ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾದ ಬೇರ್ ಗ್ರಿಲ್ಸ್ ಆಯೋಜಿಸಿದ್ದ ಎಪಿಸೋಡ್‌ವೊಂದರಲ್ಲಿ ಪ್ರಧಾನಿ ಮೋದಿ ಭಾಗಿಯಾಗದ್ದರು. ಈ ವೇಳೆ ಉತ್ತರಾಖಂಡದಲ್ಲಿ ಶೂಟಿಂಗ್ ಮಾಡಲಾಗಿತ್ತು. ಈಗ ಆ ಸ್ಥಳಗಳನ್ನು ಮೋದಿ ಸರ್ಕ್ಯೂಟ್ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ಪ್ರಧಾನಿ ಮೋದಿ ಕೆಲ ವರ್ಷಗಳ ಹಿಂದೆ ಬೇರ್ ಗ್ರಿಲ್ಸ್ ಆಯೋಜಿಸಿದ್ದ ‘ಮ್ಯಾನ್ ವರ್ಸಸ್ ವೈಲ್ಡ್’ (Man vs Wild) ಎಪಿಸೋಡ್‌ವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೆಲ ಸಾಹಸಮಯ ಚಟುವಟಿಕೆಗಳಲ್ಲಿ ಪ್ರಧಾನಿ ಪಾಲ್ಗೊಂಡಿದ್ದರು. ಉತ್ತರಾಖಂಡದ (Uttarakhand) ಕಾರ್ಬೆಟ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿ (Corbett Tiger Reserve) ಈ ಎಪಿಸೋಡ್‌ನ ಶೂಟಿಂಗ್ ನಡೆದಿತ್ತು. ಈ ಹಿನ್ನೆಲೆ ಉತ್ತರಾಖಂಡ ಸರ್ಕಾರ ಪ್ರಧಾನಿ ಮೋದಿ ಓಡಾಡಿದ ಸ್ಥಳಗಳನ್ನು 'ಮೋದಿ ಸರ್ಕ್ಯೂಟ್' (Modi Circuit) ಹೆಸರಿನಲ್ಲಿ ಅಭಿವೃದ್ಧಿಪಡಿಸಲು ಹೊರಟಿದೆ.
ಆಗಸ್ಟ್ 2019 ರಲ್ಲಿ ಡಿಸ್ಕವರಿ ಚಾನೆಲ್‌ನಲ್ಲಿ (Discovery Channel) ಪ್ರಸಾರವಾದ ‘ಮ್ಯಾನ್ ವರ್ಸಸ್ ವೈಲ್ಡ್’ ಎಪಿಸೋಡ್‌ವೊಂದರಲ್ಲಿ ಪ್ರಧಾನಿ ಮೋದಿ ಕೆಲ ಸಾಹಸಮಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಎಪಿಸೋಡ್ ಶೂಟಿಂಗ್ ವೇಳೆ ಪ್ರಧಾನಿ ಮೋದಿ ಮಳೆಯ ನಡುವೆಯೇ ಉತ್ತರಾಖಂಢದ ಕೋಸಿ ನದಿಯನ್ನು (Kosi River) ತಾತ್ಕಾಲಿಕ ತೆಪ್ಪದಲ್ಲಿ ದಾಟಿದ್ದರು. ಅಲ್ಲದೆ, ಹುಲಿಗಳು ಓಡಾಡುವ ಜಾಗದಲ್ಲೂ ಈಟಿ ಹಿಡಿದು ಪ್ರಧಾನಿ ನಡೆದಾಡಿದ್ದರು. ಜತೆಗೆ, ಬೇವಿನ ಎಲೆಗಳಿಂದ ಮಾಡಿದ ಜ್ಯೂಸ್ ಅನ್ನು ಸಹ ಕುಡಿದಿದ್ದರು.
ನದಿ ತೀರದಲ್ಲಿ ಕುಳಿತು ಜಿಟಿಜಿಟಿ ಮಳೆಯಲ್ಲಿ ಬಿಸಿ ಚಹಾ ಸವಿದ ಮೋದಿ
ಇನ್ನು, ಈ ಬೆಳವಣಿಗೆ ಬಗ್ಗೆ ಕಾರಣ ನೀಡಿದ ಉತ್ತರಾಖಂಡ ಪ್ರವಾಸಿ ಅಭಿವೃದ್ಧಿ ಮಂಡಳಿಯ ಸಾಹಸ ಕ್ರೀಡಾ ವಿಭಾಗದ ಹೆಚ್ಚುವರಿ ಸಿಇಒ ಕರ್ನಲ್ ಅಶ್ವಿನಿ ಪುಂಡಿರ್, ಪ್ರಧಾನಿ ನರೇಂದ್ರ ಮೋದಿ ನಮ್ಮ ಕಾಲದ ದೊಡ್ಡ ಪ್ರಭಾವಿಯಾಗಿದ್ದಾರೆ (Influencer) ಎಂದು ಹೇಳಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ನಿಡಿದ ಅವರು, ಕೆಲ ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಕೇದಾರನಾಥದ ಗುಹೆಯೊಂದರಲ್ಲಿ ಧ್ಯಾಣ ಮಾಡಿದ್ದರು. ನಂತರ ಆ ಜಾಗ ತುಂಬಾ ಖ್ಯಾತಿ ಪಡೆದಿದ್ದು, ಜನರು ಆ ಸ್ಥಳಕ್ಕೆ ಹೋಗಲು ಕೆಲ ತಿಂಗಳುಗಳ ಹಿಂದೆಯೇ ಬುಕ್ ಮಾಡಲು ಆರಂಭಿಸಿದ್ದಾರೆ ಎಂದು ಪುಂಡಿರ್ ಹೇಳಿದ್ದಾರೆ.
