ವಿವಾದಿತ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ವಜಾ, ಯುಪಿಎಸ್‌ಸಿ ನಿರ್ಧಾರ

By Santosh Naik  |  First Published Jul 31, 2024, 3:44 PM IST

ಐಎಎಸ್‌ ಆಗಲು ನಕಲಿ ದಾಖಲೆ ಸಲ್ಲಿಕೆ ಮಾಡಿದ ಆರೋಪ ಹೊತ್ತಿದ್ದ ವಿವಾದಿತ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ಯುಪಿಎಸ್‌ಸಿ ಹುದ್ದೆಯಿಂದ ವಜಾ ಮಾಡಿದೆ. ಈ ಕುರಿತಾಗಿ ತನ್ನ ನಿರ್ಧಾರವನ್ನು ಸಂಸ್ಥೆ ಪ್ರಕಟಿಸಿದೆ.
 


ನವದೆಹಲಿ (ಜು.31): 2022 ರ ನಾಗರಿಕ ಸೇವಾ ಪರೀಕ್ಷೆಗೆ (CSE-2022) ತಾತ್ಕಾಲಿಕವಾಗಿ ಶಿಫಾರಸು ಮಾಡಲಾದ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ತಾತ್ಕಾಲಿಕ ಅಭ್ಯರ್ಥಿಯನ್ನು ಕೇಂದ್ರ ಲೋಕಸೇವಾ ಆಯೋಗ (UPSC) ರದ್ದುಗೊಳಿಸಿದೆ. ಆಯೋಗದ ಕೂಲಂಕಷ ಪರಿಶೀಲನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಲಿ ಹುದ್ದೆಯಿಂದ ವಜಾ ಮಾಡಿರುವ ಮಾತ್ರವಲ್ಲದೆ, ಭವಿಷ್ಯದ ಎಲ್ಲಾ ಯುಪಿಎಸ್‌ಸಿ ಪರೀಕ್ಷೆಗಳು ಹಾಗೂ ಸೆಲೆಕ್ಷನ್‌ನಿಂದ ಶಾಶ್ವತವಾಗಿ ಆಕೆಯನ್ನು ಡಿಬಾರ್‌ ಮಾಡಿ ಆದೇಶ ಹೊರಡಿಸಿದೆ.  2022ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪೂಜಾ ಖೇಡ್ಕರ್‌ ಉತ್ತೀರ್ಣರಾಗಿದ್ದರು. ಆ ಬಳಿಕ ಐಎಎಸ್‌ ತರಬೇತಿ ಶಾಲೆಯಲ್ಲಿ ಕಡ್ಡಾಯ ತರಬೇತಿಯನ್ನು ಪೂರ್ಣ ಮಾಡಿ ಪ್ರೊಬೇಷನರಿ ಅಧಿಕಾರಿಯಾಗಿ ನಿಯುಕ್ತಿಯಾಗಿದ್ದರು. ಆದರೆ, ಪ್ರೊಬೇಷನರಿ ಅಧಿಕಾರಿಯಾದ ಬೆನ್ನಲ್ಲಿಯೇ ನನಗೆ ಇಂಥದ್ದೇ ಕಾರು ಬೇಕು, ನನಗೆ ಇದೇ ರೀತಿಯ ಸವಲತ್ತಯಗಳು ಬೇಕು ಎಂದಿದ್ದ ಕಾರಣಕ್ಕೆ ಪೂಜಾ ಖೇಡ್ಕರ್‌ ಸುದ್ದಿಯಾಗಿದ್ದರು. ಈ ವಿಚಾರ ಮಾಧ್ಯಮದಲ್ಲಿ ಸುದ್ದಿಯಾದ ಬಳಿಕ ಆಕೆಯ ದಾಖಲೆಯನ್ನು ಕೂಲಂಕಷವಾಗಿ ಪರೀಕ್ಷೆ ಮಾಡಲಾಗಿತ್ತು.

ವಿವಾದಿತ ಐಎಎಸ್ ಅಧಿಕಾರಿ ಪೂಜಾ ನೇಮಕಾತಿ ರದ್ದು ಸಾಧ್ಯತೆ; ಇತ್ತ ತಾಯಿಯ ಕಂಪನಿಗೆ ಬಿತ್ತು ಬೀಗ

ಈ ಹಂತದಲ್ಲಿ ಆಕೆ ಸುಳ್ಳು ಒಬಿಸಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಿದ್ದು ಮಾತ್ರವಲ್ಲದೆ, ಅಂಗವೈಕಲ್ಯದ ಖೋಟಾದಲ್ಲಿ ಐಎಎಸ್‌ ಪರೀಕ್ಷೆ ಬರೆದಿದ್ದರು ಎನ್ನುವುದು ಗೊತ್ತಾಗಿತ್ತು. ಅಕ್ರಮ ದಾಖಲೆ ಸಲ್ಲಿಕೆ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಮಾಡಿದ ಯುಪಿಎಸ್‌ಸಿ, ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಅಭ್ಯರ್ಥಿತನವನ್ನೇ ರದ್ದು ಮಾಡಿದೆ.

