಲ್ಲಿ ಕುಸಿದಿದೆ. ರಾಜ್ಯಕ್ಕೆ ಕೋವಿಡ್ ಕಾಲಿಟ್ಟು 14 ತಿಂಗಳಾಗಿದ್ದು, 50 ವರ್ಷದೊಳಗಿನವರ ಸಾವಿನ ದರದಲ್ಲಿ ಬಹುತೇಕ ಸ್ಥಿರತೆ ಇದೆ.
50+ ಮರಣ ದರ ಕುಸಿತ:
ಲಸಿಕೆ ಪಡೆಯುವ ಅವಕಾಶ ಇದ್ದ 50 ವರ್ಷ ಮೇಲ್ಪಟ್ಟವರ ಪ್ರತಿ ವಯೋವರ್ಗದ ಸಾವಿನ ದರದಲ್ಲಿಯೂ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. 50ರಿಂದ 59 ವರ್ಷದೊಳಗಿವರಲ್ಲಿ ಮೊದಲ ಅಲೆಯಲ್ಲಿ ಶೇ.1.9 ಮರಣ ದರ ಇದ್ದರೆ ಎರಡನೇ ಅಲೆಯಲ್ಲಿ ಶೇ.1.6 ಮರಣ ದರವಿದೆ. ಅಂದರೆ ಶೇ.0.3ರಷ್ಟುಮರಣ ದರ ಕಡಿಮೆಯಾಗಿದೆ.
60 ವರ್ಷದಿಂದ 69 ವರ್ಷದೊಳಗಿನವರ ಮರಣ ದರ ಮೊದಲ ಅಲೆಯಲ್ಲಿ ಶೇ.3.6 ಇದ್ದದ್ದು ಎರಡನೇ ಅಲೆಯಲ್ಲಿ ಶೇ.3ಕ್ಕೆ ಕುಸಿದಿದೆ. ಅಂದರೆ ಶೇ.0.6ರಷ್ಟುಇಳಿಕೆ ದಾಖಲಾಗಿದೆ. 70 ವರ್ಷದಿಂದ 79 ವರ್ಷದೊಳಗಿನವರ ಮರಣ ದರ ಮೊದಲ ಅಲೆಯಲ್ಲಿ ಶೇ.6.1 ಇದ್ದದ್ದು ಎರಡನೇ ಅಲೆಯಲ್ಲಿ ಶೇ.4.7ಗೆ ಇಳಿದಿದೆ. ಅಂದರೆ ಶೇ.1.4 ಕುಸಿತ ದಾಖಲಾಗಿದೆ. ಅದೇ 80 ವರ್ಷದಿಂದ 89 ವರ್ಷದೊಳಗಿನವರಲ್ಲಿ ಮೊದಲ ಅಲೆಯಲ್ಲಿದ್ದ ಶೇ.9.2ರ ಮರಣ ದರ ಎರಡನೇ ಅಲೆಯ ಹೊತ್ತಿಗೆ ಶೇ.2.3ರಷ್ಟುಕುಸಿತ ಕಂಡು ಶೇ.6.9ಕ್ಕೆ ಇಳಿದಿದೆ. 90 ವರ್ಷದಿಂದ 99 ವರ್ಷದೊಳಗಿವರಲ್ಲಿ ಮೊದಲ ಅಲೆಯಲ್ಲಿ ಶೇ 11.1ರಷ್ಟಿದ್ದ ಮರಣ ದರ ಶೇ.2.3ರಷ್ಟುಕುಸಿತ ಕಂಡು ಶೇ.8.8 ದಾಖಲಾಗಿದೆ. ಅದೇ ರೀತಿ ಶತಾಯುಷಿಗಳಲ್ಲಿ ಶೇ.4.8ರಷ್ಟಿದ್ದ ಮರಣ ದರ ಶೇ.3.2ರಷ್ಟುಇಳಿಕೆ ದಾಖಲಿಸಿ ಶೇ.1.6 ವರದಿಯಾಗಿದೆ.
ಸಾವು ಕಡಿಮೆಯಾಗಲು ಲಸಿಕೆ ಕಾರಣ
ಸಾವಿನ ಪ್ರಮಾಣ ಕಡಿಮೆ ಆಗಲು ಲಸಿಕೆ ಪಡೆದಿರುವುದೇ ಕಾರಣವಾಗಿರಬೇಕು. ಒಂದು ಡೋಸ್ ಲಸಿಕೆ ಪಡೆದಿದ್ದರೂ ಮರಣದ ಪ್ರಮಾಣ ಕಡಿಮೆ ಆಗುತ್ತದೆ. ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಶಿಷ್ಟಾಚಾರದಲ್ಲಿ ಮೊದಲ ಅಲೆಗೂ ಎರಡನೇ ಅಲೆಗೂ ಯಾವುದೇ ವ್ಯತ್ಯಾಸವಾಗಿಲ್ಲ. ಬೆಡ್, ಆಮ್ಲಜನಕದ ಸಮಸ್ಯೆಯಿಂದ ಈ ಬಾರಿ ಸಾವಿನ ದರ ಹೆಚ್ಚಿರಬೇಕಿತ್ತು. ಆದರೆ ಸಾವಿನ ದರ ಹೆಚ್ಚಾಗಿಲ್ಲ ಎಂದರೆ ಅದಕ್ಕೆ ಲಸಿಕೆಯೇ ಕಾರಣ.
- ವಿ.ರವಿ, ವೈರಾಣು ತಜ್ಞ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ
ವಯೋವಾರು ಸಾವು
ವಯಸ್ಸು - ಮೊದಲ ಅಲೆ - ಎರಡನೇ ಅಲೆ
1ರಿಂದ 19 - 74 - 31
20ರಿಂದ 49 - 2175 - 2313
50+ ವರ್ಷ - 10212 - 7832
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona