ವಯನಾಡು ದುರಂತದಲ್ಲಿ ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಕೇರಳ ಸಿಎಂ ಮನವಿ ಮೇರೆಗೆ ಸೇನೆಯಿಂದ ವಿಶೇಷ ಶ್ವಾನದಳವನ್ನು ಕಳುಹಿಸಿಕೊಡಲಾಗಿದೆ.
ತಿರುವನಂತಪುರಂ (ಜು.31): ವಯನಾಡು ದುರಂತದಲ್ಲಿ ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಕೇರಳ ಸಿಎಂ ಮನವಿ ಮೇರೆಗೆ ಸೇನೆಯಿಂದ ವಿಶೇಷ ಶ್ವಾನದಳವನ್ನು ಕಳುಹಿಸಿಕೊಡಲಾಗಿದೆ. ಕೋರೆಹಲ್ಲುಗಳನ್ನು ಹೊಂದಿರುವ ಭಾರತೀಯ ಸೇನಾಪಡೆಯ ಶ್ವಾನದಳದಲ್ಲಿ ಬೆಲ್ಜಿಯನ್ ಮಾಲಿನೋಯಿಸ್ ,ಲಾಬ್ರಾಡಾರ್ಸ್ ಮತ್ತು ಜರ್ಮನ್ ಶೆಫರ್ಡ್ ನಂತಹ ಅನೇಕ ತಳಿಯ ನಾಯಿಗಳಿರಲಿವೆ. ಈ ಶ್ವಾನಗಳು ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾಗಲಿದ್ದು, ಮನುಷ್ಯರು ಮಣ್ಣಿನಾಳದಲ್ಲಿ ಹೂತಿದ್ದರೆ ಉಸಿರಾಟ ಮತ್ತು ವಾಸನೆಯ ಮೂಲಕ ಪತ್ತೆಹಚ್ಚುವ ಕೌಶಲ್ಯಗಳನ್ನು ಹೊಂದಿರುತ್ತದೆ. ಈ ಶ್ವಾನಗಳು ಉತ್ತರ ಪ್ರದೇಶದಲ್ಲಿ ಮೇರಠ್‌ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಕೇರಳ ಸಿಎಂ ವಿಶೇಷ ಮನವಿಯ ಮೇರೆಗೆ ದುರಂತದ ಸ್ಥಳಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ವಯನಾಡು ಬಳಿಕ ಕೇರಳದ ಮತ್ತೊಂದು ಜಿಲ್ಲೆಯಲ್ಲೂ 9 ಬಾರಿ ಭೂಕುಸಿತ, ಓರ್ವ ನಾಪತ್ತೆ, 12 ಮನೆಗಳು ಸರ್ವನಾಶ!
ಏರುತ್ತಲೇ ಇದೆ ಸಾವಿನ ಸಂಖ್ಯೆ!: ಕೇರಳದಲ್ಲಿ ಭೂಕುಸಿತದ ಪ್ರಾಕೃತಿಕ ದುರಂತ ಮತ್ತೆ ಮರುಕಳಿಸಿದೆ. ಕೇರಳದ ಸೌಂದರ್ಯದ ಪ್ರತೀಕವೆಂಬಂತಿರುವ ವಯನಾಡು ಜಿಲ್ಲೆಯಲ್ಲಿ ಮಂಗಳವಾರ ಭಾರೀ ಭೂಕುಸಿತ ಸಂಭವಿಸಿದ್ದು 4 ಹಳ್ಳಿಹಳು ಹೆಚ್ಚೂ ಕಡಿಮೆ ಸಂಪೂರ್ಣ ಕೊಚ್ಚಿ ಹೋಗಿವೆ ಹಾಗೂ ಈವರೆಗೆ 170 ಮಂದಿ ಸಾವನ್ನಪ್ಪಿದ್ದಾರೆ.
