
ನವದೆಹಲಿ (ಜೂ.24): ರಾಜ್ಯ ಕಾಂಗ್ರೆಸ್ ಸರ್ಕಾರದ ದರ್ಬಾರಿನಲ್ಲಿ ಶಾಸಕರ ಪರಿಸ್ಥಿತಿ ತಬರನ ಕಥೆಯಂತೆ ಆಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯ ತಮ್ಮ ಅಧಿಕೃತ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಅನುದಾನಕ್ಕಾಗಿ, ಸರ್ಕಾರದ ಯೋಜನೆಗಳಿಗಾಗಿ ಕಚೇರಿಗಳ ಸುತ್ತ, ತಬರನಂತೆ ಸುತ್ತುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರಿಗೇ ಇಂತ ದುರ್ಗತಿ ಬಂದರೆ ಇತರೆ ಪಕ್ಷಗಳ ಶಾಸಕರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ರಾಜ್ಯದ ಪರಿಸ್ಥಿತಿ ಹೇಗಾಗಿದೆ ಎಂದರೆ ಆಲಿಬಾಬಾ 34 ಕಳ್ಳರು ಎನ್ನುವಂಥ ರೀತಿ ಆಗಿದೆ. ಮುಖ್ಯಮಂತ್ರಿ, ಮಂತ್ರಿಗಳು ಕಮಿಷನ್ ಉಡಾಯಿಸಿ ಮೋಜು ಮಾಡುತ್ತಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಿಗೆ ಮುಖ ಹಾಕಲಾರದ ದುಸ್ಥಿತಿಯಲ್ಲಿ ಇದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೆನಿದೆ? ಇದನ್ನು ಪ್ರತಿಪಕ್ಷ ನಾಯಕರು ಹೇಳುತ್ತಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ಅದರಲ್ಲಿಯೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಅಂಥವರೇ ಹೇಳುತ್ತಿದ್ದಾರೆ. ಅವರೇ ಈ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ವಸತಿ ಇಲಾಖೆಯದ್ದೇ ಪುರಾಣ. ಜನತೆ ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ಮಾಡಲಾಗುತ್ತಿದೆ. ಸರಕಾರಕ್ಕೆ ಜನರ ಭಯ ಭಕ್ತಿ ಇಲ್ಲದಾಗಿದೆ. ಬಿ.ಆರ್.ಪಾಟೀಲ್ ಅವರ ಕ್ಷೇತ್ರದಲ್ಲೇ 950 ಮನೆಗಳನ್ನು ವಸತಿ ಇಲಾಖೆಯಿಂದ ನೀಡಿದ್ದಾರೆ! ಪಾಟೀಲ್ ಅವರು ಸಚಿವರ ಆಪ್ತ ಕಾರ್ಯದರ್ಶಿಗೆ ಮೊಬೈಲ್ ಕರೆ ಮೂಲಕ ಪ್ರಶ್ನೆ ಮಾಡಿದರೆ, ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಆಡಿಯೋ ಮೂಲಕ ವೈರಲ್ ಆಗಿದೆ. ನಿಖರವಾದ ಪ್ರಕರಣ ಇದ್ದರೆ ದೂರು ಕೊಡಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕರಿಗೆ ಉತ್ತರ ಕೊಡುತ್ತಾರೆ. ಆ ವ್ಯಕ್ತಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೊಟ್ಟಿದ್ದಾರಾ ಸಚಿವರು? ವಸೂಲಿ ಮಾಡುವ ಪವರ್ ಕೊಟ್ಟಿದ್ದಾರಷ್ಟೇ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