ವಿದೇಶಿ ಲಸಿಕೆ ಫೈಜರ್ ಖರೀದಿಗೆ ವಿಪಕ್ಷ ಒತ್ತಡ ಹೇರಿತ್ತು. ಹಾಗೂ, ಫೈಜರ್ ಕಂಪನಿ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಯತ್ನಿಸಿತ್ತು ಎಂದು ವಿಪಕ್ಷ, ಫೈಜರ್ ವಿರುದ್ಧ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ‘ಕೋವಿಡ್ ಸಮಯದಲ್ಲಿ ಸ್ವದೇಶಿ ಕೊರೋನಾ ಲಸಿಕೆಗಳ ಬದಲು ವಿದೇಶಿ ಫೈಜರ್ ಕಂಪನಿಯ ಲಸಿಕೆ ಖರೀದಿಸುವಂತೆ ವಿಪಕ್ಷ ನಾಯಕರು ನರೇಂದ್ರ ಮೋದಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ. ಇದೇ ವೇಳೆ, ಫೈಜರ್ ಕಂಪನಿ ಕೂಡ ಯಾವುದೇ ಹೊಣೆಗಾರಿಕೆಯ ಷರತ್ತು ಇಲ್ಲದೆ ತನ್ನ ಲಸಿಕೆಯನ್ನು ಖರೀದಿಸುವಂತೆ ಭಾರತದ ಮೇಲೆ ದಬ್ಬಾಳಿಕೆ ನಡೆಸಲು ಯತ್ನಿಸಿತು ಎಂದೂ ಅವರು ಹೇಳಿದ್ದಾರೆ.
ಸ್ವಿಜರ್‌ಲೆಂಡ್‌ನ ದಾವೋಸ್ ಶೃಂಗದಲ್ಲಿ ಫೈಜರ್ ಸಿಇಒ ಆಲ್ಬರ್ಟ್ ಬೌರ್ಲಾ ಅವರನ್ನು ಪತ್ರಕರ್ತರು ಫೈಜರ್ ಲಸಿಕೆಯ ಕ್ಷಮತೆ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಬೌರ್ಲಾ ಹಾರಿಕೆ ಉತ್ತರ ನೀಡಿದ್ದರು. ಈ ಟ್ವೀಟ್‌ಗೆ ಶುಕ್ರವಾರ ಉತ್ತರಿಸಿರುವ ರಾಜೀವ್ ಚಂದ್ರಶೇಖರ್, ‘ತನ್ನ ಎಂಆರ್‌ಎನ್‌ಎ ಕೋವಿಡ್ ಲಸಿಕೆಯನ್ನು ಭಾರತಕ್ಕೆ ಯಾವುದೇ ಹೊಣೆಗಾರಿಕೆಯಿಲ್ಲದ ಷರತ್ತಿನ ಮೇಲೆ ಪೂರೈಸಲು ಜಗತ್ತಿನ ದೊಡ್ಡ ಫಾರ್ಮಾ ಕಂಪನಿಗಳಲ್ಲಿ ಒಂದಾದ ಫೈಜರ್ ಯತ್ನಿಸಿತ್ತು. ಅದೇ ವೇಳೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪಿ. ಚಿದಂಬರಂ ಹಾಗೂ ಜೈರಾಂ ರಮೇಶ್ ಕೂಡ ವಿದೇಶಿ ಲಸಿಕೆಯನ್ನು ಭಾರತದಲ್ಲಿ ನೀಡಬೇಕು ಎಂದು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು’ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ನಮ್ಮ ಲಸಿಕೆ ಫೈಜರ್‌ಗಿಂತ ಕಮ್ಮಿ ಏನೂ ಅಲ್ಲ, ನಮ್ಮನ್ನೇಕೆ ಟಾರ್ಗೆಟ್ ಮಾಡಲಾಗುತ್ತಿದೆ?
