
ನವದೆಹಲಿ: ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆ ಮುಳುಗಡೆ ಹಂತ ತಲುಪಿರುವುದು ಗೊತ್ತೇ ಇದೆ. ಖಾಸಗಿ ಟೆಲಿಕಾಂ ಸಂಸ್ಥೆಗಳ ಭರಾಟೆ ಹಾಗೂ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ದೇಶದ ಅಚ್ಚುಮೆಚ್ಚಿನ ನೆಟ್‌ವರ್ಕ್ ಆಗಿದ್ದ ಬಿಎಸ್‌ಎನ್‌ಎಲ್ ಸಂಸ್ಥೆಯ ನೆಟ್‌ವರ್ಕ್‌ಗಳು ಈಗ ನಗರ ಪ್ರದೇಶದಲ್ಲೂ ಸಿಗುವುದು ಕಷ್ಟವಾಗಿದೆ. ಹೀಗಿರುವಾಗ ಈ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ಸರ್ಕಾರಿ ಭೇಟಿಗೆ ಶಿಷ್ಟಾಚಾರದ ನೆಪದಲ್ಲಿ ಇಟ್ಟ ದೊಡ್ಡ ಪಟ್ಟಿಯೊಂದು ತೀವ್ರ ವಿವಾದಕ್ಕೀಡಾಗಿದೆ. ಇದು ಎಷ್ಟೊಂದು ಚರ್ಚೆಗೆ ಗ್ರಾಸವಾಗಿದೆ ಎಂದರೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಅಧಿಕಾರಿಯ ವಿರುದ್ಧ ತನಿಖೆ ಹಾಗೂ ಕ್ರಮಕ್ಕೆ ಆದೇಶಿಸಿದ್ದಾರೆ.
ಹೌದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಬಿಎಸ್‌ಎನ್‌ಎಲ್ ನಿರ್ದೇಶಕ ವಿವೇಕ್ ಬಂಝಲ್ ಅವರು ನೀಡಬೇಕಿದ್ದ ಭೇಟಿಯ ಸಮಯದಲ್ಲಿ ಅವರು ಶಿಷ್ಟಾಚಾರದ ನೆಪದಲ್ಲಿ ನೀಡಿದ್ದ ಉದ್ದನೇಯ ಲಿಸ್ಟ್ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ವಿಷಯ ನಮ್ಮ ಗಮನಕ್ಕೆ ಬಂದಿದೆ ಎಂದು ಸಚಿವ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೇಳಿದ್ದಾರೆ ಅಲ್ಲದೇ ಬಿಎಸ್‌ಎನ್‌ಎಲ್ ನಿರ್ದೇಶಕರ ಈ ವರ್ತನೆ ಅಸಹ್ಯ, ಅನುಚಿತ, ಆಘಾತಕಾರಿಯಲ್ಲದೇ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಕಲಿ ಕಾನೂನು ಪದವಿಯೊಂದಿಗೆ ಹೈಕೋರ್ಟ್‌ನಲ್ಲಿ 5 ವರ್ಷಗಳ ಕಾಲ ಜಡ್ಜ್ ಆಗಿ ಸೇವೆ ಸಲ್ಲಿಸಿದ ವ್ಯಕ್ತಿ
ಅಧಿಕೃತ ಆದೇಶದ ಪ್ರಕಾರ, ಬಿಎಸ್‌ಎನ್‌ಎಲ್ ಮಂಡಳಿಯ ನಿರ್ದೇಶಕ (ಸಿಎಫ್‌ಎ) ವಿವೇಕ ಬಂಝಲ್ ಫೆಬ್ರವರಿ 25 ಹಾಗೂ 26 ರಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಬೇಕಿತ್ತು. ಆದರೆ ಅವರ ಅಧಿಕೃತ ಆದೇಶ ವೈರಲ್ ಆದ ನಂತರ ಅವರ ಪ್ರವಾಸವನ್ನು ರದ್ದುಗೊಳಿಸಲಾಗಿದೆ.
ಅವರ ಕೇವಲ ಎರಡು ದಿನದ ಪ್ರಯಾಗ್‌ರಾಜ್ ಭೇಟಿಗಾಗಿ ಅವರ ಆದೇಶದ ಪ್ರಕಾರ ಸುಮಾರು 50 ಅಧಿಕಾರಿಗಳಿಗೆ ಸುಮಾರು 20 ಕಾರ್ಯಗಳನ್ನು ನಿಯೋಜಿಸಲಾಗಿತ್ತು. ಪ್ರಯಾಗ್‌ರಾಜ್‌ಗೆ ಆಗಮಿಸಿದ ನಂತರ, ವಿವೇಕ್ ಬಂಝಲ್ ಸಂಗಮದಲ್ಲಿ ಸ್ನಾನ ಮಾಡಲು, ದೋಣಿ ವಿಹಾರ ಮಾಡಲು ಮತ್ತು ಬಡೇ ಹನುಮಾನ್ ಮಂದಿರ, ಅಕ್ಷಯವತ್ ಮತ್ತು ಪಾತಾಳಪುರಿ ದೇವಾಲಯಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದರು.
