ಈ ಬಾರಿಯೂ ತೆರೆಮರೆ ಸಾಧಕರಿಗೆ ಗೌರವ!

By Suvarna News  |  First Published Jan 26, 2020, 4:41 PM IST

ಈ ಹಿಂದೆ ಕರ್ನಾಟಕದ ಸಾಲುಮರದ ತಿಮ್ಮಕ್ಕ, ಸುಕ್ರೀ ಗೌಡ, ಸೂಲಗಿತ್ತಿ ನರಸಮ್ಮ ಸೇರಿದಂತೆ ಸಮಾಜದ ಅಭಿವೃದ್ಧಿಗಾಗಿ ಯಾವುದೇ ಗೌರವ, ಸನ್ಮಾದ ಅಪೇಕ್ಷೆ ಇಲ್ಲದೇ ನಿರಂತರ ಸೇವೆ ಸಲ್ಲಿಸುವವರನ್ನು ಗುರುತಿಸಿ ಪದ್ಮ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿಯೂ ಹೀಗೇ ತೆರೆಮರೆಯಲ್ಲಿದ್ದುಕೊಂಡೇ ಸೇವೆ ಸಲ್ಲಿಸುತ್ತಿದ್ದ ಸಾಧಕರನ್ನು ಗುರುತಿಸಿರುವ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. ೀ ಸಾಧಕರ ಪಟ್ಟಿ, ಹಾಗೂ ವಿವರ ಇಲ್ಲಿದೆ ನೋಡಿ


ನವದೆಹಲಿ[ಜ.26]: ದೇಶದ 71ನೇ ಗಣರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ಎಲೆಮರೆ ಕಾಯಿಯಂತೆ ಇದ್ದುಕೊಂಡೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ, ಅವರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ತೆರೆಮರೆಯ ಸಾಧಕರ ಗುರುತಿಸುವ ಮಹತ್ವದ ಕಾರ್ಯವನ್ನು ಮಾಡಿದೆ.

ಈ ಪ್ರಕಾರ ಛತ್ತೀಸ್‌ಗಢದಲ್ಲಿ ಪ್ರತೀ ದಿನ ರೋಗಿಗಳು ಹಾಗೂ ಇತರರು ಸೇರಿ 2000ಕ್ಕೂ ಹೆಚ್ಚು ಮಂದಿಗೆ ಉಚಿತ ಆಹಾರ ಕಲ್ಪಿಸುವ ಜಗದೀಶ್‌ ಲಾಲ್‌ ಅಹುಜಾ, ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ಇದುವರೆಗೂ 25 ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರ ನೆರವೇರಿಸಿದ ಮೊಹಮ್ಮದ್‌ ಷರೀಫ್‌, ಅಸ್ಸಾಂ ಮೂಲದ ಆನೆ ವೈದ್ಯ ಕುಶಾಲ್‌ ಕನ್ವಾರ್‌ ಶರ್ಮಾ, ಜಮ್ಮು-ಕಾಶ್ಮೀರದಲ್ಲಿ ದಿವ್ಯಾಂಗ ಮಕ್ಕಳ ಉಚಿತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಜಾವೇದ್‌ ಅಹ್ಮದ್‌ ತಕ್‌, ಕರ್ನಾಟಕದ ತುಳಸಿ ಗೌಡ, ಈಶಾನ್ಯ ರಾಜ್ಯಗಳ ನಿರ್ಜನ ಪ್ರದೇಶದಲ್ಲಿ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುತ್ತಿರುವ ಸತ್ಯನಾರಾಯಣ ಮುಂಡಯೂರು, 1984ರ ಭೋಪಾಲ್‌ ಅನಿಲ ದುರಂತ ಸಂತ್ರಸ್ತರಿಗಾಗಿ ಹೋರಾಟ ನಡೆಸುತ್ತಿರುವ ವಾಯ್ಸ್ ಆಫ್‌ ಭೋಪಾಲ್‌ ಖ್ಯಾತಿಯ ಅಬ್ದುಲ್‌ ಜಬ್ಬರ್‌, ರಾಜಸ್ಥಾನದ ದಲಿತ ಸಾಮಾಜಿಕ ಕಾರ್ಯಕರ್ತೆ ಉಷಾ ಚೌಮರ್‌, ಅಸ್ಸಾಂನ ಬರಾಕ್‌ ಕಣಿವೆಯಲ್ಲಿ ಉಚಿತ ಕ್ಯಾನ್ಸರ್‌ ಚಿಕಿತ್ಸೆ ನೀಡುವ ಚೆನ್ನೈ ಮೂಲದ ವೈದ್ಯ ರವಿ ಕಣ್ಣನ್‌, 4 ದಶಕಗಳಿಂದಲೂ 14 ಸಾವಿರಕ್ಕೂ ಹೆಚ್ಚು ದಿವ್ಯಾಂಗ ಮಕ್ಕಳಿಗೆ ಪುನರ್ವಸತಿ ಕೇಂದ್ರದಲ್ಲಿ ರಕ್ಷಣೆ ನೀಡಿದ ಎಸ್‌. ರಾಮಕೃಷ್ಣನ್‌, 1 ಲೀ. ನೀರಲ್ಲಿ ಮರ ಬೆಳೆವ ಖ್ಯಾತಿಯ ಪರಿಸರ ತಜ್ಞ ಸುಂದರಂ ವರ್ಮಾ, ಮುಸ್ಲಿಂ ಭಜನ ಹಾಡುಗಾರ ಮುನ್ನಾ ಮಾಸ್ತರ್‌, ಕಳೆದ 35 ವರ್ಷಗಳಿಂದ ಸುಟ್ಟಗಾಯಗಳಿಗೆ ತುತ್ತಾಗಿರುವವರಿಗೆ ಚಿಕಿತ್ಸೆ ಕಲ್ಪಿಸುತ್ತಿರುವ ಉತ್ತರಾಖಂಡ್‌ನ ವೈದ್ಯ ಯೋಗಿ ಆರೋನ್‌, ರಹಿಬಾಯಿ ಸೊಮಾ ಅವರನ್ನು ಸಹ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Latest Videos

