
ಉತ್ತರಪ್ರದೇಶ: ದರೋಡೆಕೋರರಿಂದ ಹತ್ಯೆಯಾದ ಯುವಕನೋರ್ವನ ಸೋದರಿಯ ಮದುವೆಯನ್ನು ಪೊಲೀಸರೇ ಮುಂದೆ ನಿಂತು ಮಾಡಿದಂತಹ ಮಾನವೀಯ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಗೊಂಡಾದ ಎಸ್‌ಪಿ ವಿನೀತ್ ಜೈಸ್ವಾಲ್ ಹಾಗೂ ತನ್ವಿ ಜೈಸ್ವಾಲ್ ಅವರು ಈ ಮದುವೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಏಪ್ರಿಲ್ 26 ರಂದು ಉದಯಕುಮಾರಿ ಎಂಬ ಯುವತಿಯ ಮದುವೆ ನಡೆಯಬೇಕಿತ್ತು. ಆದರೆ ಮದುವೆಗೆ ಎರಡು ದಿನಗಳಿರುವಾಗ ಏಪ್ರಿಲ್ 24ರಂದು ಆಕೆಯ ಮನೆಯಲ್ಲಿ ದರೋಡೆ ನಡೆದಿದ್ದು, ಆಕೆಯ ಸೋದರನನ್ನು ದರೋಡೆಕೋರರು ಹತ್ಯೆ ಮಾಡಿದ್ದಲ್ಲದೇ ಮನೆಯಲ್ಲಿ ಮದುವೆಗಾಗಿ ಕೂಡಿಟ್ಟ ಹಣ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದರು. ಇದರಿಂದ ಭಯಗೊಂಡ ವರನ ಕುಟುಂಬದವರು ಮದುವೆಯನ್ನೇ ರದ್ದು ಮಾಡಿದ್ದರು.
ಈ ವಿಚಾರ ಪೊಲೀಸ್ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಕೂಡಲೇ ಪೊಲೀಸರು ಈ ಕುಟುಂಬದ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಕೇವಲ ಮದುವೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಮಾತ್ರವಲ್ಲದೇ ವರನ ಕುಟುಂಬದೊಂದಿಗೂ ಮಾತುಕತೆ ನಡೆಸಿ, ಮದುವೆಗಾಗಿ ಹೊಸ ದಿನಾಂಕವನ್ನು ಕೂಡ ನಿಗದಿ ಮಾಡಿದ್ದಾರೆ.
ಎಸ್ಪಿ ವಿನೀತ್ ಜೈಸ್ವಾಲ್ ನೇತೃತ್ವದ ಪೊಲೀಸ್ ಸಿಬ್ಬಂದಿ ವಧುವಿಗೆ 1 ಲಕ್ಷದ 51 ಸಾವಿರ ರೂಪಾಯಿ ನಗದು, ಆಭರಣ ಮತ್ತು ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದು ಮಾತ್ರವಲ್ಲದೆ, ಮದುವೆ ಸ್ಥಳದಲ್ಲಿ ವಧುವಿನ ಕುಟುಂಬದವರಂತೆ ಭಾಗಿಯಾಗಿ ವರನ ಕುಟುಂಬವನ್ನು ಸ್ವಾಗತಿಸುವ ಕೆಲಸವನ್ನು ಮಾಡಿದ್ದಾರೆ. ಹೀಗೆ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಹೊರುವ ಮೂಲಕ ಅಣ್ಣನಿಲ್ಲದ ಕೊರತೆಯನ್ನು ಪೊಲೀಸರು ನೀಗಿಸಿದ್ದಾರೆ.
ಈ ಮಧ್ಯೆ ಆಕೆಯ ಸಹೋದರನನ್ನು ಕೊಂದು ಆಕೆಯ ಮದುವೆಯ ಹಣವನ್ನು ಲೂಟಿ ಮಾಡಿದ ಡಕಾಯಿತ ನಾಯಕ ಗ್ಯಾನ್ ಚಂದ್‌ನನ್ನು, ಮೇ 8 ರಂದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಇನ್ಸ್‌ಪೆಕ್ಟರ್ ಅರುಣ್ ಸಿಂಗ್ ನೇತೃತ್ವದ ವಿಶೇಷ ಕಾರ್ಯಪಡೆ ತಂಡದೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಡಕಾಯಿತ ಗ್ಯಾನ್ ಚಂದ್ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆತ ಸಾವನ್ನಪ್ಪಿದರು. ಗ್ಯಾನ್‌ಚಂದ್ ಸೆರೆಗೆ ಪೊಲೀಸರು ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ಪೊಲೀಸರು ಆತನಿಂದ ಅಕ್ರಮವಾಗಿದ್ದ 32 ಬೋರ್ ಪಿಸ್ತೂಲ್, ಒಂದು ರೈಫಲ್, 315 ಬೋರ್, ಒಂದು 12 ಬೋರ್ ಗನ್ ಮತ್ತು ದೊಡ್ಡ ಪ್ರಮಾಣದ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