ಜಲಪಾತದ ಬಳಿ ಫೋಟೋ, ವಿಡಿಯೋ ತೆಗೆಸಿಕೊಳ್ಳಲು ಹೋಗಿ ಕಾಲು ಜಾರಿ ಯುವಕ ಕೆಳಗೆ ಬಿದ್ದಿರುವ ಘಟನೆ ತಮಿಳುನಾಡಿನ ಕೊಡೈಕೆನಾಲ್ ಬಳಿ ನಡೆದಿದೆ. 26 ವರ್ಷದ ಯುವಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಇತ್ತೀಚಿನ ಯುವಕ - ಯುವತಿಯರಿಗೆ ಹಾಗೂ ಹಲವು ಹಿರಿಯ ವಯಸ್ಸಿನ ವ್ಯಕ್ತಿಗಳಿಗೆ ಸಹ ಫೋಟೋ, ವಿಡಿಯೋ ತೆಗೆಸಿಕೊಳ್ಳುವ ಹುಚ್ಚು. ಸೆಲ್ಫಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ಹಾಗೂ ವೈರಲ್ ಆಗಬೇಕೆಂಬ ಆಸೆಯಿಂದ ಏನೇನೋ ಸಾಹಸ ಮಾಡಲು ಹೋಗುತ್ತಾರೆ. ಇದೇ ರೀತಿ, ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಯುವಕನೊಬ್ಬ ಫೊಟೋ, ವಿಡಿಯೋ ತೆಗೆಸಿಕೊಳ್ಳಲು ಹೋಗಿ ಜಲಪಾತದ ಬಳಿ ಅಪಾಯಕಾರಿ ಸ್ಥಳದಲ್ಲಿ ನಿಂತುಕೊಡಿದ್ದಾನೆ. ಬಳಿಕ, ಕಾಲು ಜಾರಿ ಜಲಪಾತಕ್ಕೆ ಬಿದ್ದಿರುವ ಘಟನೆ ನಡೆದಿದೆ.
ತಮಿಳುನಾಡಿನ ಕೊಡೈಕೆನಾಲ್‌ನ ಬಳಿಯ ಪುಲ್ಲವೇಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆಳಕ್ಕೆ ಬಿದ್ದ ಯುವಕನನ್ನು 26 ವರ್ಷದ ಅಜಯ್ ಪಾಂಡಿಯನ್ ಎಂದು ಗುರುತಿಸಲಾಗಿದೆ. ಇನ್ನು, ಆತನ ಸ್ನೇಹಿತ ಸಂಪೂರ್ಣ ದೃಶ್ಯಾವಳಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಆ ಅಪಾಯಕಾರಿ ಸ್ಥಳಕ್ಕೆ ಹೋಗುವಾಗ ಅಜಯ್ ಸ್ನೇಹಿತ ವಿಡಿಯೋ ತೆಗೆಯುತ್ತಿದ್ದ, ನಂತರ ಆ ಸ್ಥಳದಲ್ಲಿ ಫೋಟೋಗೆ ಪೋಸ್ ನೀಡಿದ ಬಳಿಕ ಜಲಪಾತದತ್ತ ತಿರುಗಿ ನೋಡಲು ಹೋದಾಗ ಕಾಲು ಜಾರಿ ಯುವಕ ಜಲಪಾತಕ್ಕೆ ಅಂದರೆ ಕೆಳಗೆ ಬಿದ್ದಿದ್ದಾನೆ. ಆಗಸ್ಟ್ 3, ಬುಧವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವಿಶ್ವದ ಈ ಸ್ಥಳಗಳಲ್ಲಿ ಸೆಲ್ಫಿ ಬ್ಯಾನ್!
ಇನ್ನು, ಈ ಘಟನೆ ಬೆಳಕಿಗೆ ಬಂದ ಬಳಿಕ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದರೂ, ಇನ್ನೂ ಆತ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಅಜಯ್ ಸ್ನೇಹಿತ ತೆಗೆದ 47 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಲ್ಲವೇಲಿ ಗ್ರಾಮದಲ್ಲಿರುವ ಆ ಜಲಪಾತ ಹೆಚ್ಚು ಅಪಾಯಕಾರಿ ಎನ್ನಲಾಗಿದ್ದು, ಆದರೂ ಪರ್ಫೆಕ್ಟ್ ಫೋಟೋಗಾಗಿ ಯುವಕ ಅಪಾಯಕಾರಿ ಸ್ಥಳಕ್ಕೆ ಹೋಗಿದ್ದಾನೆ.