undefined

ಪದ್ಮಶ್ರೀ ಪಡೆದ ಈ ಲಂಗರ್‌ ಬಾಬಾ ನಿಮಗೆ ಗೊತ್ತಾ?

ಜಗದೀಶ್‌ ಲಾಲ್‌ ಅಹುಜಾ(ಲಂಗರ್‌ ಬಾಬಾ)

15ಕ್ಕೂ ಹೆಚ್ಚು ವರ್ಷಗಳಿಂದ ಸುಮಾರು 2000 ಮಂದಿಗೆ ಪ್ರತೀ ದಿನ ಉಚಿತ ಆಹಾರ. ರೋಗಿಗಳಿಗೆ ಬ್ಲಾಂಕೆಟ್‌ಗಳು ಹಾಗೂ ಉಡುಪುಗಳ ಉಡುಗೊರೆ. ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದ ಇವರು, ಭಾರತದ ಪಂಜಾಬ್‌ನಲ್ಲಿ ನೆಲೆಸಿದ್ದಾರೆ. ತಮ್ಮ ಈ ಸಾಮಾಜಿಕ ಕಾರ್ಯಕ್ಕಾಗಿ ತಮ್ಮ ಆಸ್ತಿಯನ್ನೆಲ್ಲಾ ಮಾರಾಟ ಮಾಡಿದರು.

ಮೊಹಮ್ಮದ್‌ ಷರೀಫ್‌(ಚಾಚಾ ಷರೀಫ್‌)

ಉತ್ತರ ಪ್ರದೇಶ ಮೂಲದ ಸೈಕಲ್‌ ಮೆಕಾನಿಕ್‌. 25 ವರ್ಷಗಳಿಂದ ಅನಾಥ ಶವಗಳ ಸಂಸ್ಕಾರ ಮಾಡುತ್ತಿದ್ದಾರೆ. ಯಾವುದೇ ಧರ್ಮ, ಜಾತಿ ಸೇರಿದಂತೆ ಇನ್ನಿತರ ತಾರತಮ್ಯ ಮಾಡದೆಯೇ ಇದುವರೆಗೂ 25 ಸಾವಿರಕ್ಕೂ ಹೆಚ್ಚು ಅನಾಥ ಶವಗಳನ್ನು ಸಂಸ್ಕಾರ ಮಾಡಿದ ಕೀರ್ತಿ ಅವರದ್ದಾಗಿದೆ.