ಇದಕ್ಕಾಗಿ ಆದೇಶದ ಪ್ರಕಾರ ಅವರ ಸ್ನಾನದ ಕಿಟ್‌ನಲ್ಲಿ ಟವಲ್, ಒಳ ಉಡುಪು, ಚಪ್ಪಲಿ, ಬಾಚಣಿಗೆ, ಕನ್ನಡಿ ಮತ್ತು ಎಣ್ಣೆ ಬಾಟಲಿ ಹಾಗೂ ಘಾಟ್‌ನಲ್ಲಿ ಸಾಮಾನ್ಯ ಬಳಕೆಗಾಗಿ ಒಂದು ಬೆಡ್‌ಶೀಟ್ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿತ್ತು. ನಂತರ ಹೋಟೆಲ್ ಮತ್ತು ಸರ್ಕ್ಯೂಟ್ ಹೌಸ್‌ನಲ್ಲಿ ಡ್ರೈ ಫ್ರೂಟ್ ಬೌಲ್, ಫ್ರೂಟ್ ಬೌಲ್, ಶೇವಿಂಗ್ ಕಿಟ್, ಟವೆಲ್, ಟೂತ್‌ಪೇಸ್ಟ್, ಬ್ರಷ್, ಸೋಪ್, ಶಾಂಪೂ, ಬಾಚಣಿಗೆ ಮತ್ತು ಎಣ್ಣೆಯನ್ನು ಜೋಡಿಸಲು ಹೇಳಲಾಗಿತ್ತು.
ಇದನ್ನೂ ಓದಿ: ರೈಲಿನಲ್ಲಿ ಚೆಲ್ಲಿದ್ದ ಚಿಪ್ಸ್‌ನ್ನು ಪುಟ್ಟ ಮಗನ ಕೈಯಲ್ಲೇ ಹೆಕ್ಕಿಸಿ ಆತನಿಗೆ ಮೂಲಭೂತ ಕರ್ತವ್ಯದ ಪಾಠ ಮಾಡಿದ ತಂದೆ
ಇವರ ಈ ಆದೇಶವೂ ವೈರಲ್ ಆದ ಹಿನ್ನೆಲೆ ಈಗ ವಿವೇಕ್ ಬಂಝಲ್ ವಿರುದ್ಧ ಶೋ-ಕಾಸ್ ನೋಟಿಸ್ ನೀಡಲಾಗಿದೆ ಮತ್ತು ಏಳು ದಿನಗಳಲ್ಲಿ ಪ್ರತಿಕ್ರಿಯಿಸಲು ಅವರಿಗೆ ಸೂಚಿಸಲಾಗಿದೆ. ಸರ್ಕಾರವು ಇದನ್ನು ಸುಲಭವಾಗಿ ಬಿಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಯಾವುದೇ ಅಧಿಕಾರಿಯ ಅಧಿಕೃತ ಭೇಟಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸ್ಥಾಯೀ ಸೂಚನೆಗಳಿವೆ ಎಂದು ಬಿಎಸ್‌ಎನ್‌ಎಲ್ ಇಂಡಿಯಾ ಹೇಳಿದೆ.
ಆದರೆ ಈ ಸೂಚನೆಗಳನ್ನು ಪಾಲಿಸಿಲ್ಲ ಎಂಬುದು ತಿಳಿದು ಬಂದಿದೆ. ಈ ಅಧಿಕಾರಿಯ ನಿದರ್ಶನವು ಬಿಎಸ್‌ಎನ್‌ಎಲ್‌ನ ವೃತ್ತಿಪರ ಮಾನದಂಡಗಳು ಮತ್ತು ಮೌಲ್ಯಗಳಿಗೆ ಅನುಗುಣವಾಗಿಲ್ಲ ಎಂದು ಅದು ಫೆಬ್ರವರಿ 21 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಅಸ್ತಿತ್ವದಲ್ಲಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ನಿಗದಿತ ನಡವಳಿಕೆಯ ನಿಯಮಗಳು ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಬಿಎಸ್‌ಎನ್‌ಎಲ್ ಉದ್ಯೋಗಿಗಳಿಗೆ ನೆನಪಿಸಲಾಗಿದೆ ಎಂದು ಅದು ಹೇಳಿದೆ.
ಹೀಗೆ ವಿವಾದಕ್ಕೀಡಾದ ಬಂಝಲ್ 1987 ರ ಬ್ಯಾಚ್‌ನ ಭಾರತೀಯ ದೂರಸಂಪರ್ಕ ಸೇವಾ ಅಧಿಕಾರಿಯಾಗಿದ್ದು ಅವರು ಎಲೆಕ್ಟ್ರಾನಿಕ್ಸ್‌ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ, ಕಂಪ್ಯೂಟರ್ ಸೈನ್ಸ್‌ನಲ್ಲಿ ಮಾಸ್ಟರ್ ಆಫ್ ಎಂಜಿನಿಯರಿಂಗ್ ಮತ್ತು ಎಂಬಿಎ ಪದವಿ ಪಡೆದಿದ್ದಾರೆ. ಬಿಎಸ್‌ಎನ್‌ಎಲ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಅವರು ಭಾರತದಲ್ಲಿ ಟೆಲಿಕಾಂ ನೆಟ್‌ವರ್ಕ್‌ಗಳನ್ನು ನಿರ್ವಹಿಸುವಲ್ಲಿ 34 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