UP Elections : ಪದ್ರೌನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನೀಶ್ ಜೈಸ್ವಾಲ್ ಪಕ್ಷಕ್ಕೆ ರಾಜೀನಾಮೆ!

By Suvarna NewsFirst Published Jan 25, 2022, 9:29 PM IST
Highlights

ಆರ್ ಪಿಎನ್ ಸಿಂಗ್ ರಾಜೀನಾಮೆ ಬೆನ್ನಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಆಘಾತ
ಪದ್ರೌನಾ ಕ್ಷೇತ್ರದ ಅಭ್ಯರ್ಥಿ ಮನೀಶ್ ಜೈಸ್ವಾಲ್ ರಾಜೀನಾಮೆ
ಕುಶಿನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜ್ ಕುಮಾರ್ ಸಿಂಗ್ ಕೂಡ ಗುಡ್ ಬೈ

ಲಖನೌ (ಜ.25): ಕಾಂಗ್ರೆಸ್ (Congress) ಹಿರಿಯ ನಾಯಕ ಆರ್ ಪಿಎನ್ ಸಿಂಗ್ (RPN Singh) ಅವರು ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುವ ನಿರ್ಧಾರವು ಕಾಂಗ್ರೆಸ್ ಪಕ್ಷದ ಉತ್ತರ ಪ್ರದೇಶ ಘಟಕದಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಕಾಂಗ್ರೆಸ್ ಪಕ್ಷದ ಮಾಜಿ ಕೇಂದ್ರ ಸಚಿವ ಮಂಗಳವಾರ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ (BJP) ಸೇರಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆರಡು ಪ್ರಮುಖ ರಾಜೀನಾಮೆಗಳಾಗಿದ್ದು ಕುಶಿನಗರ (Kushinagar ) ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜ್ ಕುಮಾರ್ ಸಿಂಗ್‌ (Rajkumar Singh) ಹಾಗೂ ಪದ್ರೌನಾ (Padrauna )ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ಮನೀಷ್ ಜೈಸ್ವಾಲ್ (ಮಂಟು) (Manish Jaiswal 'Mantu' )ಪಕ್ಷಕ್ಕೆ ತಕ್ಷಣದಿಂದಲೇ ಜಾರಿಯಾಗುವಂತೆ ರಾಜೀನಾಮೆ ಸಲ್ಲಿಸಿದ್ದಾರೆ.

"ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪಕ್ಷದ ನಾಯಕತ್ವಕ್ಕೆ ನಾನು ಧನ್ಯವಾದ ಹೇಳುತ್ತೇನೆ, ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ನಾನು ನನ್ನ ಚುನಾವಣಾ ಟಿಕೆಟ್ ಅನ್ನು ಹಿಂದಿರುಗಿಸಲು ಬಯಸುತ್ತೇನೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಬಯಸುತ್ತೇನೆ" ಎಂದು ಜೈಸ್ವಾಲ್ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು (Ajay Kumar Lallu) ಅವರಿಗೆ ರಾಜೀನಾಮೆ ಪತ್ರವನ್ನು ರವಾನೆ ಮಾಡಲಾಗಿದೆ.

ಆರ್ ಪಿಎನ್ ಸಿಂಗ್ ಕುಶಿನಗರದ ಮಾಜಿ ಸಂಸದರಾಗಿದ್ದು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆರ್ ಪಿಎನ್ ಸಿಂಗ್, ಪದ್ರೌನಾ ಮೂಲದ ರಾಜಮನೆತನದ ಕುಡಿಯಾಗಿದ್ದಾರೆ. ಆರ್ ಪಿಎನ್ ಸಿಂಗ್ ಈ ಹಿಂದೆಯೂ ಪದ್ರೌನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಈ ಬಾರಿ ಅವರು ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಅವರು ಇತ್ತೀಚೆಗೆ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು 2009 ರಲ್ಲಿ ಕುಶಿನಗರ ಲೋಕಸಭಾ ಕ್ಷೇತ್ರದಲ್ಲಿ ಮಣಿಸಿದ್ದರು.

ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆಯ ಬಳಿಕ ಪೂರ್ವಾಂಚಲದಲ್ಲಿ ಬಿಜೆಪಿ ಹಿನ್ನಡೆ ಕಾಣುವ ಎಲ್ಲಾ ಸಾಧ್ಯತೆಗಳಿದ್ದವು. ಇದರ ಎಚ್ಚರಿಕೆಯನ್ನು ಅರಿತ ಬಿಜೆಪಿ ಈ ಕ್ಷೇತ್ರಕ್ಕೆ ಸೂಕ್ತ ನಾಯಕನ್ನು ಆಯ್ಕೆ ಮಾಡುವ ನಿರೀಕ್ಷೆಯಲ್ಲಿದ್ದಾಗಲೇ ಈಗಾಗಲೇ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಸೋಲಿಸಿದ ನಾಯಕನಾಗಿರುವ ಆರ್ ಪಿಎನ್ ಸಿಂಗ್ ಕಾಣಿಸಿದ್ದಾರೆ. ಅವರ ಸೆರ್ಪಡೆಯೊಂದಿಗೆ ಬಿಜೆಪಿ ಪಾಲಿಗೆ ದೊಡ್ಡ ಅತಂಕವೊಂದು ದೂರವಾಗಿದೆ. ಇನ್ನು ಸಮಾಜವಾದಿ ಪಕ್ಷದಿಂದ ಸ್ವಾಮಿ ಪ್ರಸಾದ್ ಮೌರ್ಯ(Swami Prasad Maurya) ಪದ್ರೌನಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.