ಜಾವೇದ್‌ ಅಹ್ಮದ್‌ ತಕ್‌

ಉಗ್ರರ ಗುಂಡಿನ ದಾಳಿಯೊಂದರಲ್ಲಿ ಬೆನ್ನು ಮೂಳೆ ಮುರಿತಕ್ಕೊಳಗಾದ ಜಾವೇದ್‌ ಅಹ್ಮದ್‌ ತಕ್‌ ಅವರು, 1997ರಿಂದಲೂ ವೀಲ್‌ ಚೇರ್‌ಗೆ ಅಂಟಿಕೊಂಡಿದ್ದಾರೆ. ಆದಾಗ್ಯೂ, ಕಾಶ್ಮೀರದ ಅನಂತ್‌ನಾಗ್‌ ಹಾಗೂ ಪುಲ್ವಾಮ ಜಿಲ್ಲೆಗಳ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ದಿವ್ಯಾಂಗ ಮಕ್ಕಳ ಶಿಕ್ಷಣಕ್ಕಾಗಿ ಜೈಬಾ ಆಪಾ ಶಾಲೆ ಹಾಗೂ ಹ್ಯುಮಾನಿಟಿ ವೆಲ್‌ಫೇರ್‌ ಆರ್ಗನೈಸೇಷನ್‌ ಸ್ಥಾಪನೆ.

ಸತ್ಯನಾರಾಯಣ ಮುಂಡಯೂರು

ಕೇರಳ ಮೂಲದವರು. ನಾಲ್ಕು ದಶಕಗಳಿಂದಲೂ ಅರುಣಾಚಲ ಪ್ರದೇಶದ ನಿರ್ಜನ ಪ್ರದೇಶಗಳಲ್ಲಿ ಶಿಕ್ಷಣ, ಓದುವ ಸಂಸ್ಕೃತಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಜನ ಸಂಪರ್ಕ ಇಲ್ಲದ ಕಡೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನೊಳಗೊಂಡ 13 ಬಂಬೂಸಾ ಗ್ರಂಥಾಲಯಗಳ ಸ್ಥಾಪನೆ.

ಇನ್ನೂ ನನಸಾಗಿಲ್ಲ ಹಾಜಬ್ಬನ ಪಿಯು ಕಾಲೇಜು ಕನಸು

ಅರುಣೋದಯ ಮಂಡಲ್‌

ಪಶ್ಚಿಮ ಬಂಗಾಳದ ಸುಂದರ್‌ಬನ್‌ ಕಾಡು ಅರಣ್ಯ ಭಾಗದಲ್ಲಿರುವ ಗ್ರಾಮಸ್ಥರಿಗೆ ಕಳೆದ 2 ದಶಕಗಳಿಂದ ಉಚಿತ ವೈದ್ಯಕೀಯ ಚಿಕಿತ್ಸೆ. ಪ್ರತೀ ವಾರವೂ ಥೈರಾಯಿಡ್‌, ಹೃದಯದಿಂದ ಕಣ್ಣಿನವರೆಗಿನ ಸಮಸ್ಯೆಗಳಿಂದ ಬಳಲುತ್ತಿರುವ ಬಡತನ ವರ್ಗಕ್ಕಿಂತಲೂ ಕೆಳಗಿರುವ ಶೇ.80ರಷ್ಟುಕುಟುಂಬಸ್ಥರಿಗೆ ಉಚಿತ ಚಿಕಿತ್ಸೆ.

ರಾಧಾ ಮೋಹನ್‌ ಮತ್ತು ಸಾಬರಮತಿ

ಒಡಿಶಾದ ಗಾಂಧಿವಾದಿಯಾದ ರಾಧಾ ಮೋಹನ್‌ ಹಾಗೂ ಅವರ ಪುತ್ರಿ ಸಾಬರಮತಿ ಅವರು ಸಾವಯವ ಕೃಷಿ ಮೂಲಕ ಪಾಳುಬಿದ್ದಿದ್ದ ಜಮೀನಿನನ್ನು ವಿವಿಧ ಬೆಳೆಯ ಬೀಜಗಳನ್ನು ಬೆಳೆಯುವ ಭೂಮಿಯಾಗಿ ಪರಿವರ್ತಿಸಿದ್ದಾರೆ. ಇವರು ಹಲವರಿಗೆ ವಿವಿಧ ಬೆಳೆಗಳ ಬೀಜಗಳನ್ನು ನೀಡಿ, ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ರವಿ ಕಣ್ಣನ್‌

