
ನವದೆಹಲಿ (ಆ.18): ಕಳೆದ ಬಾರಿ ಅಮೇಥಿಯಲ್ಲಿ ಸೋಲುವ ಭಯದಲ್ಲಿ ಕೇರಳದ ವಯನಾಡಿನಿಂದಲೂ ಸ್ಪರ್ಧೆಗೆ ಇಳಿದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಅಮೇಥಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಅಜಯ್ ರೈ ಹೇಳಿದ್ದಾರೆ. ಗುರುವಾರ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಾರಣಾಸಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಈ ಬಾರಿಯೂ ಅಮೇಥಿಯಿಂದ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಬೇಕು ಎನ್ನುವುದು ನಮ್ಮ ಮನವಿ. ಅವರು ಕಣಕ್ಕಿಳಿದರೆ, ವಾರಣಾಸಿಯಿಂದ ಚುನಾವಣಾ ಸ್ಪರ್ಧೆಗೆ ಇಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಂಸದೆಯಾಗಿದ್ದರೆ, ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರ ಕ್ಷೇತ್ರವಾಗಿದೆ. ನಾನು ರಾಹುಲ್ ಗಾಂಧಿಯ ಸೈನಿಕ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ. ರಾಹುಲ್ ಗಾಂಧಿಯವರ ಸಂದೇಶವನ್ನು ಮನೆ ಮನೆಗೆ ಕೊಂಡೊಯ್ಯಲಾಗುವುದು ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಜನರು ಅಜಯ್ ರೈ ಅವರನ್ನು ಸ್ವಾಗತಿಸಿದ್ದಾರೆ. ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿ ಕಾಂಗ್ರೆಸ್ ಧ್ವಜವನ್ನು ಬೀಸಿ ಸ್ವಾಗತ ಮಾಡಿದರು. ವಿಮಾನ ನಿಲ್ದಾಣದಿಂದ ಹೊರಬಂದ ತಕ್ಷಣ ಅಜಯ್ ರೈ, “ರಾಹುಲ್ ಗಾಂಧಿಯವರ ಜನಪ್ರಿಯತೆಗೆ ಅಮೇಥಿಯ ನೂರಾರು ಜನರು ಸಾಕ್ಷಿಯಾಗಿದ್ದಾರೆ. ಅಮೇಥಿ ಸಂಸದೆ ಸ್ಮೃತಿ ಇರಾನಿ 13 ರೂ.ಗೆ ಸಕ್ಕರೆ ನೀಡುತ್ತೇನೆ ಎಂದು ಹೇಳಿದ್ದರು. ಈಗ ಅವರು ಹೇಳಿದ 13 ರೂಪಾಯಿಯ ಸಕ್ಕರೆ ಎಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯಾಧ್ಯಕ್ಷನಾಗಿ ತಳಮಟ್ಟದ ಕಾರ್ಯಕರ್ತರಿಗೆ ಪ್ರಾಮುಖ್ಯತೆ ನೀಡುವುದು, ಸಂಘಟನೆಯನ್ನು ಕ್ರಿಯಾಶೀಲಗೊಳಿಸುವುದು, ದಲಿತರು, ರೈತರು, ಮಹಿಳೆಯರು, ಯುವಕರು, ಮಧ್ಯಮ ವರ್ಗದ ಜನರನ್ನು ಕಾಂಗ್ರೆಸ್‌ನೊಂದಿಗೆ ಸಂಪರ್ಕಿಸುವುದು ನನ್ನ ಮುಖ್ಯ ಗುರಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸಂಘಟನೆ ಮತ್ತು ಪಕ್ಷದ ಭವ್ಯ ಪುನರಾಗಮನವನ್ನು ಖಚಿತಪಡಿಸುವುದು ನನ್ನ ಮೊದಲ ಗುರಿಯಾಗಿದೆ ಎಂದಿದ್ದಾರೆ.
ನಾನು ರಾಹುಲ್ ಗಾಂಧಿಯವರ ಸೈನಿಕ. ಉನ್ನತ ನಾಯಕತ್ವದ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಕಾಂಗ್ರೆಸ್ ನನಗೆ ಕೇವಲ ಪಕ್ಷವಲ್ಲ ಅದು ತಾಯಿ ಇದ್ದಂತೆ. ನನ್ನ ಜವಾಬ್ದಾರಿಯನ್ನು ಪೂರ್ಣ ಹೃದಯದಿಂದ ಮತ್ತು ಆತ್ಮದಿಂದ ನಿರ್ವಹಿಸುತ್ತೇನೆ ಎಂದಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು. ರಾಹುಲ್ ಗಾಂಧಿಯವರ ಸಂದೇಶವನ್ನು ಮನೆ ಮನೆಗೆ ಕೊಂಡೊಯ್ಯಲಾಗುವುದು. ವಾರಣಾಸಿ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಕುರಿತು ಚರ್ಚೆ ನಡೆಸಿದ ಅವರು, ಅವರು ಬಂದರೆ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪ್ರಾಣ ಬಿಟ್ಟು ಬೇಕಾದರೂ ಪ್ರಚಾರ ಮಾಡುತ್ತಾರೆ ಎಂದಿದ್ದಾರೆ.
ವಾರಣಾಸಿಯಲ್ಲಿ ಪ್ರಿಯಾಂಕಾ ಸ್ಪರ್ಧೆ ಮಾಡಿದರೆ, ಮೋದಿಗೆ ಸೋಲು ಖಚಿತ: ಸಂಜಯ್ ರಾವುತ್
ರಾಹುಲ್ ಗಾಂಧಿ ಅಮೇಥಿಯಿಂದ ಮೂರು ಬಾರಿ ಸಂಸದರಾಗಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ 2004ರಲ್ಲಿ ಮೊದಲ ಬಾರಿಗೆ ಇಲ್ಲಿಂದ ಸಂಸದರಾಗಿದ್ದರು. ಇದಾದ ನಂತರ 2009 ಮತ್ತು 2014ರಲ್ಲಿ ಮತ್ತೆ ಚುನಾವಣೆ ಗೆದ್ದರು.2009ರಲ್ಲಿ ರಾಹುಲ್ ಗಾಂಧಿ 3 ಲಕ್ಷ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ರಾಹುಲ್‌ಗೆ ಬಹಿರಂಗವಾಗಿ ಸವಾಲು ಹಾಕಿದ್ದರು, ಆದರೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದರು.
ಲೋಕಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ, ಗಂಡನಿಂದಲೇ ಸುಳಿವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