UP Elections: ಕಾಂಗ್ರೆಸ್ ಸ್ಟಾರ್‌ ಪ್ರಚಾರಕನನ್ನೇ ಬಿಜೆಪಿ ಸೆಳೆದಿದ್ದು ಹೇಗೆ? ಬಯಲಾಯ್ತು ರಹಸ್ಯ!
ಈಗಾಗಲೇ ಮೂರು ಬಾರಿ ಶಾಸಕರಾಗಿರುವ ಆರ್ ಪಿಎನ್ ಸಿಂಗ್ ಹಾಗೂ ಸ್ವಾಮಿ ಪ್ರಸಾದ್ ಮೌರ್ಯ ನಡುವಿನ ಕದನ ಇಡೀ ಉತ್ತರ ಪ್ರದೇಶ ಚುನಾವಣೆಯ ಕಳೆ ಹೆಚ್ಚಿಸಿದ್ದು, ಹೈ ಪ್ರೊಫೈಲ್ ಸೀಟ್ ಅಗಿ ಮಾರ್ಪಟ್ಟಿದೆ. ಈ ನಡುವೆ ಸ್ವಾಮಿ ಪ್ರಸಾದ್ ಮೌರ್ಯ, ಆರ್ ಪಿಎನ್ ಸಿಂಗ್ ಚುನಾವಣೆಗೆ ನಿಲ್ಲುವ ಬಗ್ಗೆ ಮಾತನಾಡಿದ್ದು, ಸಮಾಜವಾದಿ ಪಕ್ಷದ ಸಾಮಾನ್ಯ ಕಾರ್ಯಕರ್ತ ಕೂಡ ಆರ್ ಪಿಎನ್ ಅನ್ನು ಸೋಲಿಸಲು ಶಕ್ತರಾಗಿದ್ದಾರೆ ಎಂದಿದ್ದಾರೆ. ಇನ್ನೊಂದೆಡೆ ಚುನಾವಣೆಯ ವೇಳೆ ಆರ್ ಪಿಎನ್ ಸಿಂಗ್ ಗೆ ಬಿಜೆಪಿ ಪಕ್ಷವು ಯಾವ ಹೊಣೆ ನೀಡಲಿದೆ ಎನ್ನುವುದು ಇನ್ನೂ ಕುತೂಹಲವಾಗಿಯೇ ಉಳಿದುಕೊಂಡಿದೆ.

UP Elections: ಬಿಜೆಪಿ ಟ್ರಂಪ್ ಕಾರ್ಡ್ ಆದ ಸ್ತ್ರೀಶಕ್ತಿ, ಠಕ್ಕರ್ ಕೊಡುವ ಪಡೆ!
ಜನವರಿ 14 ರಂದು ಉತ್ತರ ಪ್ರದೇಶ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಲಿಸ್ಟ್ ಪ್ರಕಟಿಸಿದ್ದ ಕಾಂಗ್ರೆಸ್ ಪದ್ರೌನಾ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಗೆ ಟಿಕೆಟ್ ಘೋಷಣೆ ಮಾಡಿತ್ತು. ಒಂದು ಕಾಲದಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಅವರ ನಿಕಟವರ್ತಿಯಾಗಿದ್ದ ಮನೀಶ್ ಜೈಸ್ವಾಲ್ ಅವರು 2012 ರ ಚುನಾವಣೆಯಲ್ಲಿ ಬಿಎಸ್ ಪಿಯಿಂದ ತಮ್ಕುಹಿರಾಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರಾದರೂ ಸೋಲು ಕಂಡಿದ್ದರು. 2017ರ ವಿಧಾನಸಭೆ ಚುನಾವಣೆಗೂ ಮುನ್ನ ಅವರು ಬಿಎಸ್‌ಪಿ ತೊರೆದು ಆರ್‌ಪಿಎನ್‌ ಸಿಂಗ್‌ ಅವರೊಂದಿಗೆ ಕಾಂಗ್ರೆಸ್‌ ಸೇರಿದ್ದರು. 2017 ರ ವಿಧಾನಸಭಾ ಚುನಾವಣೆಯಲ್ಲಿ ಮನೀಶ್ ಜೈಸ್ವಾಲ್ ಅವರ ತಾಯಿ ಶಿವಕುಮಾರಿ ದೇವಿ ಅವರು ಪದ್ರೌನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರೂ ಸೋಲು ಕಂಡಿದ್ದರು.

click me!