ಹೆಣ್ಣು ಮಕ್ಕಳು ಗಂಡು ಮಕ್ಕಳೆಂದು ತಾರತಮ್ಯ ಮಾಡುತ್ತಿದ್ದ ತಂದೆಯನ್ನು ಕತ್ತು ಸೀಳಿ ಕೊಂದ ಸೋದರಿಯರು

Published : Feb 25, 2026, 01:47 PM IST
two daughters killed father for scolding them

ಸಾರಾಂಶ

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ, ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ನಿರಂತರ ತಾರತಮ್ಯ ಮಾಡುತ್ತಿದ್ದ ತಂದೆಯ ವರ್ತನೆಯಿಂದ ಬೇಸತ್ತ ಇಬ್ಬರು ಸೋದರಿಯರು ಆತನನ್ನು ಕೊಲೆ ಮಾಡಿದ್ದಾರೆ. ಕುಟುಂಬದ ಇತರ ಸದಸ್ಯರಿಗೆ ನಿದ್ರೆ ಮಾತ್ರೆ ನೀಡಿ, ತಂದೆ ಮಲಗಿದ್ದಾಗ ಚಾಕುವಿನಿಂದ ಕತ್ತು ಸೀಳಿ ಹತ್ಯೆಗೈದಿದ್ದಾರೆ.

ತಾರತಮ್ಯ ಮಾಡ್ತಿದ್ದ ತಂದೆಯ ಕತೆ ಮುಗಿಸಿದ ಮಕ್ಕಳು:

ಆಗ್ರಾ: ಕುಟುಂಬದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ನಿರಂತರ ಬೇಧಭಾವ ಮಾಡುತ್ತಾ ಹೆಣ್ಣು ಮಕ್ಕಳನ್ನು ನಿರಂತರ ಟೀಕಿಸುತ್ತಿದ್ದ ತಂದೆಯ ತಾರತಮ್ಯ ನೀತಿಯಿಂದ ಸಿಟ್ಟಿಗೆದ್ದ ಸೋದರಿಯರಿಬ್ಬರು ಅವರ ಕತ್ತು ಸೀಳಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಅನೇಕ ಕುಟುಂಬಗಳಲ್ಲಿ ಗಂಡು ಮಕ್ಕಳಿಗೆ ಒಂದು ನೀತಿಯಾದರೆ ಹೆಣ್ಣು ಮಕ್ಕಳಿಗೆ ಒಂದು ನೀತಿ, ಗಂಡು ಮಕ್ಕಳನ್ನು ಕುಲೋದ್ಧಾರಕರೆಂದು ನೋಡಿದರೆ ಹೆಣ್ಣು ಮಕ್ಕಳನ್ನು ಕಾಲಕಸದಂತೆ ನೋಡುತ್ತಾರೆ. ಹೆಣ್ಣು ಮಕ್ಕಳು ಬೇರೆ ಮನೆಗೆ ಹೋಗುವವರು ಎಂದು ಕೆಲವು ಮನೆಗಳಲ್ಲಿ ಹೆಚ್ಚಿನ ಶಿಕ್ಷಣ ನೀಡುವುದಕ್ಕೂ ಯೋಚನೆ ಮಾಡುತ್ತಾರೆ. ಹಾಗೆಯೇ ಇಲ್ಲಿ ತಂದೆ ತನ್ನ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳ ಮಧ್ಯೆ ನಿರಂತರ ಬೇಧಭಾವ ಮಾಡುತ್ತಾ ಬಂದಿದ್ದು, ಇದರಿಂದ ರೋಸಿ ಹೋದ ಸೋದರಿಯರು ತಂದೆಯ ಉಸಿರನ್ನೇ ನಿಲ್ಲಿಸಿದ್ದಾರೆ.

ನಿರಂತರ ತಾರತಮ್ಯ ಮತ್ತು ಅವಹೇಳನದಿಂದ ಬೇಸತ್ತ 16 ಮತ್ತು 32 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಸೇರಿ ತಮ್ಮ 60 ವರ್ಷದ ತಂದೆಯನ್ನು ಮನೆಯಲ್ಲಿ ಮಲಗಿದ್ದಾಗ ಕೊಲೆ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಅವರು ತಮ್ಮ ರೈತ ತಂದೆಯನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದರು ಮತ್ತು ಭಾನುವಾರ ರಾತ್ರಿ ಅವರ ತಾಯಿ ಸೇರಿದಂತೆ ಕುಟುಂಬದ ಉಳಿದ ಸದಸ್ಯರಿಗೆ ನಿದ್ರೆ ಮಾತ್ರೆ ಬೆರೆಸಿದ ಆಹಾರವನ್ನು ನೀಡಿದ್ದಾರೆ. ತಂದೆ ನಿದ್ರಿಸಿದಾಗ, ಕಿರಿಯ ಮಗಳು ಅವರ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡರೆ, ಹಿರಿಯ ಮಗಳು ಅಡುಗೆ ಮನೆಯ ಚಾಕುವಿನಿಂದ ತಂದೆಯ ಗಂಟಲು ಸೀಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನ: ಮಕ್ಕಳಿಂದ ಸಿಗದ ಪ್ರೀತಿ: ವೃದ್ಧಾಶ್ರಮದಿಂದ ಬಂದು ಸಾವಿಗೆ ಶರಣಾದ ದಂಪತಿ

