Parliament Winter Session: ಅಮಾನತು ಹಿಂಪಡೆಯುವವರೆಗೂ ನಿತ್ಯವೂ 12 ಸಂಸದರಿಂದ ಧರಣಿ!

By Kannadaprabha NewsFirst Published Dec 2, 2021, 9:07 AM IST
Highlights

*ರಾಜ್ಯಸಭೆ ಕಲಾಪ ಪೂರ್ಣ ಬಲಿ, ಲೋಕಸಭೆಯಲ್ಲಿ ಅಡ್ಡಿ
*ಅಮಾನತು ಹಿಂಪಡೆಯುವವರೆಗೂ 12 ಸಂಸದರಿಂದ ಧರಣಿ
*ಹಿರಿಯ ಸಚಿವರ ಜೊತೆ ಪ್ರಧಾನಿ ಮೋದಿ ಕಾರ‍್ಯತಂತ್ರ ಸಭೆ 

ನವದೆಹಲಿ ( ಡಿ. 02): ಅಮಾನತುಗೊಂಡಿರುವ ಹನ್ನೆರಡು ರಾಜ್ಯಸಭಾ ಸಂಸದರು (Suspended Rajya Sabha MPs) ಅಮಾನತು ಹಿಂಪಡೆಯುವವರೆಗೆ ಸಂಸತ್ತಿನ ಆವರಣದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯೆದುರು ಪ್ರತಿದಿನ ಧರಣಿ (Protest) ನಡೆಸುವುದಾಗಿ ಹೇಳಿದ್ದಾರೆ. ಸರ್ಕಾರದ ನಿರ್ಧಾರವನ್ನು ನಿರಂಕುಶ ಧೋರಣೆ ಎಂದಿರುವ ವಿಪಕ್ಷ ಸದಸ್ಯರು, ಅಮಾನತು ಹಿಂಪಡೆಯುವವರೆಗೂ ಮುಂಜಾನೆ 10 ರಿಂದ ಸಂಜೆ 5 ರವರೆಗೆ ಸಂಸತ್ತಿನ ಆವರಣದಲ್ಲಿ ಧರಣಿ ಮುಂದುವರೆಸಲಿದ್ದೇವೆ ಎಂದಿದ್ದಾರೆ. 

3ನೇ ದಿನವೂ ವಿಪಕ್ಷಗಳಿಂದ ಕಲಾಪಕ್ಕೆ ಅಡ್ಡಿ

ಸಂಸತ್ತಿನ ಚಳಿಗಾಲದ ಅಧಿವೇಶನ (Parliament Winter Session) ಮೂರನೇ ದಿನವಾದ ಬುಧವಾರ ಕೂಡಾ ವಿಪಕ್ಷಗಳು ಲೋಕಸಭೆ (Lok Sabha) ಮತ್ತು ರಾಜ್ಯಸಭೆಯ (Rajya Sabha) ಕಲಾಪಕ್ಕೆ ಅಡ್ಡಿ ಮಾಡಿವೆ. ಪರಿಣಾಮ ರಾಜ್ಯಸಭೆಯ ಕಲಾಪ ಪೂರ್ಣವಾಗಿ ಬಲಿಯಾಗಿದ್ದರೆ, ಲೋಕಸಭೆಯಲ್ಲಿ ಮಧ್ಯಾಹ್ನದ ಬಳಿಕ ಕಲಾಪ ನಡೆದಿದೆ. ಲೋಕಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆ ಟಿಆರ್‌ಎಸ್‌ (TRS) ಪಕ್ಷದ ಸದಸ್ಯರು ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಗಲಾಟೆ ನಡೆಸಿದರು. ಸದನದ ಬಾವಿಗಳಿದು ಘೋಷಣೆಗಳನ್ನು ಕೂಗಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. 

Farm Laws Repeal: 'ಪ್ರತಿಭಟನೆ ವೇಳೆ ಮೃತ ರೈತರ ಲೆಕ್ಕ ಇಲ್ಲ, ಪರಿಹಾರ ನೀಡಲ್ಲ!'

ಕಲಾಪದ ಪ್ರಶ್ನೋತ್ತರ ಅವಧಿ ಬಹಳ ಮುಖ್ಯ ಹಾಗಾಗಿ ಸುಮ್ಮನಿರುವಂತೆ ಸಭಾಪತಿ ಓಂ ಬಿರ್ಲಾ ಮನವಿ ಮಾಡಿದರೂ ಸಹ ಸಂಸದರು ಪ್ರತಿಭಟನೆ ಮುಂದುವರೆಸಿದರು. ಹಾಗಾಗಿ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದ ನಂತರ ಕೆಲವು ವಿಷಯಗಳ ಮೇಲೆ ಚರ್ಚೆ ನಡೆಸಲಾಯಿತು. ಆದರೆ ಸಂಸತ್ತಿನ ಮೇಲ್ಮನೆಯಾದ  (Upper House) ರಾಜ್ಯಸಭೆಯಲ್ಲಿ 12 ಸಂಸದರ ಅಮಾನತು ರದ್ದುಗೊಳಿಸುವಂತೆ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರೆಯಿತು. ಪ್ರತಿಭಟನೆ ನಿಲ್ಲಿಸಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಮನವಿ ಮಾಡಿದರೂ ಸಹ ವಿಪಕ್ಷಗಳ ಪ್ರತಿಭಟನೆ ಮುಂದುವರೆಯಿತು. ಹಾಗಾಗಿ ಯಾವುದೇ ಚರ್ಚೆ ಇಲ್ಲದೇ ರಾಜ್ಯಸಭೆಯನ್ನು ಒಂದು ಮುಂದೂಡಲಾಯಿತು.

