
ಲಕ್ನೋ (ಏ.1): ಕೇವಲ ಆಹಾರ ಪದಾರ್ಥ ಕಳ್ಳತನ ಮಾಡಿದ್ದಾನೆ ಎಂಬ ಸಣ್ಣ ಕಾರಣಕ್ಕಾಗಿ 7 ವರ್ಷದ ಪುಟ್ಟ ಬಾಲಕನೊಬ್ಬನನ್ನು ಸುಮಾರು ಐದು ಗಂಟೆಗಳ ಕಾಲ ಡೀಪ್ ಫ್ರೀಜರ್‌ನಲ್ಲಿ ಕೂಡಿಹಾಕಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆರೋಪಿ ಅಂಗಡಿ ಮಾಲೀಕ 'ಆಜಾದ್' ಎಂಬಾತನನ್ನು ಬಂಧಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಆರೋಪಿ ಆಜಾದ್ ಡೀಪ್ ಫ್ರೀಜರ್ ತೆರೆದು ಅತೀವ ಚಳಿಯಿಂದ ನಡುಗುತ್ತಿದ್ದ ಬಾಲಕನನ್ನು ಪ್ರಶ್ನಿಸುವುದು ಮತ್ತು ಮತ್ತೆ ಆತನನ್ನು ಫ್ರೀಜರ್ ಒಳಗೆ ಹಾಕಿ ಲಾಕ್ ಮಾಡುವುದು ಕಂಡುಬಂದಿದೆ. ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ಕಾರಣಕ್ಕಾಗಿ ಮಗುವಿಗೆ ಪಾಠ ಕಲಿಸಲು ಈ ರೀತಿ ಮಾಡಿದ್ದಾಗಿ ಅರೋಪಿ ವಿಚಿತ್ರವಾಗಿ ಸಮರ್ಥಿಸಿಕೊಂಡಿದ್ದಾನೆ. ಮಗು ಫ್ರೀಜರ್ ಒಳಗಿನಿಂದ ಎಷ್ಟೇ ಕಿರುಚಿದರೂ, ರಕ್ಷಿಸುವಂತೆ ಬೇಡಿಕೊಂಡರೂ ಆರೋಪಿ ಮಾತ್ರ ಮನಸ್ಸು ಕರಗದೆ ಕ್ರೂರವಾಗಿ ವರ್ತಿಸಿದ್ದಾನೆ. ಕೊನೆಗೆ ಮಗುವಿನ ಚೀರಾಟ ಕೇಳಿದ ಸ್ಥಳೀಯರು ಮಧ್ಯಪ್ರವೇಶಿಸಿ ಫ್ರೀಜರ್‌ನಿಂದ ಆತನನ್ನು ರಕ್ಷಿಸಿದ್ದಾರೆ.
ವಿಡಿಯೋದಲ್ಲಿ ಆರೋಪಿಯು ಬಾಲಕನಿಗೆ ಪ್ರಾಣ ಬೆದರಿಕೆ ಹಾಕಿರುವುದು ಸ್ಪಷ್ಟವಾಗಿದೆ. "ನೀನು ಮತ್ತೆ ಕಳ್ಳತನ ಮಾಡ್ತೀಯಾ? ಕಳ್ಳತನ ಮಾಡಿಲ್ಲ ಎಂದು ನೀನು ಹೇಳುತ್ತಿರುವುದು ಸುಳ್ಳಲ್ಲವೇ? ನಿನ್ನ ಹೆಸರೇನು?" ಎಂದು ಬಾಲಕನನ್ನು ರೇಗಿಸುತ್ತಾ ಅಶ್ಲೀಲವಾಗಿ ನಿಂದಿಸಿದ್ದಾನೆ. ಇದರ ನಡುವೆ, ಆರೋಪಿಯು ಚಾಕು ಹಿಡಿದು ಬಾಲಕನ ಕತ್ತು ಸೀಳುವುದಾಗಿ ಬೆದರಿಸಿದ್ದಾನೆ. ಭಯದಿಂದ ನಡುಗುತ್ತಿದ್ದ ಮಗು ತಾನು ಕಳ್ಳತನ ಮಾಡಿಲ್ಲ ಎಂದು ವಾದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ತನ್ನ ಮಗುವಿನ ಮೇಲಿನ ಈ ಕ್ರೂರ ಕೃತ್ಯದ ವಿರುದ್ಧ ಬಾಲಕನ ತಂದೆ ದೂರು ನೀಡಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕಂಬಿ ಹಿಂದೆ ತಳ್ಳಿದ್ದಾರೆ ಮತ್ತು ಕಾನೂನು ಕ್ರಮ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