ಯುಪಿ ಕೋಟ್ಯಧಿಪತಿ ಮಗನ ಘರ್ ವಾಪ್ಸಿ: ಇಸ್ಲಾಂ ತೊರೆದು ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಆಯುಷ್ ಮಲಿಕ್!

Published : Jun 30, 2026, 12:34 PM IST
Ayush Malik Ghar Wapsi case

ಸಾರಾಂಶ

ಉತ್ತರ ಪ್ರದೇಶದ ಕೋಟ್ಯಾಧಿಪತಿ ಉದ್ಯಮಿಯ ಪುತ್ರ ಆಯುಷ್ ಮಲಿಕ್, ಫಿಸಿಯೋಥೆರಪಿಸ್ಟ್ ಪ್ರೇಮಕ್ಕೆ ಬಿದ್ದು ಇಸ್ಲಾಂಗೆ ಮತಾಂತರಗೊಂಡಿದ್ದರು. ಕುಟುಂಬದ ಆಸ್ತಿ ಲಪಟಾಯಿಸುವ ಪಿತೂರಿಯ ಆರೋಪದಡಿ ತನಿಖೆ ನಡೆಯುತ್ತಿದ್ದಂತೆಯೇ, ಇದೀಗ ಅವರು ಪೋಷಕರ ನೋವು ಕಂಡು 'ಘರ್ ವಾಪ್ಸಿ' ಮೂಲಕ ಹಿಂದೂ ಧರ್ಮಕ್ಕೆ ಮರಳಿದ್ದಾರೆ.

ಉತ್ತರ ಪ್ರದೇಶ: ಅವರದು ಸುಂದರ ಕುಟುಂಬ ಅಪ್ಪ ಆಗರ್ಭ ಶ್ರೀಮಂತ. ಅಪ್ಪ ಕೋಟ್ಯಂತರ ಮೌಲ್ಯದ ಔಷಧ ಉದ್ಯಮ ನಡೆಸುತ್ತಿದ್ದರು. ಕಂಪೆನಿಯ ಭವಿಷ್ಯವನ್ನು ನೋಡಿಕೊಂಡು ಅವರ ಪುತ್ರನಿಗೂ ಬಿ ಫಾರ್ಮ್ ವಿದ್ಯಾಭ್ಯಾಸ ಮಾಡಿಸಿದ್ದರು. ಹೀಗಿದ್ದ ಮಗನಿಗೆ ಒಂದು ದಿನ ಕಾಲಿನ ನೋವು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದ. ಈ ವೇಳೆ ಆತನ ಆರೈಕೆಗೆ ಫಿಸಿಯೋಥೆರಪಿಸ್ಟ್ ಒಬ್ಬಳು ನೇಮಕವಾದಳು. ಅಲ್ಲಿಂದ ಆತನ ಜೀವನ ಬದಲಾಯ್ತು. ಇದ್ದಕ್ಕಿದ್ದಂತೆಯೇ ಆತ ಹಿಂದೂ ಧರ್ಮ ತ್ಯಜಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ, ಮಾತ್ರವಲ್ಲ ಅಪ್ಪ ಅಮ್ಮನನ್ನು ತ್ಯಜಿಸಿ ಮನೆ ಬಿಟ್ಟಿದ್ದ. ಇದು ಇಡೀ ರಾಜ್ಯದಲ್ಲೇ ಭಾರೀ ಸುದ್ದಿಯಾಗಿತ್ತು. ಈ ಘಟನೆ ನಡೆದಿದ್ದೆಲ್ಲಿ? ಮುಂದೇನಾಯ್ತು ಎಂಬು ಸಂಪೂರ್ಣ ವಿವರ ಇಲ್ಲಿದೆ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಕೋಟ್ಯಾಧಿಪತಿ ಔಷಧ ಉದ್ಯಮಿ ದೇವರಾಜ್ ಮಲಿಕ್ ಅವರ ಪುತ್ರ ಆಯುಷ್ ಮಲಿಕ್ ಅವರ ಕಥೆ ಇದು. ಇವರ ಮತಾಂತರ ಪ್ರಕರಣವು ಇದೀಗ ಒಂದು ಪ್ರಮುಖ ತಿರುವು ಪಡೆದುಕೊಂಡಿದೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ಮಹಿಳೆಯನ್ನು ವಿವಾಹವಾಗಿದ್ದಾಗಿ ಹೇಳಿಕೊಂಡಿದ್ದ ಆಯುಷ್ ಮಲಿಕ್, ಈಗ ತಾವಾಗಿಯೇ ಮನಪರಿ ವರ್ತನೆ ಮಾಡಿಕೊಂಡು ಹಿಂದೂ ಧರ್ಮಕ್ಕೆ ಮರಳಿದ್ದಾರೆ. ತಮ್ಮ ಹೆತ್ತವರಿಗಾದ ತೀವ್ರ ಮಾನಸಿಕ ನೋವನ್ನು ಕಂಡು, ಅವರ ರಕ್ಷಣೆ ಹಾಗೂ ಆರೈಕೆಯಲ್ಲಿ ಬದುಕಲು ಸ್ವಯಂಪ್ರೇರಿತರಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಆಯುಷ್ ಕುಟುಂಬ ಹೇಳಿಕೊಂಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ 'ಘರ್ ವಾಪ್ಸಿ' ವಿಡಿಯೋ