Latest Videos

undefined

ಮಗಳ ಕಿತಾಪತಿ ನಂತರ ಅಮ್ಮನ ಅವಾಂತರವೂ ಬೆಳಕಿಗೆ: ಟ್ರೈನಿ ಐಎಎಸ್ ಅಧಿಕಾರಿಯ ತಾಯಿಯ ಬಂಧನ

ಪೂಜಾ ಖೇಡ್ಕರ್ ಅವರು ನಿಗದಿತ ಮಿತಿಗಿಂತ ಹೆಚ್ಚು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಹಲವು ಅಕ್ರಮ ಮಾರ್ಗಗಳನ್ನು ಅನುಸರಿಸಿರೋದು ದೃಢಪಟ್ಟಿತ್ತು. ಅದರೊಂದಿಗೆ ಅವರ ಹೆಸರು,  ಫೋಟೋ, ಸಹಿ, ಇ ಮೇಲ್ ಐಡಿ, ಮೊಬೈಲ್ ನಂಬರ್, ತಂದೆಯ ಹೆಸರು, ತಾಯಿಯ ಹೆಸರು ಹಾಗೂ ಮನೆ ವಿಳಾಸದ ನಕಲಿ ದಾಖಲೆ ನೀಡಿರೋದು ಸಾಬೀತಾಗಿತ್ತು. ಇದರ ಬೆನ್ನಲ್ಲಿಯೇ ಯುಪಿಎಸ್‌ಸಿ ಈಕೆಯ ವಿರುದ್ಧ ಎಫ್‌ಐ ಆರ್‌ ದಾಖಲು ಮಾಡಿತ್ತು.

ಪೂಜಾ ಖೇಡ್ಕರ್‌ ವಿರುದ್ಧ ಯುಪಿಎಸ್‌ಸಿ ಕ್ರಿಮಿನಲ್‌ ಆರೋಪ ಹೊರಿಸಿತ್ತು.  2022ರಲ್ಲಿ ಆಯ್ಕೆಯಾದ ಅವರ ಅಭ್ಯರ್ಥಿತನವನ್ನು ರದ್ದು ಮಾಡುವ ಕುರಿತಾಗಿ ಶೋಕಾಸ್ ನೋಟಿಸ್ (ಕಾರಣ ಕೇಳಿ ನೋಟಿಸ್) ಕೂಡಾ ಜಾರಿ ಮಾಡಿದೆ. ಜೊತೆಯಲ್ಲೇ ಭವಿಷ್ಯದಲ್ಲಿ ಪೂಜಾ ಖೇಡ್ಕರ್ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳೋದಕ್ಕೆ, ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗಿಯಾಗೋದಕ್ಕೆ ನಿರ್ಬಂಧ ಹೇರೋದಕ್ಕೂ  ತೀರ್ಮಾನ ಮಾಡಿದೆ.  

ಪ್ರೊಬೇಷನರಿ ಅಧಿಕಾರಿಯಾಗಿದ್ದ ಪೂಜಾ ಖೇಡ್ಕರ್‌, ತಮ್ಮ ಐಷಾರಾಮಿ ಆಡಿ ಕಾರ್‌ಗೆ ಕೆಂಪು ದೀಪ ಅಳವಡಿಸಿಕೊಂಡಿದ್ದರು. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ ಆಕೆಯ ಮಾಹಿತಿಗಳನ್ನು ಕಲೆಹಾಕಿದಾಗ ಒಂದೊಂದೆ ವಿವರಗಳು ಹೊರಬರಲು ಶುರುವಾಗಿದ್ದವು. ಹಿರಿಯ ಐಎಎಸ್‌ ಅಧಿಕಾರಿಗಳ ಕಚೇರಿಯ ದುರ್ಬಳಕೆ, ಹಲವು ಬಾರಿ ಪರೀಕ್ಷೆ ಎದುರಿಸಲು ನಕಲಿ ದಾಖಲೆ ನೀಡಿದ ಆರೋಪಗಳು ಆಕೆಯ ಮೇಲೆ ಒಂದೊಂದಾಗಿ ಬರತೊಡಗಿದವು.

Union Public Service Commission (UPSC) cancels the provisional candidature of Puja Manorama Dilip Khedkar, a provisionally recommended candidate of the Civil Services Examination-2022 (CSE-2022) and permanently debars her from all future exams and selections: UPSC

— ANI (@ANI)

 

 

click me!