
ದುಬೈ (ಜೂ.24): ಅಮೆರಿಕದ ಭಾರೀ ಬಾಂಬ್ ದಾಳಿ ಬೆನ್ನಲ್ಲೇ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್, ಇಸ್ರೇಲ್ ಮೇಲೆ ‘ಟ್ರೂ ಪ್ರಾಮಿಸ್ 3’ ಹೆಸರಲ್ಲಿ ಹಲವು ನಗರಗಳ ಮೇಲೆ ದಾಳಿ ನಡೆಸಿದೆ. ಅದರ ಬೆನ್ನಲ್ಲೇ ಇರಾನ್‌ನ ಫೋರ್ಡೋ ಪರಮಾಣು ನೆಲೆ, 6 ವಿಮಾನ ನಿಲ್ದಾಣ, ರೆವಲ್ಯೂಷನರಿ ಗಾರ್ಡ್ಸ್ ಕಚೇರಿ, ಕುಖ್ಯಾತಿ ಇವಿನ್ ಜೈಲಿನ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಜೊತೆಗೆ 15 ಯುದ್ಧ ವಿಮಾನಗಳನ್ನು ಧ್ವಂಸಗೊಳಿಸಿದೆ. ಈ ದಾಳಿಯ ಬಳಿಕ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಮುಗಿಲೆತ್ತರದ ಕಪ್ಪುಹೊಗೆ ಕಂಡುಬಂದಿದೆ.
ಇರಾನ್ ದಾಳಿ(Iran attack)
ಅಮೆರಿಕದ ದಾಳಿಯಿಂದ ಆಕ್ರೋಶಗೊಂಡಿದ್ದ ಇರಾನ್, ಸೋಮವಾರ ಇಸ್ರೇಲ್ ರಾಜಧಾನಿ ಟೆಲ್ ಅವಿವ್, ಹಫಿಯಾ ಸೇರಿ ಹಲವು ನಗರಗಳ ಆಯಕಟ್ಟಿನ ಪ್ರದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಪವಿತ್ರ ನಗರಿ ಜೆರುಸಲೆಂನಲ್ಲೂ ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ.
ದಾಳಿ ತೀವ್ರಗೊಳಿಸಿದ ಇಸ್ರೇಲ್(Israel attacked on iran)
ಈ ನಡುವೆ ಇರಾನ್ ವಿರುದ್ಧ ಸೋಮವಾರ ತೀವ್ರ ಪ್ರತಿದಾಳಿ ಸಂಘಟಿಸಿರುವ ಇಸ್ರೇಲ್ ಶತ್ರು ದೇಶದ ವಾಯುಸೇನೆಯ ನಡುಮುರಿಯಲೆತ್ನಿಸಿದೆ. ಪೂರ್ವ, ಪಶ್ಚಿಮ ಮತ್ತು ಕೇಂದ್ರ ಇರಾನ್‌ನಲ್ಲಿರುವ ಆರು ಏರ್ಪೋರ್ಟ್‌ಗಳು ಸೇರಿ ಪ್ರಮುಖ ನೆಲೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸಿದೆ. ಈ ವೇಳೆ ಏರ್ಪೋರ್ಟ್‌ನ ಭೂಗತ ಕಟ್ಟಡಗಳಲ್ಲಿ ಇರಿಸಿದ್ದ ಇಂಧನ ಮರುಪೂರಣ ವಿಮಾನ, ಎಫ್.-14, ಎಫ್-5 ಮತ್ತು ಎಎಚ್-1 ಯುದ್ಧ ವಿಮಾನಗಳು ಸೇರಿ ಒಟ್ಟು 15 ವಿಮಾನಗಳು, ಒಂದು ಹೆಲಿಕಾಪ್ಟರ್‌ಗೆ ಭಾರೀ ಹಾನಿಯಾಗಿದೆ.ಜತೆಗೆ, ಟೆಹ್ರಾನ್‌ನ ಪ್ಯಾಲೆಸ್ತೇನ್ ಸ್ವ್ಕೇರ್, ಇರಾನ್‌ನ ರೆವಲ್ಯೂಷನರಿ ಗಾರ್ಡ್ ಮತ್ತು ಇತರೆ ಪ್ರಾದೇಶಿಕ ಭದ್ರತಾ ಪಡೆಗಳ ಕಮಾಂಡ್ ಸೆಂಟರ್‌ಗಳ ಮೇಲೂ ದಾಳಿ ನಡೆಸಿದೆ.
ಅಣುನೆಲೆ ಮೇಲೆ ಮತ್ತೆ ದಾಳಿ(attack on nuclear site)
ಇನ್ನು ಭಾನುವಾರ ಅಮೆರಿಕ ಬಾಂಬ್ ಹಾಕಿದ್ದ ಫೋರ್ಡೋ ಪರಮಾಣು ಕೇಂದ್ರ ಮತ್ತು ಅದನ್ನು ಸಂಪರ್ಕಿಸುವ ರಸ್ತೆಗಳ ಮೇಲೂ ಇಸ್ರೇಲ್ ಸೋಮವಾರ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ಫೋರ್ಡೋ ಕೇಂದ್ರಕ್ಕೆ ಸಂಪರ್ಕವನ್ನು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿದೆ.ಜೈಲ್‌ಗೂ ದಾಳಿ ಬಿಸಿ:
ಟೆಹ್ರಾನ್‌ನಲ್ಲಿರುವ ವಿದೇಶಿಗರು ಮತ್ತು ರಾಜಕೀಯ ಕೈದಿಗಳನ್ನಿರಿಸಿರುವ ನಟೋರಿಯಸ್ ಇವಿನ್ ಜೈಲಿನ ಗೇಟ್ ಮೇಲೂ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಈ ಜೈಲಲ್ಲಿ ವಿದೇಶಿಗರು, ರಾಜಕೀಯ ಕೈದಿಗಳನ್ನು ಇಡಲಾಗಿದ್ದು, ಅವರನ್ನು ಮುಂದಿಟ್ಟುಕೊಂಡು ಇರಾನ್ ಆಡಳಿತವು ಪಾಶ್ಚಿಮಾತ್ಯ ದೇಶಗಳ ಜತೆಗೆ ಸಂಧಾನದ ಮಾತುಕತೆ ನಡೆಸುತ್ತಿತ್ತು ಎಂದು ಹೇಳಲಾಗಿದೆ. ಖೈಬರ್ ಕ್ಷಿಪಣಿಯಿಂದ ದಾಳಿ:
ಇಸ್ರೇಲ್ ಮೇಲೆ ಇದೇ ಮೊದಲ ಬಾರಿಗೆ ಹಲವು ಸಿಡಿತಲೆಗಳನ್ನು ಹೊಂದಿರುವ ಖೈಬರ್ ಕ್ಷಿಪಣಿ ಬಳಸಿ ಭಾರೀ ನಡೆಸಿದ್ದಾಗಿ ಇರಾನ್ ಹೇಳಿಕೊಂಡಿದೆ. ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದಾಗಿ ಇಸ್ರೇಲ್‌ನ ಟೆಲ್‌ಅವೀಲ್, ಹಫಿಯಾ, ಇತರೆಡೆ ಕೆಲಕಟ್ಟಡಗಳಿಗೆ ಹಾನಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇರಾನ್ ದಾಳಿಗೆ ಅಶ್‌ಹೋಡ್ ವಿದ್ಯುತ್ ಘಟಕಕ್ಕೂ ತೊಂದರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