ಸಂಸತ್ತಿನಲ್ಲಿ ರೈತರ ವಿಷಯ, ಬೆಲೆಯೇರಿಕೆ ಹಾಗೂ ಪೆಗಸಾಸ್‌ ಧ್ವನಿ ಎತ್ತಿದ್ದ ಕಾರಣಕ್ಕೆ ನಮ್ಮನ್ನು ಅಮಾನತುಗೊಳಿಸಲಾಗಿದೆ. ಕ್ಷಮೆಯಾಚಿಸಲು ನಾವು ತಪ್ಪನ್ನು ಮಾಡಿಲ್ಲ. ಜನರ ಸಮಸ್ಯೆಯನ್ನು ಕಲಾಪದಲ್ಲಿ ಚರ್ಚಿಸಿದ್ದಕ್ಕಾಗಿ ಕ್ಷಮೆಯಾಚಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮುಂಗಾರು ಅಧಿವೇಶನದಲ್ಲಿ ತೋರಿದ ಅಶಿಸ್ತಿನ ವರ್ತನೆಯಿಂದಾಗಿ 12 ಸಂಸದರನ್ನು ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿತ್ತು.

ಹಿರಿಯ ಸಚಿವರ ಜೊತೆ ಮೋದಿ ಕಾರ‍್ಯತಂತ್ರ ಸಭೆ

ಹನ್ನೆರಡು ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯಲು ವಿಪಕ್ಷಗಳು ಪ್ರತಿಭಟಿಸಿ ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುತ್ತಿರುವ ಹಿನ್ನೆಲೆ ಸಂಸತ್ತಿನ ಚಳಿಗಾಲದ ಅಧಿವೇಶನದ ಮುಂದಿನ ಕಾರ್ಯತಂತ್ರವನ್ನು ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಬುಧವಾರ ಉನ್ನತ ಸಚಿವರೊಂದಿಗೆ ಸಭೆ ನಡೆಸಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಕಾನೂನು ಸಚಿವ ಕಿರಣ ರಿಜಿಜು ಹಾಗೂ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಷಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕ್ಷಮೆ ಕೇಳಲು ನಾವು ಸಾವರ್ಕರ್‌ ಅಲ್ಲ : ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ!

ಸಂಸತ್ತಿನ  ಮುಂಗಾರು ಅಧಿವೇಶನದಲ್ಲಿ (Parliament Winter Session) ದುರ್ವರ್ತನೆ ತೋರಿದ ಕಾರಣಕ್ಕಾಗಿ ಪ್ರಸಕ್ತ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡ 12 ರಾಜ್ಯಸಭಾ ಸದಸ್ಯರ ( Suspension Rajya Sabha Members) ಮೇಲಿನ ಶಿಸ್ತು ಕ್ರಮವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯನಾಯ್ಡು ಸ್ಪಷ್ಟಪಡಿಸಿದ್ದಾರೆ. ಆದರೆ, ಸದಸ್ಯರು ತಮ್ಮ ವರ್ತನೆ ಬಗ್ಗೆ ಕ್ಷಮೆ ಕೇಳಿದರೆ (apologise) ಅಮಾನತು ರದ್ದು ವಿಷಯವನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಲಿದೆ ಎಂದು ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಮತ್ತು ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಪೀಯೂಷ್‌ ಗೋಯಲ್‌ (Piyush Goyal) ಭರವಸೆ ನೀಡಿದ್ದಾರೆ.

ಈ ಬೆನ್ನಲ್ಲೇ ಅಮಾನತುಗೊಂಡ ಸದಸ್ಯರಲ್ಲಿ ಒಬ್ಬರಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (Communist Party of India)ನ ಬಿನೋಯ್ ವಿಶ್ವಂ ( Binoy Viswam) ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕ್ಷಮೆಯಾಚಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. “ಯಾವ ಕ್ಷಮೆಯಾಚನೆ? ಕ್ಷಮೆ ಕೇಳಲು ನಾವು ಸಾವರ್ಕರ್ ಅಲ್ಲ. ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ’’ ಎಂದು ವಿಶ್ವಂ ಹೇಳಿದ್ದಾರೆ.

click me!