
ನವದೆಹಲಿ: ಮಹಿಳೆಯ ತಲೆ ಇಲ್ಲದ ಬೆತ್ತಲೆ ದೇಹವೊಂದು ರಸ್ತೆಯಲ್ಲಿ ಎಸೆದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದ ಗುಜೈನಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಬಹುಶಃ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿ ಬಳಿಕ ದೇಹವನ್ನು ಹೆದ್ದಾರಿಯಲ್ಲಿ ಬಿಸಾಕಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬುಧವಾರ ಮುಂಜಾನೆ ಈ ಘಟನೆ ನಡೆದಿದ್ದು, ಈ ಮಹಿಳೆ ಯಾರು ಎಂಬುದನ್ನು ಪೊಲೀಸರಿಗೆ ಇನ್ನು ಬೇಧಿಸಲು ಸಾಧ್ಯವಾಗಿಲ್ಲ.
ಹೀಗೆ ನಿಗೂಢವಾಗಿ ಹತ್ಯೆಯಾದ ಮಹಿಳೆ ಯಾರಿರಬಹುದು ಎಂಬುದನ್ನು ತಿಳಿಯಲು ಘಟನಾ ಸ್ಥಳದ ಸುತ್ತಮುತ್ತ ಇರುವ ಸಿಸಿಟಿವಿಯನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ಮಹಿಳೆಯ ದೇಹ ಪತ್ತೆಯಾದ ಹೆದ್ದಾರಿಯ ಮತ್ತೊಂದು ಪಕ್ಕದಲ್ಲಿರುವ ಆಸ್ಪತ್ರೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವಂತೆ ಮೃತ ಮಹಿಳೆಯಂತೆಯೇ ಕಾಣುತ್ತಿದ್ದ ಮಹಿಳೆಯೊಬ್ಬರು ಗಂಟೆಗೂ ಮೊದಲು ನಡೆದುಕೊಂಡು ಹೋಗುತ್ತಿರುವುದು ಕಾಣಿಸಿದೆ. ಆ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಿಳೆ ಬೂದು ಬಣ್ಣದ ಪ್ಯಾಂಟ್ ಧರಿಸಿರುವುದು ಕಂಡು ಬಂದಿತ್ತು. ಅದೇ ರೀತಿ ಮಹಿಳೆಯ ದೇಹ ಸಿಕ್ಕ ಸ್ಥಳದಲ್ಲಿ ಬೂದು ಬಣ್ಣದ ಬಟ್ಟೆಯ ತುಂಡುಗಳು ಕಾಣಿಸಿವೆ.
ಪೊಲೀಸರ ಪ್ರಕಾರ ಮುಂಜಾನೆ 6.15ರ ಸುಮಾರಿಗೆ ಮಹಿಳೆಯ ದೇಹ ಹೈವೇಯಲ್ಲಿ ಕಾಣಿಸಿದೆ. ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಮಹಿಳೆಯ ದೇಹ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಆದರೆ ಇದಕ್ಕಿಂತ ಮೂರು ಕಿಲೋ ಮೀಟರ್ ದೂರದಲ್ಲಿ ಇದ್ದ ಸಿಸಿಟಿವಿಯಲ್ಲಿ ಮಹಿಳೆ ಒಂಟಿಯಾಗಿ ನಡೆದುಕೊಂಡು ಬರುತ್ತಿರುವ ದೃಶ್ಯ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಇದ್ದ ಮಹಿಳೆ ಧರಿಸಿದ ಬಟ್ಟೆ ಹಾಗೂ ಚಪ್ಪಲಿಗೂ ಹೈವೇಯಲ್ಲಿ ಮಹಿಳೆಯ ದೇಹ ಪತ್ತೆಯಾದಲ್ಲಿ ಸಿಕ್ಕ ಚಪ್ಪಲಿ ಹಾಗೂ ಬಟ್ಟೆಯ ತುಂಡುಗಳಿಗೂ ಸಾಮ್ಯತೆ ಇದೆ.
ಸಾವಿಗೆ ಏನು ಕಾರಣವಿರಬಹುದು ಎಂಬುದನ್ನು ತಿಳಿಯಲು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಗೂ ಮಹಿಳೆ ನಾಪತ್ತೆಯಾದ ಯಾವುದಾದರೂ ಪ್ರಕರಣಕ್ಕೂ ಸಂಬಂಧವಿರಬಹುದೇ ಎಂದು ನೋಡಿದರೆ ಜಿಲ್ಲೆಯಲ್ಲಿ ಮಹಿಳೆ ನಾಪತ್ತೆಯಾದ ಬಗ್ಗೆ ಎಲ್ಲಿಯೂ ಕೇಸ್ ದಾಖಲಾಗಿಲ್ಲ. ಹೀಗಾಗಿ ದೇಹ ಸಿಕ್ಕಿದ ಮೂರು ಕಿಲೋ ಮೀಟರ್ ದೂರದಲ್ಲಿ ಇದ್ದ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಅಲ್ಲಿನ ನಿವಾಸಿಗಳ ಬಳಿ ಈ ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕೂಡ ಭೇಟಿ ನೀಡಿದ್ದು, ಮಹಿಳೆಯ ಹಲ್ಲು ಹಾಗೂ ಮೂಳೆಯ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದೊಂದು ಅಪಘಾತ ಪ್ರಕರಣವೇ, ಅಥವಾ ಅಪರಾಧವಾಗಿರಬಹುದೇ ಹಾಗೂ ಮಹಿಳೆ ಸ್ಥಳೀಯ ನಿವಾಸಿಯೇ ಅಥವಾ ಹೊರಗಿನಿಂದ ಬಂದಿರುವವರೇ ಎಂಬ ಬಗ್ಗೆ ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.
ಕಾರವಾರದಲ್ಲಿ ಅರೆಬೆಂದ ಸ್ಥಿತಿಯಲ್ಲಿ 35 ವರ್ಷದ ಮಹಿಳೆ ಶವ ಪತ್ತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