ತಮಿಳುನಾಡಿನ ಚೆನ್ನೈ ಮೂಲದವರು. ಅಸ್ಸಾಂನ ಬರಾಕ್‌ ವ್ಯಾಲಿಯಲ್ಲಿ ಇದುವರೆಗೂ ಕ್ಯಾನ್ಸರ್‌ ಮಾರಿಯಿಂದ ಬಳಲುತ್ತಿದ್ದ 7 ಸಾವಿರಕ್ಕೂ ಹೆಚ್ಚು ಮಂದಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಚೆನ್ನೈನಲ್ಲಿ ಉತ್ತಮ ವೇತನದ ಕೆಲಸಕ್ಕೆ ರಾಜೀನಾಮೆ ನೀಡಿ 2007ರಲ್ಲಿ ಅಸ್ಸಾಂಗೆ ಹೋಗಿದ್ದರು.

ರಾಮಕೃಷ್ಣನ್‌

ತಮಿಳುನಾಡು ಮೂಲದವರು. 20ನೇ ವಯಸ್ಸಿನಲ್ಲಿ ನೌಕಾಪಡೆಯ ನೇಮಕಾತಿ ಪ್ರಕ್ರಿಯೆ ವೇಳೆ ಸಂಭವಿಸಿದ ದುರಂತದಲ್ಲಿ ಕತ್ತಿನಿಂದ ಕೆಳಭಾಗದಲ್ಲಿ ಪಾಶ್ರ್ವವಾಯು ಸಮಸ್ಯೆಗೆ ಸಿಲುಕಿದರು. ಆದಾಗ್ಯೂ, ಕಳೆದ ನಾಲ್ಕು ದಶಕಗಳಿಂದ 800 ಗ್ರಾಮಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿ 14 ಸಾವಿರಕ್ಕೂ ಹೆಚ್ಚು ದಿವ್ಯಾಂಗ ಮಕ್ಕಳಿಗೆ ರಕ್ಷಣೆ ನೀಡಿದ್ದಾರೆ.

ಸುಂದರಂ ವರ್ಮಾ

ಒಣ ಭೂಮಿಯಲ್ಲಿ ಕೇವಲ 1 ಲೀಟರ್‌ ನೀರಿನಲ್ಲಿ ಒಂದು ಗಿಡದಂತೆ ಒಟ್ಟಾರೆ 50 ಸಾವಿರಕ್ಕೂ ಹೆಚ್ಚು ಮರ ಬೆಳೆಸಿದ ಖ್ಯಾತಿಯ ಸುಂದರಂ ವರ್ಮಾ, ಮೂಲತಃ ರಾಜಸ್ಥಾನದವರು. ರಾಜ್ಯಾದ್ಯಂತ 6 ನರ್ಸರಿಗಳನ್ನು ಸ್ಥಾಪಿಸಿರುವ ಸುಂದರಂ, ಸುಮಾರು 1.50 ಲಕ್ಷ ಸಸಿಗಳನ್ನು ರೈತರಿಗೆ ಹಂಚಿಕೆ ಮಾಡಿದ್ದಾರೆ. ಇವರ ಅರಣ್ಯೀಕರಣ ಮಾಡುವ ಯತ್ನಕ್ಕಾಗಿ ಈ ಗರಿ ಸಂದಿದೆ.

ಮುನ್ನಾ ಮಾಸ್ತರ್‌

ರಾಜಸ್ಥಾನದ ಜೈಪುರದವರು. ಶ್ರೀಕೃಷ್ಣ ಮತ್ತು ಗೋವಿನ ಕುರಿತಾಗಿ ಭಜನ ಪದಗಳನ್ನು ರಚನೆ ಮಾಡಿ, ಸ್ವತಃ ಹಾಡುತ್ತಿದ್ದರು. ಇವರು ರಚನೆ ಮಾಡಿದ ಶ್ರೀ ಶ್ಯಾಮ್‌ ಸುರಭಿ ವಂದನ ಪ್ರಸಿದ್ಧ ಭಜನ ಪುಸ್ಕಕವಾಗಿದೆ.

click me!