ಇದೇ ರೀತಿ, ಈಗಾಗಲೇ ಜನಪ್ರಿಯ ಪ್ರವಾಸಿ ಸ್ಥಳವಾಗಿರುವ ಕಾರ್ಬೆಟ್ ಹುಲಿ ಸಂರಕ್ಷಣಾ ಪ್ರದೇಶ ‘’ಮೋದಿ ಸರ್ಕ್ಯೂಟ್’’ ನಿಂದ ಸ್ಥಳೀಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಖ್ಯಾತಿ ತಂದುಕೊಡಲಿದೆ ಎಂದು ಅವರು ಹೇಳಿದರು. ಆದರೆ, ಈ ಯೋಜನೆಯ ವಿವರಗಳನ್ನು ಇನ್ನೂ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದೂ ಪುಂಡಿರ್ ಹೇಳಿದ್ದಾರೆ. ಮೊದಲು ಮೋದಿ ಹಾಗೂ ಗ್ರಿಲ್ಸ್ ಭೇಟಿ ನೀಡಿದ ಜಾಗಗಳನ್ನು ಗುರುತಿಸಲಾಗುವುದು. ನಂತರ ಪ್ರವಾಸಿಗರನ್ನು ಆ ಸ್ಥಳಗಳಿಗೆ ಕರೆದುಕೊಂಡು ಹೋಗಲು ಯಾವ ರೀತಿ ವ್ಯವಸ್ಥೆ ಮಾಡಬಹುದು ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದೂ ಉತ್ತರಾಖಂಡ ಪ್ರವಾಸಿ ಅಭಿವೃದ್ಧಿ ಮಂಡಳಿಯ ಸಾಹಸ ಕ್ರೀಡಾ ವಿಭಾಗದ ಹೆಚ್ಚುವರಿ ಸಿಇಒ ಕರ್ನಲ್ ತಿಳಿಸಿದ್ದಾರೆ. ಅಲ್ಲದೆ, ಪ್ರಧಾನಿಗಾದ ಅನುಭವವನ್ನು ಪ್ರವಾಸಿಗರಿಗೂ ಸೃಷ್ಟಿ ಮಾಡುವ ಇಚ್ಛೆ ನಮಗಿದೆ. ಹಾಗೂ, ಪ್ರಧಾನಿ ಮೋದಿ ಚಟುವಟಿಕೆ ನಡೆಸಿದ ಸ್ಥಳ ಎಂದು ಎಂದು ನಾವು ಕೆಲ ಬರಹಗಳನ್ನು ಹಾಕಲಿದ್ದೇವೆ ಎಂದೂ ಅವರು ಹೇಳಿದ್ದಾರೆ.
ಮ್ಯಾನ್ ವರ್ಸಸ್ ವೈಲ್ಡ್: ಮೋದಿ ಸಂಚಿಕೆಗೆ ಜಗತ್ತು ಕ್ಲೀನ್ ಬೋಲ್ಡ್!
ಈ ಮಧ್ಯೆ, ‘ಗೇಮ್ ಆಫ್ ಥ್ರೋನ್ಸ್’ ಟೆಲಿವಿಷನ್ ಸರಣಿಯ ಶೂಟಿಂಗ್ ನಡೆದ ಸ್ಥಳಗಳನ್ನು ಕ್ರೊಯೇಷಿಯಾದಲ್ಲಿ ಪ್ರವಾಸಿಗರಿಗೆ ಅಭಿವೃದ್ಧಿಪಡಿಸಲಾಗಿದ್ದು, ಅದಕ್ಕೆ ‘ಗೇಮ್ ಆಫ್ ಥ್ರೋನ್ಸ್ ಟೂರ್ ಸರ್ಕ್ಯೂಟ್’ (Game of Thrones Tour Circuit) ಎಂದು ಹೆಸರಿಡಲಾಗಿದೆ. ಅಲ್ಲಿಗೆ ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರು ಪ್ರವಾಸಕ್ಕೆ ಹೋದ ವೇಳೆ ‘’ಮೋದಿ ಸರ್ಕ್ಯೂಟ್’’ ಮಾಡುವ ಕಲ್ಪನೆ ಅವರಿಗೆ ಬಂದಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಉತ್ತರಾಖಂಡ ಸರ್ಕಾರ ಮಾ ಭಗವತಿ, ಶಿವ, ವಿಷ್ಣು, ನವಗ್ರಹ, ಗೋಲ್ಜು ಮಹಾರಾಜ, ನಾಗದೇವತೆ, ಹನುಮಾನ್ ಹಾಗೂ ವಿವೇಕಾನಂದ ಅವರ ಸರ್ಕ್ಯೂಟ್‌ಗಳನ್ನು ಸಹ ರಚಿಸಿದೆ.