ತಾನು ಹೇಳಿದ ಪಕ್ಷಕ್ಕೆ ಮತ ಹಾಕದ ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ

By Anusha KbFirst Published Mar 23, 2022, 3:57 PM IST
Highlights
  • ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ
  • ಉತ್ತರಪ್ರದೇಶ ಚುನಾವಣೆಯಲ್ಲಿ ತನ್ನಿಷ್ಟದ ಪಕ್ಷಕ್ಕೆ ಮತ ಹಾಕದ್ದಕ್ಕೆ ಥಳಿತ
  • ಪ್ರಕರಣ ದಾಖಲಿಸುವಂತೆ ಸೂಚಿಸಿದ ಮಹಿಳಾ ಆಯೋಗ

ಬರೇಲಿ: ಇತ್ತೀಚೆಗಷ್ಟೇ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಆಯ್ಕೆಯ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಮನೆಯಿಂದ ಹೊರ ಹಾಕಿರುವ ವಿಚಿತ್ರ ಘಟನೆ ನಡೆದಿದೆ. ಮಾರ್ಚ್ 11 ರಂದು ಬರೇಲಿಯ ಬರಾದರಿ ಪ್ರದೇಶದಲ್ಲಿ ಮಹಿಳೆಯನ್ನು ಪತಿ ಮನೆಯಿಂದ ಹೊರಹೋಗುವಂತೆ ಒತ್ತಾಯಿಸಿದ್ದಾನೆ. ಇದಕ್ಕೂ ಮೊದಲ ಪತ್ನಿ ಚುನಾವಣೆಯಲ್ಲಿ ತಾನು ಮತ ಹಾಕಿದ ಅಭ್ಯರ್ಥಿ ಗೆದ್ದಿದ್ದಕ್ಕೆ ಸಂತೋಷವಾಗಿದೆ ಎಂದು ಸಂಬಂಧಿಕರೊಬ್ಬರಲ್ಲಿ ಹೇಳಿದ್ದಳು ಎಂದು ತಿಳಿದು ಬಂದಿದೆ. ಈ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವೂ (ಎನ್‌ಸಿಡಬ್ಲ್ಯೂ) ಉತ್ತರಪ್ರದೇಶ ರಾಜ್ಯ ಪೊಲೀಸರಿಗೆ ಸೂಚನೆ ನೀಡಿದ್ದು, ಪತ್ನಿಯನ್ನು ಮನೆಯಿಂದ ಹೊರ ಹಾಕಿದ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿದೆ. 

21ರ ಹರೆಯದ ಪತ್ನಿಗೆ ವಿಚ್ಛೇದನ ನೀಡುವುದಾಗಿ ಪತಿ ಬೆದರಿಕೆ ಹಾಕಿದ್ದಾನೆ. ಪತಿ (Husband) ವಿರುದ್ಧ ಮಹಿಳೆ ಇನ್ನೂ ಅಧಿಕೃತ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಮಹಿಳೆಗೆ ಮಾರ್ಚ್ 11 ರಂದು ಬರೇಲಿಯ (Bareilly)  ಬರಾದರಿ ಪ್ರದೇಶದಲ್ಲಿ ತನ್ನ ಗಂಡನ ಮನೆಯಿಂದ ಹೊರಹೋಗುವಂತೆ ಒತ್ತಾಯಿಸಲಾಗಿತ್ತು. ಅವಳು ತಾನು ಮತ ಹಾಕಿದ ಅಭ್ಯರ್ಥಿಯು ಚುನಾವಣೆಯಲ್ಲಿ ಗೆದ್ದಿದ್ದಕ್ಕೆ ಸಂತೋಷವಾಗಿದೆ ಎಂದು ತನ್ನ ಸಂಬಂಧಿಕರಲ್ಲಿ ಹೇಳಿದ್ದು, ಈ ವಿಚಾರ ಪತಿಗೆ ತಿಳಿದು ಪತ್ನಿ ತಾನು ಹೇಳಿದವರಿಗೆ ಮತ ಹಾಕಿಲ್ಲ ಎಂಬುದು ಗೊತ್ತಾಗಿದೆ. 

Latest Videos

News Hour ಪಂಚರಾಜ್ಯದ ಮಹಾತೀರ್ಪು, ಉತ್ತರಪ್ರದೇಶದಲ್ಲಿ ಬಿಜೆಪಿ ಬಲಿಷ್ಠ, ಪಂಜಾಬ್ ನಲ್ಲಿ ಕಾಂಗ್ರೆಸ್ ಧೂಳಿಪಟ!

