
ಲಕ್ನೋ (ಮೇ.4): ಪಾತಕಿಗಳನ್ನ ಮಟ್ಟಹಾಕುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೋರಾಟ ಮುಂದುವರಿದಿದೆ. ಅತೀಕ್ ಅಹ್ಮದ್‌ನ ಪುತ್ರನನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಬಳಿಕ ಉತ್ತರ ಪ್ರದೇಶ ಎಸ್‌ಟಿಎಫ್ ಗುರುವಾರ ಮತ್ತೊಂದು ದೊಡ್ಡ ಎನ್‌ಕೌಂಟರ್ ನಡೆಸಿದೆ. ಗುರುವಾರ ಸಂಜೆಯ ವೇಳೆಗ ಪಾತಕಿ ಅನಿಲ್ ದುಜಾನಾನ ಹೆಡೆಮುರಿ ಕಟ್ಟಲು ಪೊಲೀಸರು ಯಶಸ್ವಿಯಾಗಿದ್ದಾರೆ. ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಉತ್ತರ ಪ್ರದೇಶದ ಗೌತಮ ಬುದ್ಧ ಜಿಲ್ಲೆಯ ಬಾದ್ಲಪುರ ಪೊಲೀಸ್ ಸ್ಟೇಷನ್‌ನ ದುಜಾನಾ ಗ್ರಾಮದ ವ್ಯಕ್ತಿ. ಪೊಲೀಸರ ಗುಂಡಿಗೆ ಬಲಿಯಾದ ದುಜಾನಾ ಪಶ್ಚಿಮ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಜನರ ಸುಲಿಗೆ ಮಾಡುವುದು ಮಾತ್ರವಲ್ಲದೆ, ಸಂಘಟಿತ ಕ್ರಿಮಿನಲ್ ಗ್ಯಾಂಗ್ ಕೂಡ ನಡೆಸುತ್ತಿದ್ದ. ಅತೀಕ್ ಅಹ್ಮದ್‌ನ ಪುತ್ರ ಅಸಾದ್‌ನನ್ನು ಜಾನ್ಸಿಯಲ್ಲಿ ಎನ್‌ಕೌಂಟರ್‌ನಲ್ಲಿ ಬಲಿ ಪಡೆದುಕೊಂಡ ಬಳಿಕ ಉತ್ತರ ಪ್ರದೇಶ ಎಸ್‌ಟಿಎಫ್‌ನ 2ನೇ ದೊಡ್ಡ ಬೇಟೆ ಇದಾಗಿದೆ. ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಅಸಾದ್ ಪ್ರಮುಖ ಆರೋಪಿಯಾಗಿದ್ದ. ಹಾಡಹಗಲಲ್ಲೇ ಉಮೇಶ್ ಪಾಲ್ ಮೇಲೆ ಅಸಾದ್ ಗುಂಡು ಹಾರಿಸಿ ಕೊಂದಿದ್ದ.
ಅನಿಲ್ ದುಜಾನಾ ವಿರುದ್ಧ ಉತ್ತರ ಪ್ರದೇಶದ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 62 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 18 ಕೊಲೆಗಳು, ಸುಲಿಗೆ, ದರೋಡೆ, ಭೂಕಬಳಿಕೆ, ತೆರವು ಸೇರಿದಂತೆ ಪ್ರಮುಖ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ ಮಾಫಿಯಾ ಮತ್ತು ದರೋಡೆಕೋರರ ವಿರುದ್ಧದ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅನಿಲ್ ದುಜಾನಾ ಎನ್‌ಕೌಂಟರ್ ನಡೆದಿದೆ.
