Lucknow: ಯುದ್ಧ ವಿಮಾನ ಮಿರಾಜ್ ಟಯರ್ ಕಳ್ಳತನ: ದೇಶ ವಿರೊಧಿ ಶಕ್ತಿಗಳ ಕೈವಾಡ?

By Suvarna NewsFirst Published Dec 3, 2021, 9:22 AM IST
Highlights

* ಮಿರಾಜ್ ಫೈಟರ್‌ ಜೆಟ್‌ ಟಯರ್ ಕದ್ದೊಯ್ದ ದುಷ್ಕರ್ಮಿಗಳು

* ಟ್ರಾಫಿಕ್ ಮಧ್ಯೆ ಸಿಕ್ಕಾಕೊಂಡಿದ್ದ ಟ್ರೇಲರ್‌ನಿಂದ ಕಳ್ಳತನ

* ಎಫ್‌ಐಆರ್‌ ದಾಖಲಿಸಿದ ಭಾರತೀಯ ವಾಯುಪಡೆ

ಲಕ್ನೋ(ಡಿ.03): ಮನೆಯ ಹೊರಗೆ ಅಥವಾ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಚಕ್ರಗಳನ್ನು ಕದ್ದೊಯ್ದ ಘಟನೆಗಳನ್ನು ನೀವು ಕೇಳಿರಬಹುದು, ಆದರೆ ಉತ್ತರ ಪ್ರದೇಶದ ಲಕ್ನೋದಲ್ಲಿ (Lucknow, Uttar Pradesh) ಕಳ್ಳರು ಮಿರಾಜ್ ಯುದ್ಧ ವಿಮಾನದ (Mirage Fighter Plane) ಟೈರ್‌ಗಳನ್ನು ಕಳ್ಳತನ ಮಾಡಿದ್ದಾರೆ. ಈ ಕಳ್ಳತನದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುದ್ಧ ವಿಮಾನದ ಟೈರ್‌ಗಳನ್ನು ಇತರ ವಾಹನಗಳಲ್ಲಿ ಬಳಸಲಾಗುವುದಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೆದ ಜನರು, ಈ ಟೈರ್ ಅನ್ನು ಕಳ್ಳರು ಏನು ಮಾಡುತ್ತಾರೆ ಎಂದು ಕೇಳಲಾರಂಭಿಸಿದ್ದಾರೆ. ಘಟನೆ ಹಿಂದೆ ದೇಶ ವಿರೋಧಿ ಶಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಪೊಲೀಸರ ಜತೆಗೆ ವಾಯುಸೇನೆ ಪೊಲೀಸ್‌ ಅಧಿಕಾರಿಗಳು ಕೂಡ ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.

ಶಹೀದ್ ಪಥದಲ್ಲಿ ಕಳ್ಳತನ

ಲಕ್ನೋದ ಶಹೀದ್ ಪಥ್ ನಲ್ಲಿ ಈ ಘಟನೆ ನಡೆದಿದೆ. ಲಕ್ನೋದ ಬಿಕೆಟಿ ಏರ್‌ಬೇಸ್‌ನಿಂದ ಜೋಧ್‌ಪುರ ವಾಯುನೆಲೆಗೆ (Jodhpur Airbase) ಫೈಟರ್ ಜೆಟ್ ಮಿರಾಜ್‌ನ ಐದು ಟೈರ್‌ಗಳನ್ನು ಕಳುಹಿಸಲಾಗುತ್ತಿತ್ತು. ಹೀಗಿರುವಾಗ ಟ್ರೇಲರ್ ಶಹೀದ್ ಪಥದಲ್ಲಿ ರಸ್ತೆ ಜಾಮ್‌ನಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಸ್ಕಾರ್ಪಿಯೋ ಸವಾರಿ ಮಾಡುತ್ತಿದ್ದ ದುಷ್ಕರ್ಮಿಗಳು ಹಗ್ಗ ತುಂಡರಿಸಿ ಟ್ರೇಲರ್‌ನಿಂದ ಟಯರ್ ತೆಗೆದು ಪಲ್ಟಿ ಹೊಡೆದಿದ್ದಾರೆ. ರಸ್ತೆಯಲ್ಲಿ ವಾಹನ ದಟ್ಟಣೆ ಇದ್ದ ಕಾರಣ ಚಾಲಕನಿಗೆ ದುಷ್ಕರ್ಮಿಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದರಾದರೂ ಅಷ್ಟೊತ್ತಿಗಾಗಲೇ ಕಳ್ಳರು ಪರಾರಿಯಾಗಿದ್ದರು.