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸರಿಸುಮಾರು 2 ನಿಮಿಷ 17 ಸೆಕೆಂಡುಗಳ ವಿಡಿಯೋವೊಂದು ಬಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಯುಷ್ ಮಲಿಕ್ ತಲೆ ಗಡ್ಡ ಬೋಳಿಸಿಕೊಂಡು ತಮ್ಮ ಮನೆಯ ದೇವರ ಕೋಣೆಯಲ್ಲಿ ಪೋಷಕರೊಂದಿಗೆ ಕುಳಿತು ಹನುಮಂತನಿಗೆ ಪೂಜೆ ಹಾಗೂ ಆಚರಣೆಗಳನ್ನು ಸಲ್ಲಿಸುತ್ತಿರುವುದು ಕಂಡುಬಂದಿದೆ. ಅಲ್ಲದೆ, ಪೋಷಕರ ಪಾದ ಮುಟ್ಟಿ ಆಶೀರ್ವಾದ ಪಡೆಯುವ ಆಯುಷ್, ವಿಡಿಯೋದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ನನ್ನ ಧರ್ಮವನ್ನು ಬದಲಾಯಿಸಿಕೊಂಡಿದ್ದೆ ನಿಜ. ಆದರೆ, ನನ್ನ ಹೆತ್ತವರ ಕಣ್ಣೀರು ಮತ್ತು ಇಡೀ ಕುಟುಂಬ ಪಡುತ್ತಿರುವ ಸಂಕಟವನ್ನು ಕಂಡು, ನನ್ನ ಸ್ವಂತ ಇಚ್ಛೆಯಿಂದಲೇ ಮತ್ತೆ ಸನಾತನ ಧರ್ಮಕ್ಕೆ ಮರಳುತ್ತಿದ್ದೇನೆ. ನನ್ನ ಕುಟುಂಬದೊಂದಿಗೆ ಅವರ ರಕ್ಷಣೆಯಲ್ಲಿ ಬಾಳಲು ಬಯಸುತ್ತೇನೆ. ನನ್ನ ತಪ್ಪಿಗೆ ಹೆತ್ತವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಆಯುಷ್ ತಂದೆ ದೇವರಾಜ್ ಮಲಿಕ್ ಕೂಡ ತಮ್ಮ ಮಗ ಔಪಚಾರಿಕವಾಗಿ ಸನಾತನ ಧರ್ಮವನ್ನು ಪುನಃ ಅಳವಡಿಸಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ವಿವಾದದ ಹಿನ್ನೆಲೆ

ಶಾಮ್ಲಿ ಜಿಲ್ಲೆಯ ಸದರ್ ಕೊತ್ವಾಲಿ ವ್ಯಾಪ್ತಿಯ ದಯಾನಂದ ನಗರದ ನಿವಾಸಿಯಾದ ಆಯುಷ್ ಮಲಿಕ್, ಕೆಲವು ದಿನಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು 'ಮೊಹಮ್ಮದ್ ಅಲಿ' ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಗಡ್ಡ ಬೆಳೆಸಿ, ಕೂದಲು ಬಿಟ್ಟು ಇಸ್ಲಾಮಿಕ್ ಸಾಂಪ್ರದಾಯಿಕ ಉಡುಗೆ ತೊಟ್ಟು, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ಹೊರಬಂದಾಗ ಇಡೀ ಉತ್ತರ ಪ್ರದೇಶವೇ ಬೆಚ್ಚಿಬಿದ್ದು ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು. ಈ ಬೆಳವಣಿಗೆ ಸ್ಥಳೀಯ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು ಮತ್ತು ಪೊಲೀಸರ ತನಿಖೆಗೆ ಒತ್ತಾಯಿಸಿದ್ದವು.

