
ಮುಂಬೈ: ಅಚಾನಕ್ ಆಗಿ ರೈಲ್ವೆ ಹಳಿಗೆ ಬಿದ್ದವನ ಮೇಲೆ ರೈಲೊಂದು ಹರಿದು ಯುವಕ ಸಾವಿಗೀಡಾದ ಘಟನೆ ಮುಂಬೈನಲ್ಲಿ ನಡೆದಿದ್ದು, ಈ ಭಯಾನಕ ದೃಶ್ಯಾವಳಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ನ ಮೇಲೆ ಇಬ್ಬರು ವ್ಯಕ್ತಿಗಳು ಜಗಳ ಮಾಡುತ್ತಿದ್ದು ಈ ವೇಳೆ ಒಬ್ಬ ಮತ್ತೋರ್ವನ ಕೆನ್ನೆಗೆ ಬಾರಿಸಿದ ರಭಸಕ್ಕೆ ಆತ ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿದ್ದಾನೆ. ಇದೇ ವೇಳೆ ರೈಲು ಆತ ಬಿದ್ದಿದ್ದ ಹಳಿ ಮೇಲೆ ಬಂದಿದ್ದು, ಯುವಕ ರೈಲಡಿ ಸಿಲುಕಿ ಸಾವನ್ನಪ್ಪಿದ್ದಾನೆ. ಮುಂಬೈನ ಸಿಯಾನ್ ರೈಲ್ವೆ ಸ್ಟೇಷನ್‌ನಲ್ಲಿ ಈ ದುರಂತ ನಡೆದಿದ್ದು, ಈ ಭಯಾನಕ ದೃಶ್ಯ ಪ್ಲಾಟ್‌ಫಾರ್ಮ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ರಾತ್ರಿ 9.15ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ಈ ಆಘಾತಕಾರಿ ದೃಶ್ಯದ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಮೃತ ಯುವಕನನ್ನು 26 ವರ್ಷ ದಿನೇಶ್ (Dinesh) ಎಂದು ಗುರುತಿಸಲಾಗಿದೆ. ಸಿಯಾನ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಈತ ಹಾಗೂ ಮತ್ತೊರ್ವನ ಮಧ್ಯೆ ಮಾತಿನ ಚಕಮಕಿ ಶುರುವಾಗಿದ್ದು, ಅದು ನಂತರ ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ಏಟು ತಿಂದ ದಿನೇಶ್ ರೈಲ್ವೆ ಟ್ರ್ಯಾಕ್‌ಗೆ ಹೋಗಿ ಬಿದ್ದಿದ್ದು, ಅದೇ ಸಮಯಕ್ಕೆ ರೈಲು ಮುಂಬೈ ಸಬ್ ಅರ್ಬನ್ ಟ್ರೈನ್ ಆ ಹಳಿಯ ಮೇಲೆ ಬಂದಿದ್ದು ರೈಲಡಿ ಸಿಲುಕಿ ದಿನೇಶ್ ಸಾವಿಗೀಡಾಗಿದ್ದಾನೆ.
ರೈಲಿಲ್ಲವೆಂದು ಹಳಿ ಮೇಲೆ ಮಲಗಿದ್ದ 17 ಮಂದಿ ರೈಲಿಗೆ ಸಿಲುಕಿ ಸಾವು....
ಸಿಸಿಟಿವಿ ವೀಡಿಯೋದಲ್ಲಿ ದಿನೇಶ್ ಬಿಳಿ ಬಣ್ಣದ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದು, ಪ್ಲಾಟ್‌ಫಾರ್ಮ್‌ನಲ್ಲಿದ್ದ30 ವರ್ಷದ ಶೀತಲ್ ಮಾನೆ ಎಂಬಾತಕೆಗೆ ಆತ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶೀತಲ್ ಮಾನೆ ಆತನಿಗೆ ತನ್ನ ಬಳಿ ಇದ್ದ ಛತ್ರಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಇದಾದ ನಂತರ ಶೀತಲ್ ಪತಿ 35 ವರ್ಷದ ಅವಿನಾಶ್ (Avinash) ಕೂಡ ದಿನೇಶ್ ಮೇಲೆ ಹಲ್ಲೆ ಮಾಡಿ ದಿನೇಶ್ ಕೆನ್ನೆಗೆ ಬಾರಿಸಿದ್ದಾನೆ. ಈ ಏಟಿಗೆ ದೇಹದ ಮೇಲೆ ಸಮತೋಲನ ಕಳೆದುಕೊಂಡ ದಿನೇಶ್ ಸೀದಾ ಪ್ಲಾಟ್‌ಫಾರ್ಮ್‌ನಿಂದ ಕೆಳಗೆ ರೈಲ್ವೆ ಹಳಿಗೆ ಬಿದ್ದಿದ್ದಾನೆ. ಅದೇ ಸಮಯಕ್ಕೆ ಆ ಹಳಿಯಲ್ಲಿ ರೈಲು ಬಂದಿದ್ದು, ದಿನೇಶ್ ರೈಲು ಅಡಿಗೆ ಸಿಲುಕಿದ್ದಾನೆ.
ಈ ವೇಳೆ ಪ್ಲಾಟ್‌ಫಾರ್ಮ್‌ನಲ್ಲಿದ್ದ ಇತರ ಪ್ರಯಾಣಿಕರು ಶಾಕ್‌ಗೆ ಒಳಗಾಗಿದ್ದು, ರೈಲನ್ನು ನಿಲ್ಲಿಸಿ ದಿನೇಶ್‌ನನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಶೀತಲ್ ಕೂಡ ಆಕೆಯ ಬಳಿ ಇದ್ದ ಕೊಡೆಯನ್ನು ರೈಲಿಗೆ ತೋರಿಸಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾಳೆ. ಆದರೆ ರೈಲು ಹಾಗೂ ಪ್ಲಾಟ್‌ಫಾರ್ಮ್ ಮಧ್ಯೆ ಸಿಲುಕಿ ಆತ ನಜ್ಜುಗುಜ್ಜಾಗಿ ಹಳಿಗೆ ಬಿದ್ದು ಸಾವನ್ನಪ್ಪಿದ್ದಾನೆ.
ಟಿಕೆಟ್ ಇಲ್ದೆ ವಂದೇ ಭಾರತ್ ರೈಲು ಹತ್ತಿದ: ಟಾಯ್ಲೆಟ್ ಒಳಗೆ ಬೀಡಿ ಸೇದಿ ತಗ್ಲಾಕ್ಕೊಂಡ ಭೂಪ!
ಮೃತ ದಿನೇಶ್ ರಾಥೋರ್ ಬೃಹನ್‌ಮುಂಬೈ ವಿದ್ಯುತ್ ಪ್ರಸರಣ ನಿಗಮದಲ್ಲಿ ಉದ್ಯೋಗಿಯಾಗಿದ್ದ(BEST). ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿ ನೋಡಿದ ನಂತರ ದಿನೇಶ್ ರಾಥೋರ್ ಹೊಡೆತಕ್ಕೆ ಸಿಲುಕಿ ರೈಲ್ವೆ ಟ್ರಾಕ್‌ಗೆ ಬಿದ್ದಿದ್ದಾರೆ ಎಂಬುದು ಗೊತ್ತಾಗಿದ್ದು, ನಂತರ ದಂಪತಿ ಶೀತಲ್ ಹಾಗೂ ಆಕೆಯ ಪತಿ ಅವಿನಾಶ್‌ನನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