ಸ್ಕಾರ್ಪಿಯೋದಲ್ಲಿ ಬಂದಿದ್ದ ದುಷ್ಕರ್ಮಿಗಳು

ಚಾಲಕ ಹೇಮಸಿಂಗ್ ರಾವತ್ ಜೋಧ್‌ಪುರ ವಾಯುನೆಲೆಗೆ ಐದು ಟೈರ್‌ಗಳ ಬದಲಿಗೆ ನಾಲ್ಕು ಟೈರ್‌ಗಳೊಂದಿಗೆ ತಲುಪಿದಾಗ, ವಾಯುಪಡೆ ಪೊಲೀಸರು (Indian Air Force Police) ಅವರನ್ನು ವಶಕ್ಕೆ ತೆಗೆದುಕೊಂಡರು. ಯುದ್ಧ ವಿಮಾನದ ಭಾಗಗಳನ್ನು ಅದರ ಟ್ರೈಲರ್‌ನಿಂದ ಸಾಗಿಸಲಾಗುತ್ತದೆ. ಹೀಗಿರುವಾಗ ಘಟನೆಯ ಹಿಂದೆ ಶತ್ರು ದೇಶದ ಷಡ್ಯಂತ್ರ ಇರಬಹುದೆಂಬ ಭಯ ವಾಯುಪಡೆಗೆ ಇದೆ. ಕಪ್ಪು ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಮಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ನವೆಂಬರ್ 27 ರ ರಾತ್ರಿ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ಟ್ರೇಲರ್ ಜಪ್ತಿ ಮಾಡಲಾಗಿದೆ.

ಮಿರಾಜ್ 2000 ಯುದ್ಧ ವಿಮಾನ

ಮಿರಾಜ್ 2000 ಯುದ್ಧ ವಿಮಾನ ನಿರ್ಮಿಸಿರುವುದು ಫ್ರಾನ್ಸ್‌ನ ಡಸಾಲ್ಟ್ ಕಂಪನಿ. 1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಅದ್ಭುತವಾಗಿ ಕೆಲಸ ಮಾಡಿದ್ದು ಇದೇ ಮಿರಾಜ್ 2000 ವಿಮಾನ. ಭಾರತಕ್ಕೆ ಸರಬರಾಜು ಮಾಡಿದ ಮಿರಾಜ್ ಗಳಲ್ಲಿ ಸೀಮಿತವಾದ ವಾಯು ದಾಳಿ ಸಾಮರ್ಥ್ಯ ಇತ್ತು. ಆ ನಂತರ ಅದರಲ್ಲಿ ಭಾರೀ ಮಾರ್ಪಾಟು ಮಾಡಿ, ಲೇಸರ್-ಮಾರ್ಗದರ್ಶನದ ಬಾಂಬ್ ಗಳು ಹಾಗೂ ಸಾಂಪ್ರದಾಯಿಕವಾಗಿ ಬಳಕೆಯಾಗುವ ಬಾಂಬ್ ಗಳನ್ನು ಹಾಕಲು ಸಿದ್ಧಗೊಳಿಸಲಾಯಿತು.

ಪೂರ್ಣ ಪ್ರಮಾಣದಲ್ಲಿ ಸನ್ನದ್ಧವಾಗಿರುವ ಈ ಯುದ್ಧ ವಿಮಾನವು ಶತ್ರು ಪಾಳಯದ ಕಮ್ಯಾಂಡ್ ಬಂಕರ್ ಗಳನ್ನು ಧ್ವಂಸಗೊಳಿಸಿತ್ತು. 1999ರ ಜೂನ್- ಜುಲೈನಲ್ಲಿ ನಡೆದ ಆಪರೇಷನ್ ಸೇಫ್ಡ್ ಸಾಗರ್ ನಲ್ಲಿ ಎರಡು ಮಿರಾಜ್ ಸ್ಕ್ವಾಡ್ರನ್ ಬಳಸಲಾಗಿತ್ತು. ಆಗ ಐವತ್ತೈದು ಸಾವಿರ ಕೇಜಿಯಷ್ಟು ಬಾಂಬ್ ಸುರಿದಿತ್ತು.

ಮೇಲ್ದರ್ಜೆಗೆ ಏರಿದ ಮಿರಾಜ್ 2000

ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಎರಡು ಮೇಲ್ದರ್ಜೆಗೆ ಏರಿದ ಮಿರಾಜ್ 2000 ಯುದ್ಧ ವಿಮಾನ ಪಡೆದದ್ದು 10,000 ಕೋಟಿಗಿಂತ ಸ್ವಲ್ಪ ಕಡಿಮೆ ಮೊತ್ತಕ್ಕೆ. ಅದು 2018ರ ಜುಲೈ ತಿಂಗಳಲ್ಲಿ. ಭಾರತೀಯ ವಾಯು ಸೇನೆಯ ಪೈಲಟ್ ಗಳು ಫ್ರಾನ್ಸ್ ನಿಂದ ಇದೇ ವಿಮಾನದಲ್ಲಿ ವಾಪಸ್ ಬರುತ್ತಾ ಏಳು ದಿನಗಳಲ್ಲಿ ಗ್ರೀಸ್, ಈಜಿಪ್ಟ್, ಕತಾರ್ ಮೂಲಕ ಗ್ವಾಲಿಯರ್‌ನ ವಾಯು ಸೇನೆ ಕೇಂದ್ರದಲ್ಲಿ ಇಳಿಸಿದ್ದರು.

click me!