ತಾನು ಮತ ಚಲಾಯಿಸಿದ ಪಕ್ಷವು ಭಾರತದಲ್ಲಿ ಮುಸ್ಲಿಂ ಮಹಿಳೆಯರ ಸ್ಥಿತಿಯನ್ನು ಸುಧಾರಿಸಲು ಬಲವಾದ ಕಾನೂನುಗಳನ್ನು ತಂದಿದೆ ಎಂದು ಮಹಿಳೆ ಹೇಳಿದ್ದಾಳೆ ಎನ್ನಲಾಗಿದೆ. ಇದಾದ ಬಳಿಕ ಪತಿ ಆಕೆಯನ್ನು ಥಳಿಸಿದ್ದಾನೆ. ನಂತರ ಆಕೆ ಎನ್‌ಜಿಒವೊಂದರ ಸಹಾಯವನ್ನು ಕೋರಿದ್ದಾಳೆ. ಅದು ಮಾಧ್ಯಮಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಪೊಲೀಸರಿಗೆ ಮಾಹಿತಿ ನೀಡಿದೆ.

ಮಾಧ್ಯಮ ವರದಿಗಳನ್ನು ಗಮನಿಸಿದ ಎನ್‌ಸಿಡಬ್ಲ್ಯೂ (NCW) ಅಧ್ಯಕ್ಷೆ ರೇಖಾ ಶರ್ಮಾ (Rekha Sharma) ಅವರು ಮಹಿಳೆಯ ಪತಿ ಮತ್ತು ಆಕೆಯ ಮಾವನ ಮನೆಯವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯುಪಿ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದಾರೆ. 2021 ರಲ್ಲಿ ಈ ಜೋಡಿ ಪ್ರೇಮ ವಿವಾಹವಾಗಿತ್ತು ಮತ್ತು ಎರಡೂ ಕುಟುಂಬಗಳು ನೆರೆಹೊರೆಯವರಾಗಿದ್ದಾರೆ.

ಮತ್ತೆ ಕೇಸರಿಯಾದ ಉತ್ತರ... ಸಿಎಂ ಯೋಗಿ ವೇಷ ಧರಿಸಿದ ಪುಟಾಣಿ...

ಬರಾದರಿ ಎಸ್‌ಎಚ್‌ಒ ನೀರಜ್ ಮಲಿಕ್ (Neeraj Malik) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಿಳೆ ಲಿಖಿತ ದೂರಿನೊಂದಿಗೆ ಇನ್ನೂ ಪೊಲೀಸರನ್ನು ಸಂಪರ್ಕಿಸಿಲ್ಲ. ಆಕೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ. ಪತಿ ವಿರುದ್ಧ ಕ್ರಮ ಕೈಗೊಳ್ಳಲು ಬಯಸಿದರೆ ಎಫ್‌ಐಆರ್‌ ದಾಖಲಿಸುತ್ತೇವೆ. ಮತ್ತು ವೈವಾಹಿಕ ವಿವಾದವನ್ನು ಮಧ್ಯಸ್ಥಿಕೆ ವಹಿಸಿ ಪರಿಹರಿಸಬೇಕೆಂದು ಅವಳು ಬಯಸಿದರೆ, ಅವರ ಮದುವೆಯು ಮುರಿದುಹೋಗದಂತೆ ನಾವು ಪ್ರಕರಣವನ್ನು ಮಧ್ಯಸ್ಥಿಕೆ ಕೋಶಕ್ಕೆ ವರ್ಗಾಯಿಸುತ್ತೇವೆ ಎಂದು ಹೇಳಿದ್ದಾರೆ.

ಇತ್ತ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಗೆದ್ದು ಬಂದಿದ್ದು, ಯೋಗಿ ಆದಿತ್ಯನಾಥ್‌  ಮತ್ತೆ ಸಿಎಂ ಆಗಲಿದ್ದಾರೆ. ಮಾರ್ಚ್ 25 ರಂದು ಸಂಜೆ 4 ಗಂಟೆಗೆ ಅಟಲ್ ಬಿಹಾರಿ ವಾಜಪೇಯಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಯೋಗಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಯೋಗಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅನೇಕ ದೊಡ್ಡ ನಾಯಕರು ಭಾಗವಹಿಸಲಿದ್ದಾರೆ.

click me!