ಆದರೆ, ರಾಜೀವ್ ಆರೋಪಕ್ಕೆ ಉತ್ತರಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಇದು ಸುಳ್ಳು ಆರೋಪ. ಜಿಡ್ಡಿನ ಕಂಬವನ್ನು ನೀವು ಏರಲು ಹೊರಟಿದ್ದೀರಿ. ಇದು ನಿಮ್ಮನ್ನು ಮತ್ತಷ್ಟು ಸುಳ್ಳುಗಾರನನ್ನಾಗಿ ಮಾಡುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
ಕೋವಿಡ್ ತಾರಕಕ್ಕೇರಿದಾಗ ಚಿದಂಬರಂ ಸೇರಿ ಹಲವು ಕಾಂಗ್ರೆಸ್ಸಿಗರು ಭಾರತವೇಕೆ ವಿದೇಶಿ ಲಸಿಕೆ ಖರೀದಿಗೆ ಹಿಂದೇಟು ಹಾಕುತ್ತಿದೆ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದುಂಟು.
ಇದನ್ನೂ ಓದಿ: Covid Vaccine: ಈ ಲಸಿಕೆ ಬಿಟ್ಟು ಉಳಿದೆಲ್ಲವೂ ಒಮಿಕ್ರಾನ್ ವಿರುದ್ಧ ನಿಷ್ಪ್ರಯೋಜಕ: ಅಧ್ಯಯನದಲ್ಲಿ ಬಯಲು!
ದಾವೋಸ್‌ನಲ್ಲಿ ಫೈಜರ್‌ಗೆ ಮುಖಭಂಗ:
ಇದಕ್ಕೂ ಮುನ್ನ ದಾವೋಸ್ ಶೃಂಗದಲ್ಲಿ ಫೈಜರ್ ಕೋವಿಡ್ ಲಸಿಕೆಯ ದಕ್ಷತೆಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಕಂಪನಿಯ ಸಿಇಒ ಆಲ್ಬರ್ಟ್ ಬೌರ್ಲಾ ಹಾರಿಕೆಯ ಉತ್ತರ ನೀಡಿ ನುಣುಚಿಕೊಂಡಿದ್ದಾರೆ. ‘ನಿಮ್ಮ ಲಸಿಕೆ 100% ಪರಿಣಾಮಕಾರಿ ಎಂದು ಮೊದಲು ಹೇಳಿದ್ದಿರಿ. ನಂತರ 90%, ಆಮೇಲೆ 80%, ಕೊನೆಗೆ 70% ಪರಿಣಾಮಕಾರಿ ಎಂದಿರಿ. ಆದರೆ ಈಗ ನೋಡಿದರೆ ನಿಮ್ಮ ಲಸಿಕೆ ಕೊರೋನಾ ಹರಡುವುದನ್ನು ತಡೆಯುವುದಿಲ್ಲ ಎಂಬುದು ಗೊತ್ತಾಗಿದೆ. ಏಕೆ ಇದನ್ನು ಗುಟ್ಟಾಗಿಟ್ಟಿದ್ದಿರಿ’ ಎಂದು ಪತ್ರಕರ್ತರೊಬ್ಬರು ಕೇಳಿದ್ದಾರೆ. ಅದಕ್ಕೆ ಆಲ್ಬರ್ಟ್ ಬೌರ್ಲಾ, ‘ಥ್ಯಾಂಕ್ಯೂ ವೆರಿಮಚ್’ ಎಂದು ಉತ್ತರಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಭಾರತದಲ್ಲಿ ಕೋವಿಡ್ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಹೀಗಾಗಿ ವಿದೇಶಿ ಲಸಿಕೆಯ ವಿಷಯದಲ್ಲಿ ಭಾರತ ಸರ್ಕಾರ ತೆಗೆದುಕೊಂಡ ನಿಲುವು ಸರಿಯಾಗಿದೆ ಎಂಬ ಮೆಚ್ಚುಗೆ ಕೇಳಿಬಂದಿದೆ.
ಇದನ್ನೂ ಓದಿ: Covid 19 Variant: ಬ್ರಿಟನ್‌ನಲ್ಲಿ ನಿತ್ಯ 2 ಲಕ್ಷ ಜನರಿಗೆ ಒಮಿಕ್ರೋನ್ ಸೋಂಕು ಭೀತಿ!