ಜಲಪಾತದ ತುದಿಗೆ ಹೋಗಿ ಬಂಡೆಕಲ್ಲಿನ ಮೇಲೆ ನಿಂತುಕೊಂಡು ಫೋಟೋಗೆ ಪೋಸ್ ನೀಡುತ್ತಿರುತ್ತಾನೆ. ನಂತರ, ಫೋಟೋ, ವಿಡಿಯೋವನ್ನು ಇನ್ನೂ ಮುಂದೆ ಬಂದು ತೆಗೆಯಲು ಹೇಳುತ್ತಾನೆ. ಆ ಜಲಪಾತದ ಆಳವನ್ನು ವಿಡಿಯೋದಲ್ಲಿ ಸೆರೆ ಹಿಡಿಯುವುದು ಅವರ ಉದ್ದೇಶ ಎಂದು ಹೇಳಬಹುದು. ಬಳಿಕ, ಅಜಯ್ ಪಾಂಡಿಯನ್ ಜಾರುತ್ತಿದ್ದ ಜಲಪಾತದ ತುದಿಯ ಕಲ್ಲಿನ ಮೇಲೆ ನಿಂತುಕೊಂಡು, ಕ್ಯಾಮೆರಾದ ಕಡೆಗೆ ನೋಡಿ ಫೋಟೋಗೆ ಪೋಸ್ ನೀಡುತಾನೆ. ಆ ಪೋಸ್ ಬಳಿಕ ಜಲಪಾತವನ್ನು ನೋಡಲು ತಿರುಗುತ್ತಾನೆ. ಆದರೆ, ಕೆಲವೇ ಕ್ಷಣಗಳ ಬಳಿಕ ಅಜಯ್ ಕಾಲು ಜಾರಿ ಬ್ಯಾಲೆನ್ಸ್ ತಪ್ಪುತ್ತಾನೆ.
ನಂತರ 3 - 4 ಸೆಕೆಂಡುಗಳಲ್ಲಿ ಆತ ಕೆಳಕ್ಕೆ ಬೀಳುತ್ತಾನೆ. ಹಾಗೆ, ಜಲಪಾತದಲ್ಲಿ ನಾಪತ್ತೆಯಾಗುತ್ತಾನೆ ಎಂದು ತಿಳಿದುಬಂದಿದೆ. ಇದನ್ನು ನೋಡಿ ಗಾಬರಿಯಾದ ಗೆಳೆಯ ಕೂಗಿಕೊಂಡು, ನಂತರ ಇಡೀ ಘಟನೆ ಬಗ್ಗೆ ಸ್ಥಳೀಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಬಳಿಕ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಹೋದರೂ, ಈವರೆಗೆ ಅಜಯ್ ಅನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಗೆಳತಿ ಮೆಚ್ಚಿಸಲು ವಾಯುನೆಲೆಗೆ ಅಧಿಕಾರಿ ವೇಷ ಧರಿಸಿ ಎಂಟ್ರಿ ಕೊಟ್ಟವ ಅರೆಸ್ಟ್
ಇದೇ ರೀತಿ, ಜುಲೈ 16 ರಂದು ಬೆಂಗಳೂರಿನ 26 ವರ್ಷದ ಮಹಿಳಾ ಟೆಕ್ಕಿಯೊಬ್ಬರು ಮದಿಯಲ್ಲಿ ನೀಲಗಿರೀಸ್ ಬಳಳಿಯ ಕಲಹಟ್ಟಿಯ ಸಿಯುರ್‌ಹಳ್ಳ ನದಿಯಲ್ಲಿ ಮುಳುಗಿದ್ದರು. ನದಿಯ ದಡದಲ್ಲಿ ಸೆಲ್ಫಿ ತೆಗೆಸಿಕೊಳ್ಳಲು ಹೋಗಿ ಆಕೆ ಮುಳುಗಿದ್ದರು. ಇನ್ನು, ಅದು ನಿರ್ಬಂಧಿತ ಸ್ಥಳವಾಗಿದ್ದರೂ, ರೆಸಾರ್ಟ್ ಸಿಬ್ಬಂದಿಯ ನೆರವಿನಿಂದ ಆ ಅಪಾಯಕಾರಿ ಸ್ಥಳಕ್ಕೆ ಹೋಗಿದ್ದರು ಎಂದು ತಿಳಿದುಬಂದಿದ್ದು, ನಂತರ ಆ ರೆಸಾರ್ಟ್ ಅನ್ನು ಸೀಲ್ ಮಾಡಲಾಗಿತ್ತು. ಅಲ್ಲದೆ, ಇದೇ ರೀತಿ ಆ ರೆಸಾರ್ಟ್‌ನವರು ಈ ಹಿಂದೆಯೂ ಒಮ್ಮೆ ಅಪಾಯಕಾರಿ ಹಾಗೂ ನಿರ್ಬಂಧಿತ ಸ್ಥಳಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿತ್ತು.