ಹಾಸ್ಟೆಲ್‌ನಲ್ಲಿ ದೂರು ಹೇಳಿದ್ದಕ್ಕೆ ಐರನ್ ಬಾಕ್ಸ್ ಬಿಸಿ ಮಾಡಿ ಬಾಲಕನ ಹೊಟ್ಟೆಗಿಟ್ಟ ಸಹಪಾಠಿಗಳು

Published : Aug 28, 2025, 07:50 AM IST
Iron box

ಸಾರಾಂಶ

ಆಂಧ್ರಪ್ರದೇಶದ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ಇಸ್ತ್ರಿ ಪೆಟ್ಟಿಗೆಯಿಂದ ಮತ್ತೊಬ್ಬ ಬಾಲಕನಿಗೆ ಸುಟ್ಟಿದ್ದಾರೆ. ತಾಯಿ ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಮಕ್ಕಳಲ್ಲಿಯೂ ತೀವ್ರವಾದ ಕ್ರೌರ್ಯ ಬೆಳೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಗುಜರಾತ್‌ನಲ್ಲಿ ಹಿರಿಯ ವಿದ್ಯಾರ್ಥಿಯನ್ನು ಕಿರಿಯ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿತ್ತು. ಈಗ ಈ ಘಟನೆ ಮಾಸುವ ಮೊದಲೇ ಆಂಧ್ರಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಇಬ್ಬರು ವಿದ್ಯಾರ್ಥಿಗಳು ಸೇರಿ ಇಸ್ತ್ರಿ ಪೆಟ್ಟಿಗೆಯಿಂದ ಮತ್ತೊಬ್ಬ ಬಾಲಕನ ಹೊಟ್ಟೆ ಹಾಗೂ ಕೈಗಳಿಗೆ ಸುಟ್ಟಿದ್ದಾರೆ. ಇದರಿಂದ ಆ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕನಿಗೆ ಐರನ್‌ ಬಾಕ್ಸ್ ಬಿಸಿ ಮಾಡಿ ಇಟ್ಟ ಸಹಪಾಠಿಗಳು:

ಆಂಧ್ರ ಪ್ರದೇಶದ ಖಾಸಗಿ ಶಾಲೆಯೊಂದರ ಹಾಸ್ಟೆಲ್‌ನಲ್ಲಿ ಆಗಸ್ಟ್ 18ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯ ಮೊರಂಪುಡಿಯಲ್ಲಿರುವ ಖಾಸಗಿ ಶಾಲೆಯ ಹಾಸ್ಟೆಲ್ ಕೋಣೆಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಸಹಪಾಠಿಗಳು ಬಾಲಕನ ಹೊಟ್ಟೆ ಹಾಗೂ ಕೈಗಳಿಗೆ ಐರನ್ ಬಾಕ್ಸ್ ಬಿಸಿ ಮಾಡಿ ಇಟ್ಟಿದ್ದು ಇದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಮ್ಮ ಕೃತ್ಯದ ಬಗ್ಗೆ ಹೇಳಿದ್ದಕ್ಕೆ ಬಾಲಕರಿಂದ ಸಹಪಾಠಿಗೆ ಶಿಕ್ಷೆ:

ಆಗಸ್ಟ್ 16ರಂದು ಹಾಸ್ಟೆಲ್ ಮಕ್ಕಳಿಗಾಗಿ ಹಾಸ್ಟೆಲ್‌ನಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಲಾಗಿತ್ತು. ಇದಾದ ನಂತರ ಇಬ್ಬರು ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿದ್ದ ಸಿಸಿಟಿವಿಯನ್ನು ತೆಗೆದು ಈ ಸಂತ್ರಸ್ತ ಬಾಲಕನ ಶಾಲೆಯ ಬ್ಯಾಗ್‌ನಲ್ಲಿ ಇಟ್ಟಿದ್ದಾರೆ. ಇತ್ತ ಸಿಸಿಟಿವಿ ಕಾಣದೇ ಹೋಗಿದ್ದರಿಂದ ಹಾಸ್ಟೆಲ್ ಇನ್‌ಚಾರ್ಜ್ ಅವರು ಈ ಮೂವರು ವಿದ್ಯಾರ್ಥಿಗಳನ್ನು ಕರೆದು ವಿಚಾರಿಸಿದ್ದಾರೆ. ಈ ವೇಳ ಸಂತ್ರಸ್ತ ವಿದ್ಯಾರ್ಥಿ ತನ್ನ ಸಹಪಾಠಿಗಳೇ ಈ ಕೃತ್ಯವೆಸಗಿದ್ದಾಗಿ ಅವರ ಮುಂದೆ ಬಾಯ್ಬಿಟ್ಟಿದ್ದಾನೆ. ಇದರಿಂದ ಕುಪಿತಗೊಂಡ ಆ ಇಬ್ಬರು ವಿದ್ಯಾರ್ಥಿಗಳು ಆಗಸ್ಟ್ 18ರಂದು ತಮ್ಮ ಹಾಸ್ಟೆಲ್ ರೂಮ್‌ನಲ್ಲಿ ಐರನ್ ಬಾಕ್ಸ್ ಬಿಸಿ ಮಾಡಿ ಬಾಲಕನ ಕೈ ಹಾಗೂ ಹೊಟ್ಟೆಗೆ ಇಟ್ಟಿದ್ದಾರೆ.

