300 ಕೆ.ಜಿ. ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ ಮಾನವ ರಹಿತ ಪುಟ್ಟ ವಿಮಾನ: ಜೂನ್‌ನಲ್ಲಿ ಪರೀಕ್ಷಾರ್ಥ ಹಾರಾಟ

By Kannadaprabha News  |  First Published Feb 14, 2023, 9:31 AM IST

ಮೇಕ್‌ ಇನ್‌ ಇಂಡಿಯಾ ಹಾಗೂ ಆತ್ಮನಿರ್ಭರ್‌ ಭಾರತ ಅಡಿ 300 ಕೇಜಿ ಯುದ್ಧ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಮಾನವರಹಿತ ವೈಮಾನಿಕ ವಾಹನ (ಯುಎವಿ) ‘ಅರ್ಚರ್‌-ಎನ್‌ಜಿ’ ಜೂನ್‌ಗೆ ಪರೀಕ್ಷಾರ್ಥ ಹಾರಾಟ ನಡೆಸಲು ಸಿದ್ಧವಾಗಿದೆ.


ವಿಶ್ವನಾಥ ಮಲೇಬೆನ್ನೂರು, ಕನ್ನಡಪ್ರಭ ವಾರ್ತೆ
ಬೆಂಗಳೂರು: ಮೇಕ್‌ ಇನ್‌ ಇಂಡಿಯಾ ಹಾಗೂ ಆತ್ಮನಿರ್ಭರ್‌ ಭಾರತ ಅಡಿ 300 ಕೇಜಿ ಯುದ್ಧ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಮಾನವರಹಿತ ವೈಮಾನಿಕ ವಾಹನ (ಯುಎವಿ) ‘ಅರ್ಚರ್‌-ಎನ್‌ಜಿ’ ಜೂನ್‌ಗೆ ಪರೀಕ್ಷಾರ್ಥ ಹಾರಾಟ ನಡೆಸಲು ಸಿದ್ಧವಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ವೈಮಾನಿಕ ಅಭಿವೃದ್ಧಿ ಸಂಸ್ಥೆಯ ‘ತಪಸ್‌-ಬಿಎಚ್‌’ ಮಾನವರಹಿತ ವೈಮಾನಿಕ ವಾಹನದ ಯಶಸ್ವಿ ಕಾರ್ಯಾಚರಣೆಯ ಬೆನ್ನಲ್ಲೇ ಅರ್ಚರ್‌-ಎನ್‌ಜಿ ಯುಎವಿ (Archer NG UAV) ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಡಿಆರ್‌ಡಿಒ ಆವರಣದಲ್ಲಿ ಈ ಪರೀಕ್ಷೆ ನಡೆಯಲಿದೆ.

ಅರ್ಚರ್‌-ಎನ್‌ಜಿ (Archer-NG) ಒಂದು ನೆಕ್ಸಟ್‌ ಜನರೇಷನ್‌ ಮಾನವರಹಿತ ವೈಮಾನಿಕ ವಾಹನವಾಗಿದೆ (next generation unmanned aerial vehicle). ಇದು ಸಂಪೂರ್ಣವಾಗಿ ರಕ್ಷಣಾ ಇಲಾಖೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಭಾರತೀಯ ವಾಯುಸೇನೆ ಮತ್ತು ಸೇನೆಯಲ್ಲಿ ಗುಪ್ತಚರ, ಕಣ್ಗಾವಲು, ಗುರಿ ಸ್ವಾಧೀನ ಮತ್ತು ವಿಚಕ್ಷಣ ಅಗತ್ಯತೆಗಳನ್ನು ಪೂರೈಸುವ ಕಾರ್ಯದ ಜತೆಗೆ ಯುದ್ಧ ಶಸ್ತ್ರಾಸ್ತ್ರಗಳನ್ನು ಸಾಗಿಸಲು ನೆರವಾಗಲಿದೆ.

