Dengue ರೋಗಿಗೆ ಪ್ಲೇಟ್‌ಲೆಟ್ಸ್‌ ಬದಲು ಜ್ಯೂಸ್‌ ನೀಡಿದ ಆಸ್ಪತ್ರೆಗೆ ಡೆಮಾಲಿಷನ್‌ ನೋಟಿಸ್..!

By BK AshwinFirst Published Oct 26, 2022, 1:49 PM IST
Highlights

ಪ್ರಯಾಗ್‌ರಾಜ್‌ ಜಿಲ್ಲೆಯ ಝಲ್ವಾ ಮೂಲದ ಗ್ಲೋಬಲ್ ಆಸ್ಪತ್ರೆಯು ಡೆಂಗ್ಯೂ ರೋಗಿಗೆ ಪ್ಲೇಟ್‌ಲೆಟ್‌ಗಳ ಬದಲಿಗೆ ಮೂಸಂಬಿ ಜ್ಯೂಸ್ ನೀಡುತ್ತಿರುವ ವೈರಲ್ ವಿಡಿಯೋ ಗಮನದಲ್ಲಿಟ್ಟುಕೊಂಡು ತಕ್ಷಣ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಮತ್ತು ಪ್ಲೇಟ್‌ಲೆಟ್ ಪ್ಯಾಕೆಟ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಹೇಳಿದ್ದಾರೆ.

ಡೆಂಗ್ಯೂ (Dengue) ರೋಗಿಗೆ (Patient) ರಕ್ತದ ಪ್ಲೇಟ್‌ಲೆಟ್‌ಗಳ (Blood Platelets) ಬದಲಿಗೆ ಹಣ್ಣಿನ ರಸವನ್ನು (Fruit Juice) ನೀಡಿ ಎಡವಟ್ಟು ಮಾಡಿಕೊಂಡಿದ್ದ ಉತ್ತರ ಪ್ರದೇಶ (Uttar Pradesh) ಆಸ್ಪತ್ರೆ  ಕಟ್ಟಡವನ್ನು ಖಾಲಿ ಮಾಡುವಂತೆ ನೋಟಿಸ್‌ ನೀಡಿದೆ. ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು ಅಕ್ಟೋಬರ್ 28 ರೊಳಗೆ ಕಟ್ಟಡವನ್ನು ಖಾಲಿ ಮಾಡುವಂತೆ ಗ್ಲೋಬಲ್ ಆಸ್ಪತ್ರೆಗೆ ನೋಟಿಸ್‌ ನೀಡಿದೆ. ಈ ಆಸ್ಪತ್ರೆಯ ಕಟ್ಟಡವನ್ನು "ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ" ಎಂದು ಪ್ರಾಧಿಕಾರವು ಹೇಳಿದ್ದು, ಈ ಹಿನ್ನೆಲೆ ಆಸ್ಪತ್ರೆಯನ್ನು ಬುಲ್ಡೋಜರ್‌ ಮೂಲಕ ಡೆಮಾಲಿಷನ್‌ (Demolition) ಮಾಡುವ ಸಾಧ್ಯತೆ ಇದೆ. ತಪ್ಪಿತಸ್ಥ ಎಂದು ಸಾಬೀತಾದರೆ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಭರವಸೆ ನೀಡಿದ್ದಾರೆ. ಇನ್ನು, ಪ್ಲೇಟ್‌ಲೆಟ್ ಪ್ಯಾಕೆಟ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದೂ ಅವರು ಹೇಳಿದರು.

ಪ್ರಯಾಗ್‌ರಾಜ್‌ ಜಿಲ್ಲೆಯ  ಝಲ್ವಾ ಮೂಲದ ಗ್ಲೋಬಲ್ ಆಸ್ಪತ್ರೆಯು ಡೆಂಗ್ಯೂ ರೋಗಿಗೆ ಪ್ಲೇಟ್‌ಲೆಟ್‌ಗಳ ಬದಲಿಗೆ ಮೂಸಂಬಿ ಜ್ಯೂಸ್ ನೀಡುತ್ತಿರುವ ವೈರಲ್ ವಿಡಿಯೋವನ್ನು
ಗಮನದಲ್ಲಿಟ್ಟುಕೊಂಡು ತಕ್ಷಣ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಮತ್ತು ಪ್ಲೇಟ್‌ಲೆಟ್ ಪ್ಯಾಕೆಟ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬ್ರಜೇಶ್ ಪಾಠಕ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ರಕ್ತದೊಳಗೆ ಪ್ಲೇಟ್‌ಲೇಟ್ ಬದಲು ಜ್ಯೂಸ್ ಹಾಕಿ ಎಡವಟ್ಟು, ಡೆಂಗ್ಯೂ ರೋಗಿ ಸಾವು, ಆಸ್ಪತ್ರೆ ಸೀಲ್‌ಡೌನ್!