ಬಾಲಕನ ತಾಯಿ ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ:

ಇತ್ತ ಹಾಸ್ಟೆಲ್ ಸಿಬ್ಬಂದಿಗೆ ಈ ವಿಚಾರ ಗಮನಕ್ಕೆ ಬಂದಿಲ್ಲ, ಅಥವಾ ನಿರ್ಲಕ್ಷ್ಯ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಬಾಲಕನ ತಾಯಿ ಆತನನ್ನು ನೋಡುವುದಕ್ಕೆಂದು ಹಾಸ್ಟೆಲ್‌ಗೆ ಭೇಟಿ ನೀಡಿದ ವೇಳೆ ಮಗನ ಕೈಯಲ್ಲಿ ಸುಟ್ಟಿರುವ ಗಾಯದ ಗುರುತುಗಳಿರುವುದನ್ನು ನೋಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ನಂತರ ತಾಯಿ ಮಗನನ್ನು ಕರೆದುಕೊಂಡು ಹೋಗಿ ರಾಝೊಲೆ ಪ್ರದೇಶದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಬಾಲಕನ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಗಂಡ ಕೇವಲ 3 ತಿಂಗಳ ಹಿಂದಷ್ಟೇ ತೀರಿಕೊಂಡಿದ್ದಾರೆ ಈಗ ನಾನು ಮಗನನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಘಟನೆಯನ್ನು ಮರೆಮಾಚಿದ ಆರೋಪ

ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಶಿಕ್ಷಣಾಧಿಕಾರಿ ವಾಸುದೇವ ರಾವ್ ಅವರು ಪ್ರತಿಕ್ರಿಯಿಸಿದ್ದು, ಶಾಲಾ ಆಡಳಿತ ಮಂಡಳಿಯು ಸುಮಾರು ಒಂದು ವಾರದವರೆಗೆ ಘಟನೆಯನ್ನು ಗೌಪ್ಯವಾಗಿಟ್ಟಿತ್ತು ಎಂದು ಹೇಳಿದ್ದಾರೆ. ಶಾಲಾ ಆಡಳಿತ ಮಂಡಳಿಯ ವಿರುದ್ಧ ತನಿಖೆ ಆರಂಭಿಸಲಾಗಿದ್ದು, ತಮ್ಮ ಕಚೇರಿ ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ವಿವರವಾದ ವರದಿಯನ್ನು ಸಲ್ಲಿಸಲಿದೆ ಎಂದು ರಾವ್ ಹೇಳಿದ್ದಾರೆ. ಆಡಳಿತ ಮಂಡಳಿಯು ಸುಮಾರು ಒಂದು ವಾರದವರೆಗೆ ಘಟನೆಯನ್ನು ಗೌಪ್ಯವಾಗಿಟ್ಟಿತ್ತು, ಇದು ಅತ್ಯಂತ ಆಕ್ಷೇಪಾರ್ಹ. ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ನಾವು ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ವಿವರವಾದ ವರದಿಯನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ಸಾಗರಿಕಾ ಜಹೀರ್‌ ಖಾನ್ ದಂಪತಿಯ ಗಣೇಶ ಹಬ್ಬಕ್ಕೆ ಕಳೆ ತಂದ ಮಗ ಫತೇಸಿನ್ಹ್

ಇದನ್ನೂ ಓದಿ: ದೇವರಿಗೆ ಮೋಸ ಮಾಡಕ್ಕಾಗಲ್ಲ: ಗರ್ಲ್‌ಫ್ರೆಂಡ್ ಜೊತೆ ಪತಿಯ ತಿರುಪತಿ ಭೇಟಿಗೆ ಪ್ರತಿಕ್ರಿಯಿಸಿದ ಜಯಂ ರವಿ ಪತ್ನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ : ಹೈಕೋರ್ಟ್‌
ಭಾರತ ಎಂದಿಗೂ ಶಾಂತಿ ಪರ : ಪುಟಿನ್‌ಗೆ ಮೋದಿ