ಇನ್ನೂ ನೂರಾರು ಜನರು ಭೂಸಮಾಧಿಯಾಗಿರುವ ಇಲ್ಲವೇ ಅವಶೇಷಗಳ ಅಡಿ ಸಿಲುಕಿಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮನೆ, ಕಟ್ಟಡ, ಮರಗಳ ಅಡಿಯಲ್ಲಿ ಸಿಕ್ಕಿಬಿದ್ದಿರಬಹುದಾದ ಜನರ ರಕ್ಷಣೆಗೆ ಸೇನಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಸ್ಥಳೀಯ ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೆ ಸುರಿಯುತ್ತಿರುವ ಭಾರೀ ಮಳೆ, ಭೂಕುಸಿತ ಸಂಭವಿಸಿದ ಪ್ರದೇಶಗಳು ಇತರೆ ಪ್ರದೇಶಗಳಿಂದ ಸಂಪರ್ಕ ಕಡಿದುಕೊಂಡಿರುವುದು ಮತ್ತು ಈಗಲೂ ಅಲ್ಲಲ್ಲಿ ಭೂಕುಸಿತದ ಘಟನೆಗಳು ಮುಂದುವರೆದಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
wayanad landslide ಮನ ಕಲುಕಿದ ಶವಗಳ ನಡುವೆ ತಮ್ಮವರಿಗಾಗಿ ಹುಡುಕಾಟ, ಸಿಕ್ಕಿದವರ ಕಣ್ಣಲ್ಲಿ ನೀರು
ಏನಾಯ್ತು?: ವಯನಾಡು ಜಿಲ್ಲೆಯ ಹಲವು ಭಾಗಗಳಲ್ಲಿ ಸೋಮವಾರದಿಂದೀಚೆಗೆ ಭಾರೀ ಮಳೆ ಸುರಿದಿದೆ. ಪರಿಣಾಮ ಜಿಲ್ಲೆಯ ಚೂರಲ್‌ಮಾಲಾ, ಮುಂಡಕ್ಕಾಯ್, ಅಟ್ಟಮಲ ಮತ್ತು ನೂಲ್‌ಪುಳ ಗ್ರಾಮಗಳಲ್ಲಿ ಮಂಗಳವಾರ ನಸುಕಿನ ಜಾವ 1 ಗಂಟೆ ವೇಳೆಗೆ ಭೂಕುಸಿದ ಘಟನೆಗಳು ಆರಂಭವಾಗಿದ್ದು 6 ಗಂಟೆಯವೆರಗೂ ಮುಂದುವರೆದಿದೆ. ಭೂಕುಸಿದ ಪರಿಣಾಮ ಬೆಟ್ಟಪ್ರದೇಶಗಳಿಂದ ಬಂಡೆಗಳು, ದೊಡ್ಡದೊಡ್ಡ ಮರಗಳು ಭಾರೀ ವೇಗದಲ್ಲಿ ತಗ್ಗುಪ್ರದೇಶಗಳ ಮೇಲೆ ಅಪ್ಪಳಿಸಿದ್ದು ನೂರಾರು ಮನೆ, ಕಟ್ಟಡಗಳು ಭೂಸಮಾಧಿವಾಗಿದೆ. ಪರಿಣಾಮ ಸುಖನಿದ್ದೆಯಲ್ಲಿದ್ದ ನೂರಾರು ಜನರು ಮಲಗಿದ್ದಲ್ಲೇ ಸಾವನ್ನಪ್ಪಿದ್ದರೆ, ಇನ್ನು ಕೆಲವರು ನಾಪತ್ತೆಯಾಗಿದ್ದಾರೆ.
ಭೂಕುಸಿತದಲ್ಲಿ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ ಎನ್ನಲಾದ ಚೂರಲ್‌ಮಾಲಾ ಒಂದರಲ್ಲೇ 200ಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿವೆ ಎನ್ನಲಾಗಿದೆ. ಮತ್ತೊಂದೆಡೆ ಮುಂಡಕ್ಕಾಯ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆ ಕೊಚ್ಚಿಹೋಗಿದ್ದು, ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. 4 ಗ್ರಾಮಗಳಿಂದ ಈವರೆಗೂ 250ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಭೂಕುಸಿತದ ವೇಳೆ ಕೊಚ್ಚಿಹೋದ ವಾಹನಗಳು ಮಣ್ಣಿನಡಿ, ಮರಗಳ ಅಡಿ ಬಿದ್ದಿರುವ ದೃಶ್ಯಗಳು ಘಟನೆಯ ತೀವ್ರತೆಯನ್ನು ಸಾರಿಹೇಳಿವೆ. ಭೂಕುಸಿದ ಪರಿಣಾಮ ಹಲವು ಜಲಮೂಲಗಳು ಉಕ್ಕಿ ಹರಿಯುತ್ತಿದ್ದು, ತಮ್ಮ ಹರಿವಿನ ಹಾದಿಯನ್ನೇ ಬದಲಿಸಿ, ಜನವಸತಿ ಪ್ರದೇಶಗಳಿ ನುಗ್ಗಿ ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಿವೆ. ಘಟನಾ ಸ್ಥಳಗಳಲ್ಲಿ ಈಗಲೂ ಅಲ್ಲಲ್ಲಿ ಭೂಕುಸಿತದ ಘಟನೆಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.