ಆಸ್ಪತ್ರೆಯಲ್ಲಿ  ‘ಕೆಲವು ಅಕ್ರಮಗಳು’ ಪತ್ತೆಯಾಗಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾದ ಬಳಿಕ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿತ್ತು ಎಂದು ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ.ಎ.ಕೆ.ತಿವಾರಿ ಮಾಹಿತಿ ನೀಡಿದ್ದರು. "ರೋಗಿಯ ಮರಣದ ನಂತರ ಮುಖ್ಯ ವೈದ್ಯಕೀಯ ಅಧಿಕಾರಿ (CMO) ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ, ಕೆಲವು ಅಕ್ರಮಗಳು ಕಂಡುಬಂದಿವೆ. ತನಿಖೆ ಪೂರ್ಣಗೊಳ್ಳುವವರೆಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ" ಎಂದೂ ಹೆಚ್ಚುವರಿ CMO ಗುರುವಾರ ಹೇಳಿದರು. ಈ ಕುರಿತು ತನಿಖೆ ಆರಂಭಿಸಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ಕ್ರಮ ಕೈಗೊಳ್ಳಲಾಗುವುದು. ದೂರುದಾರರು ಎಫ್‌ಐಆರ್ ದಾಖಲಿಸಿದ್ದಾರೆ ಎಂದೂ ಅಧಿಕಾರಿ ತಿಳಿಸಿದ್ದಾರೆ.

ಆದರೆ, ಘಟನೆಯನ್ನು ಸಮರ್ಥಿಸಿಕೊಂಡ  ಆಸ್ಪತ್ರೆಯ ಮಾಲೀಕ ಸೌರಭ್ ಮಿಶ್ರಾ ಪ್ಲೇಟ್‌ಲೆಟ್‌ಗಳನ್ನು ರೋಗಿಯ ಕಡೆಯವರು ತಂದಿದ್ದರು ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಪ್ಲೇಟ್ ಲೆಟ್ ಕೊರತೆ ಕಾಡುತ್ತಿದೆಯೇ? ಈ ಎಲೆ ಬಳಸಿ ಮ್ಯಾಜಿಕ್ ನೋಡಿ
 
"ಪ್ಲೇಟ್‌ಲೆಟ್‌ಗಳನ್ನು ತರಲು ರೋಗಿಯ ಕಡೆಯವರಿಗೆ ಸ್ಲಿಪ್ ನೀಡಲಾಯಿತು. ಅವರು ಸಂಜೆ 5 ಯೂನಿಟ್ ಪ್ಲೇಟ್‌ಲೆಟ್‌ಗಳನ್ನು ತಂದರು, 3 ಯೂನಿಟ್‌ ಬಳಸಿದಾಗ, ರೋಗಿಗೆ ಪ್ರತಿಕ್ರಿಯೆ ಬಂದಿತು, ನಂತರ ನಾವು ರಕ್ತ ವರ್ಗಾವಣೆಯನ್ನು ನಿಲ್ಲಿಸಿದ್ದೇವೆ. ರೋಗಿಯ ಕಡೆಯವರು ತಂದ ಪ್ಲೇಟ್‌ಲೆಟ್‌ಗಳನ್ನು ರೋಗಿಗೆ ರಕ್ತಪೂರಣ ಮಾಡಲಾಯಿತು, ಇದು ಎಸ್‌ಆರ್‌ಎನ್ ಬ್ಲಡ್ ಬ್ಯಾಂಕ್‌ಗೆ ಸೇರಿದ್ದು, ಆಸ್ಪತ್ರೆಯು ಅದರ ಜವಾಬ್ದಾರಿಯನ್ನು ಹೊರುವುದಿಲ್ಲ’’ ಎಂದೂ ಆಸ್ಪತ್ರೆಯ ಮಾಲೀಕ ಸೌರಭ್ ಮಿಶ್ರಾ ಹೇಳಿದ್ದಾರೆ. 

"ನಾವು ರೋಗಿಯನ್ನು ನೋಡಿಕೊಳ್ಳುವವರು ತರುವ ಪ್ಲೇಟ್‌ಲೆಟ್‌ಗಳನ್ನು ಪರೀಕ್ಷಿಸುವುದಿಲ್ಲ. ಅವರು ತಪ್ಪಾದ ಪ್ಲೇಟ್‌ಲೆಟ್‌ಗಳನ್ನು ತಂದರೆ ಆಸ್ಪತ್ರೆ ಹೇಗೆ ಹೊಣೆ? ಅವು ಅಸಲಿಯೇ ಎಂದು ಖಚಿತಪಡಿಸಿಕೊಳ್ಳುವುದು ರೋಗಿಯ ಕಡೆಯವರ ಜವಾಬ್ದಾರಿಯಾಗಿದೆ," ಎಂದೂ ಆಸ್ಪತ್ರೆ ಮಾಲೀಕರು ಹೇಳಿದರು.

ಇದನ್ನೂ ಓದಿ: Dengue Fever Diet: ಡೆಂಗ್ಯೂದಿಂದ ಬೇಗ ಚೇತರಿಸಿಕೊಳ್ಳಬೇಕೆ? ಈ ರೀತಿ ಆಹಾರ ಸೇವಿಸಿ

"ರೋಗಿಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ರೋಗಿಯ ಕಡೆಯವರು ವಿನಂತಿಸಿದ ನಂತರ ನಾವು ರೋಗಿಯನ್ನು ಉನ್ನತ ಕೇಂದ್ರಕ್ಕೆ ಕಳುಹಿಸಿದ್ದೇವೆ. ರೋಗಿಯು ಇಲ್ಲಿ ಮೃತಪಟ್ಟಿಲ್ಲ, 2 ದಿನಗಳ ನಂತರ ಮತ್ತೊಂದು ಆಸ್ಪತ್ರೆಯಲ್ಲಿ ಸಾವು ಸಂಭವಿಸಿದೆ" ಎಂದೂ ಆಸ್ಪತ್ರೆಯ ಮಾಲೀಕ ಸೌರಭ್ ಮಿಶ್ರಾ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

click me!