ಅತೀಕ್ ಹತ್ಯೆ: ಯುಪಿ ಪೊಲೀಸರಿಗೆ ಮಾನವ ಹಕ್ಕು ಆಯೋಗ ನೋಟಿಸ್
2022ರ ಡಿಸೆಂಬರ್‌ನಲ್ಲಿ ದೆಹಲಿ ಪೊಲೀಸ್ ಮಯೂರ್ ವಿಹಾರ್ ಪ್ರದೇಶದದಿಂದ ಅನಿಲ್ ದುಜಾನನ್ನು ಬಂಧಿಸಿದ್ದರು. ಈತನನ್ನು ಹಿಡಿದುಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು. ಅದಲ್ಲದೆ, ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಅನಿಲ್ ದುಜಾನಾನ ಹೆಸರು ಕೂಡ ಸೇರಿತ್ತು. ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ), ಗೂಂಡಾ ಕಾಯಿದೆ ಸೇರಿದಂತೆ ಹಲವು ಆರೋಪಗಳಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಲವು ಪ್ರಕರಣಗಳಲ್ಲಿ ಹಾಜರಾಗದ ಕಾರಣ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಬಾದಲ್ಪುರ ನ್ಯಾಯಾಲಯವು ದುಜಾನಾಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
'ನನ್ ಹೆಂಡ್ತಿಗೆ ಸೊಳ್ಳೆ ಕಚ್ತಿದೆ..' ಎಂದು ಟ್ವೀಟ್ ಮಾಡಿದ ವ್ಯಕ್ತಿಗೆ ಸೊಳ್ಳೆಬತ್ತಿ ತಂದುಕೊಟ್ಟ ಪೊಲೀಸ್!
ಸಿಕ್ಕಿರುವ ಮಾಹಿತಿಗಳ ಪ್ರಕಾರ, ಮೀರತ್‌ನ ಭೋಲಾ ಝಾಲ್ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಅನಿಲ್ ದುಜಾನಾ ಬಹಳ ಆಕ್ಟೀವ್ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರ ಬೆನ್ನಲ್ಲಿಯೇ ಕ್ರಮ ಕೈಗೊಂಡ ಎಸ್‌ಟಿಎಫ್, ಆತನನ್ನು ಸುತ್ತುವರಿಯಲು ಪ್ರಯತ್ನ ಆರಂಭಿಸಿತ್ತು. ಇದಾದ ಬಳಿಕ ಅನಿಲ್ ದುಜಾನಾ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಪೊಲೀಸರೂ ಪ್ರತಿದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದ್ದಾರೆ.
ಸುಂದರ್ ಭಾಟಿ ಬ್ಯಾಂಗ್ ಜೊತೆ ವೈರತ್ವ: ಅನಿಲ್ ದುಜಾನಾ ವಿರುದ್ಧದ ಮೊದಲ ಪ್ರಕರಣವನ್ನು 2002 ರಲ್ಲಿ ದಾಖಲು ಮಾಡಲಾಗಿತ್ತು.ಬಳಿಕ ನರೇಶ್ ಭಾಟಿ ಗ್ಯಾಂಗ್‌ಗೆ ಅನುಲ್ ದುಜಾನಾ ಸೇರಿಕೊಂಡರಾದರೂ, ನರೇಶ್ ಭಾಟಿಯನ್ನು ಸುಂದರ್ ಭಾಟಿ ಕೊಂದಿದ್ದರು. ಇದರಿಂದಾಗಿ ಕುಖ್ಯಾತ ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಕುಖ್ಯಾತ ಮಾಫಿಯಾ ಡಾನ್ ಸುಂದರ್ ಭಾಟಿ ಮತ್ತು ಅವನ ಗ್ಯಾಂಗ್‌ನೊಂದಿಗೆ ದೊಡ್ಡ ಮಟ್ಟದ ವೈರತ್ವ ಹೊಂದಿದ್ದ. 2012ರಲ್ಲಿ ಅನಿಲ್ ದುಜಾನಾ ಗ್ಯಾಂಗ್ ಸುಂದರ್ ಭಾಟಿ ಮತ್ತು ಆತನ ಆಪ್ತರ ಮೇಲೆ ಹಲ್ಲೆ ನಡೆಸಿತ್ತು. ಇವರಿಬ್ಬರ ದ್ವೇಷದಿಂದ ಹಲವು ಕೊಲೆಗಳು ನಡೆದಿವೆ. ಸುಂದರ್ ಭಾಟಿಯ ಹೆಸರು ಇತ್ತೀಚೆಗೆ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರ ಹತ್ಯೆಯಲ್ಲೂ ಸುದ್ದಿಯಲ್ಲಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