ಸೋಮವಾರ ಬೆಳಗಿನ ಜಾವ ಮನೆ ಮಂದಿಗೆ ಎಚ್ಚರವಾದಾಗ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ನಂತರ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ವಿಚಾರಣೆ ಆರಂಭಿಸಿ ಎರಡು ಗಂಟೆಗಳ ಒಳಗೆ, ಇಬ್ಬರು ಹೆಣ್ಣುಮಕ್ಕಳನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದರು. ಆ ಸಮಯದಲ್ಲಿ ಅವರು ಅಪರಾಧವನ್ನು ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸದಂತೆ ಭೋಪಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ವಿಚಾರಣೆಯ ಸಮಯದಲ್ಲಿ, ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯ ವರ್ತನೆಯಿಂದ ನೊಂದಿದ್ದಾಗಿ ಹೇಳಿದ್ದಾರೆ. ಅವರು ತಮ್ಮ ಮಗ ಮತ್ತು ಹೆಣ್ಣುಮಕ್ಕಳನ್ನು ವಿಭಿನ್ನವಾಗಿ ನಡೆಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಪುತ್ತೂರು ಬಿಜೆಪಿ ನಾಯಕನ ಪುತ್ರನಿಂದ ಸಹಪಾಠಿಗೆ ಮಗು ಕರುಣಿಸಿದ ಪ್ರಕರಣ: ಆತ್ಮ*ಹತ್ಯೆಗೆ ಯತ್ನಿಸಿದ ಮಗುವಿನ ತಾಯಿ

ಮನೆಯಲ್ಲಿಯೇ ಇದ್ದಾರೆ, ಅವಿವಾಹಿತರಾಗಿದ್ದಾರೆ ಮತ್ತು ಯಾವುದೇ ಕೆಲಸ ಮಾಡುವುದಿಲ್ಲ ಎಂದು ಅವರಿಗೆ ಆಗಾಗ್ಗೆ ಬೈಯುತ್ತಿದ್ದರು ಮತ್ತು ನಿಂದಿಸುತ್ತಿದ್ದರು ಎಂದು ಈ ಹೆಣ್ಣು ಮಕ್ಕಳು ಹೇಳಿದ್ದಾಗಿ ಗ್ರಾಮೀಣ ಎಸ್‌ಪಿ ಆದಿತ್ಯ ಬನ್ಸಾಲ್ ಹೇಳಿದ್ದಾರೆ. ಎರಡು ನಿದ್ರೆ ಮಾತ್ರೆಗಳ ಶೀಟ್‌ ಮತ್ತು ಕೊಲೆಗೆ ಬಳಸಲಾದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಬನ್ಸಾಲ್ ಹೇಳಿದರು. ಹಿರಿಯ ಮಗಳು ಘಟನೆ ವೇಳೆ ಧರಿಸಿದ್ದ ರಕ್ತದ ಕಲೆಗಳ ಬಟ್ಟೆಗಳನ್ನು ಮೇವಿನ ರಾಶಿಯಲ್ಲಿ ಅಡಗಿಸಿಟ್ಟಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಶದ ಗಮನ ಸೆಳೆದ ಬೆಂಗಳೂರು ವಿಮಾನ ನಿಲ್ದಾಣದ ಇಡ್ಲಿ! ಜಾಲತಾಣದಲ್ಲಿ ಇದರದ್ದೇ ಹವಾ- ಅಂಥದ್ದೇನಿದೆ ನೋಡಿ!
Kerala Renamed: ಕೇರಳ ಇನ್ನು ಮುಂದೆ 'ಕೇರಳಂ': ಈ ಹೆಸರು ಬದಲಾವಣೆಯ ಹಿಂದಿನ ಸಂಪೂರ್ಣ ಕಥೆ ಇಲ್ಲಿದೆ!