Latest Videos

undefined

ಇದು ಸಿಂಗಲ್‌ ಎಂಜಿನ್‌ ಹಾಗೂ ಡಬಲ್‌ ಬೂಮ್‌ ಹೊಂದಿರುವ ಯುಎವಿ ಆಗಿದ್ದು, 30 ಸಾವಿರ ಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಬಲ್ಲ ಮತ್ತು ಒಂದು ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ಉಪಗ್ರಹ ಸಂವಹನ (satellite communication) ಆಧಾರಿತವಾಗಿ ಕಾರ್ಯಚರಣೆ ನಡೆಸಲಿದೆ. ಇದು ಸ್ವಯಂ ಚಾಲಿತವಾಗಿ ಟೇಕ್‌ಅಪ್‌ ಮತ್ತು ಲ್ಯಾಂಡಿಂಗ್‌ ತಂತ್ರಜ್ಞಾನವನ್ನು ಹೊಂದಿದೆ. ಅತ್ಯಂತ ಸುರಕ್ಷಿತ ಸಂವಹನ ತಂತ್ರಜ್ಞಾನ ಹೊಂದಿದೆ. ಸುಮಾರು .40 ಕೋಟಿ ವೆಚ್ಚದಲ್ಲಿ ಈ ಯುಎವಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಅರ್ಚರ್‌-ಎನ್‌ಜಿಯ ರೆಕ್ಕೆಗಳು 18.6 ಮೀಟರ್‌ ಅಷ್ಟುಚಾಚಿಕೊಂಡಿದ್ದು, 11 ಮೀಟರ್‌ನಷ್ಟುಉದ್ದ ಇದೆ. ಒಟ್ಟು 1,700 ಕೇಜಿ ತೂಕ, ಸುಮಾರು 24 ಗಂಟೆ ನಿರಂತರವಾಗಿ ಹಾರಾಟ ಹಾಗೂ ಗಂಟೆಗೆ 225 ಕಿ.ಮೀ. ದೂರ ಹಾರುವ ಸಾಮರ್ಥ್ಯವನ್ನು ಹೊಂದಿದೆ.

ಈಗಾಗಲೇ ಎಲ್ಲ ರೀತಿಯ ಅನುಮೋದನೆ ಪಡೆದಿರುವ ಅರ್ಚರ್‌-ಎನ್‌ಜಿಯನ್ನು ಹಿಂದೂಸ್ತಾನ್‌ ಏರೋನಾಟಿಕ್ಸ್‌ (Hindustan Aeronautics), ಭಾರತ್‌ ಎಲೆಕ್ಟ್ರಾನಿಕ್ಸ್‌ (Bharat Electronics)(ಬಿಇಎಲ್‌) ಸಹಯೋಗದಲ್ಲಿ ತಯಾರಿಸಲು ಆರಂಭಿಸುತ್ತೇವೆ. ಸದ್ಯ ಭಾರತ ರಕ್ಷಣಾ ಇಲಾಖೆಯಲ್ಲಿ ಇಸ್ರೇಲ್‌ ಮತ್ತು ಅಮೆರಿಕದಿಂದ ಖರೀದಿ ಮಾಡಿದ ಕೆಲವು ಯುಎವಿಗಳಿವೆ. ಇದು ರಕ್ಷಣಾ ಪಡೆಗೆ ಬಹಳಷ್ಟುನೆರವಾಗಲಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

Aero India: ಬಾನಂಗಳದಲ್ಲಿ ವಿಮಾನಗಳ ಚಿತ್ತಾರ: ಜನಾಕರ್ಷಣೆಗೊಂಡ ಆಂಜನೇಯ ಯುದ್ದ ವಿಮಾನ

ಪುಟ್ಟ ಅರ್ಚರ್‌ ಪ್ರದರ್ಶನ

ಏರೋ ಇಂಡಿಯಾದಲ್ಲಿ ಡಿಆರ್‌ಡಿಓ ಅಭಿವೃದ್ಧಿ ಪಡಿಸಿದ ಉಪಕರಣಗಳ ಪ್ರದರ್ಶನ ಮಳಿಗೆಯಲ್ಲಿ ಅರ್ಚರ್‌-ಎನ್‌ಜಿಯ ಪುಟ್ಟಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದು ಸಾಮಾನ್ಯ ಮಾನವರಹಿತ ವೈಮಾನಿಕ ವಾಹನಕ್ಕಿಂತ ವಿಭಿನ್ನ ವಿನ್ಯಾಸವನ್ನು ಹೊಂದಿದೆ. ಉದ್ದವಾದ ರೆಕ್ಕೆ ಹಾಗೂ ಟ್ವಿನ್‌ ಬೂಮ್‌ ಹೊಂದಿರುವುದು ಇದರ ವಿಶೇಷವಾಗಿದೆ.

click me!