ರಾಮಮಂದಿರ ನಿರ್ಮಾಣ ಇಂದು ಮುಹೂರ್ತ? ಉಡುಪಿ ಪೇಜಾವರ ಶ್ರೀ ಭಾಗಿ!

By Kannadaprabha News  |  First Published Feb 19, 2020, 12:57 PM IST

ರಾಮಮಂದಿರ ನಿರ್ಮಾಣ ಆರಂಭಕ್ಕೆ ಇಂದು ಮುಹೂರ್ತ?| ದೆಹಲಿಯಲ್ಲಿ ಇಂದು ರಾಮಮಂದಿರ ಟ್ರಸ್ಟ್‌ ಮೊದಲ ಸಭೆ| ಟ್ರಸ್ಟ್‌ನ ಅಧ್ಯಕ್ಷ, ಇತರ ಖಾಲಿ ಹುದ್ದೆಗಳ ಭರ್ತಿ ನಿರೀಕ್ಷೆ


ನವದೆಹಲಿ[ಫೆ.19]: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಉಸ್ತುವಾರಿಗೆಂದು ರಚನೆ ಆಗಿರುವ ‘ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌’ನ ಮೊದಲ ಸಭೆ ಬುಧವಾರ ದೆಹಲಿಯಲ್ಲಿ ನಡೆಯಲಿದೆ. ಸಂಜೆ 5 ಗಂಟೆಗೆ ಟ್ರಸ್ಟ್‌ನ ಸದಸ್ಯ ಕೆ. ಪರಾಶರನ್‌ ಅವರ ನಿವಾಸದಲ್ಲಿ ಸಭೆ ಏರ್ಪಟ್ಟಿದೆ. ಇವರ ಮನೆ ವಿಳಾಸದಲ್ಲೇ ಟ್ರಸ್ಟ್‌ ನೋಂದಣಿ ಆಗಿದೆ.

ಸಭೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಟ್ರಸ್ಟ್‌ನ ಎಲ್ಲಾ ಸದಸ್ಯರು ಮಂಗಳವಾರವೇ ದಿಲ್ಲಿಗೆ ಆಗಮಿಸಿದ್ದಾರೆ. ರಾಮಜನ್ಮಭೂಮಿ ನ್ಯಾಸ್‌ ಅಧ್ಯಕ್ಷರೂ ಆದ ಅಯೋಧ್ಯೆಯ ಹಿರಿಯ ಯತಿ ಮಹಾಂತ ನೃತ್ಯಗೋಪಾಲ ದಾಸ್‌ ಅವರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಟ್ರಸ್ಟ್‌ನಲ್ಲಿ ಕರ್ನಾಟಕದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೂಡಾ ಸದಸ್ಯರಾಗಿದ್ದಾರೆ.

Tap to resize

Latest Videos

ಸಭೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಯಾವಾಗ ಚಾಲನೆ ನೀಡಬೇಕು ಎಂಬ ಚರ್ಚೆ ನಡೆಯುವ ನಿರೀಕ್ಷೆಯಿದೆ. ಈಗಾಗಲೇ ಏಪ್ರಿಲ್‌ 2ರ ರಾಮನವಮಿ ದಿನದಂದು ಮಂದಿರ ನಿರ್ಮಾಣಕ್ಕೆ ಚಾಲನೆ ಸಿಗಬಹುದು ಎಂದು ಟ್ರಸ್ಟ್‌ನ ಕೆಲವು ಸದಸ್ಯರು ಸುಳಿವು ನೀಡಿದ್ದಾರೆ.

ಇದಲ್ಲದೆ ಟ್ರಸ್ಟ್‌ ಅಧ್ಯಕ್ಷರು, ಖಜಾಂಚಿ, ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಕೆಲವು ನಾಮನಿರ್ದೇಶಿತ ಸದಸ್ಯರು ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

15 ಜನರ ಧರ್ಮದರ್ಶಿ ಮಂಡಳಿಯಲ್ಲಿ 9 ಕಾಯಂ ಹಾಗೂ 6 ನಾಮನಿರ್ದೇಶಿತ ಸದಸ್ಯರಿದ್ದಾರೆ.

ಫೆಬ್ರವರಿ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!