ಕೋಟ್ಯಂತರ ಆಸ್ತಿ ಲೂಟಿ ಮಾಡಲು ಬ್ರೈನ್‌ವಾಶ್ ಆರೋಪ

ಬಿ-ಫಾರ್ಮಾ ಪದವೀಧರನಾಗಿದ್ದ ಆಯುಷ್, ತನ್ನ ತಂದೆಯ ವೈದ್ಯಕೀಯ ವ್ಯವಹಾರವನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದನು. ಎಫ್‌ಐಆರ್‌ನಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ, 2018 ರಲ್ಲಿ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಆಯುಷ್‌ಗೆ ಭೌತಚಿಕಿತ್ಸಕಿ (Physiotherapist) ಚಾಂದನಿ ಖುರೇಷಿ ಎಂಬಾಕೆಯ ಪರಿಚಯವಾಗಿತ್ತು. ಈ ಪರಿಚಯ ಮುಂದೆ ಪ್ರೇಮಕ್ಕೆ ತಿರುಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಚಾಂದನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ, ಆಯುಷ್‌ನನ್ನು ವ್ಯವಸ್ಥಿತವಾಗಿ ಬ್ರೈನ್‌ವಾಶ್ ಮಾಡಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.

ಮಲಿಕ್ ಕುಟುಂಬದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ಹಿಡನ್ ಅಜೆಂಡಾದೊಂದಿಗೆ ಈ ಪಿತೂರಿ ನಡೆಸಲಾಗಿತ್ತು ಎನ್ನಲಾಗಿದೆ. 2023 ರಲ್ಲಿ ಆಯುಷ್‌ನನ್ನು ರಹಸ್ಯವಾಗಿ ದೆಹಲಿಗೆ ಕರೆದೊಯ್ದು, ಇಸ್ಲಾಂಗೆ ಮತಾಂತರಿಸಿ 'ನಿಕಾಹ್' (ಮದುವೆ) ಮಾಡಿಸಲಾಗಿತ್ತು. ಆದರೆ, ಪೊಲೀಸ್ ತನಿಖೆಯ ವೇಳೆ ಇವರ ಮದುವೆಗೆ ಸಂಬಂಧಿಸಿದ ಯಾವುದೇ ಕಾನೂನುಬದ್ಧ ವಿವಾಹ ಪ್ರಮಾಣಪತ್ರ ಪತ್ತೆಯಾಗಿಲ್ಲ.

ಕಾನೂನು ಕ್ರಮ ಮತ್ತು ಮೂವರ ಬಂಧನ

ಮಗ ಕಾಣೆಯಾದ ಹಾಗೂ ಮತಾಂತರಗೊಂಡ ವಿಷಯ ತಿಳಿಯುತ್ತಿದ್ದಂತೆ ತಂದೆ ದೇವರಾಜ್ ಮಲಿಕ್ ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಉತ್ತರ ಪ್ರದೇಶ ಪೊಲೀಸರು ಭೌತಚಿಕಿತ್ಸಕಿ (ಫಿಸಿಯೋಥೆರಪಿಸ್ಟ್) ಚಾಂದನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ ಸೇರಿದಂತೆ ಪ್ರಮುಖ ಆರೋಪಿಗಳನ್ನು 'ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆ' ಹಾಗೂ 'ಭಾರತೀಯ ನ್ಯಾಯ ಸಂಹಿತೆ (BNS)' ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಈ ಹೈಪ್ರೊಫೈಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಕಠಿಣ ಕಾನೂನು ಕ್ರಮದಡಿ ಜೈಲಿಗೆ ಕಳುಹಿಸಲಾಗಿದೆ. ಸದ್ಯ ಆಯುಷ್ ಮಲಿಕ್ ಅವರ ಈ ಹಠಾತ್ 'ಘರ್ ವಾಪ್ಸಿ' ವಿಡಿಯೋ ಇಡೀ ಪ್ರಕರಣಕ್ಕೆ ಹೊಸದೊಂದು ಆಯಾಮವನ್ನು ನೀಡಿದ್ದು, ತನಿಖೆ ಮುಂದುವರಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೂನ್ ಮುಗಿದ್ರೂ ಹೊಲ ಒದ್ದೆಯಾಗಿಲ್ಲ, ಅಕ್ಕಿ ದ್ವಿದಳಧಾನ್ಯ ಸೇರಿ ಸೋಯಾಬೀನ್ ಬೆಳೆಯಲ್ಲಿ ಭಾರೀ ಇಳಿಕೆ
ಮಾರ್ಕ್ ಜುಕರ್‌ಬರ್ಗ್ ಕನಸು! WhatsApp ಬಳಕೆ ಮಾಡೋರು 79 ರೂಪಾಯಿ ಕೊಡ್ಬೇಕು; ಯಾಕೆ?