
ನವದೆಹಲಿ (ಆ.27):ಉದಯಪುರದ 55 ವರ್ಷದ ಮಹಿಳೆಯೊಬ್ಬರು ಮಂಗಳವಾರ ತಮ್ಮ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ. ರೇಖಾ ಗಲ್ಬೆಲಿಯಾ ಎಂಬ ಮಹಿಳೆ ಈ ಹಿಂದೆ 16 ಮಕ್ಕಳಿಗೆ ಜನ್ಮ ನೀಡಿದ್ದರು. ಇದರಲ್ಲಿ, ಅವರ ನಾಲ್ವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಹುಟ್ಟಿದ ಕೂಡಲೇ ಸಾವನ್ನಪ್ಪಿದರು. ಅವರ ಬದುಕುಳಿದ ಮಕ್ಕಳ ಪೈಕಿ ಐದು ಮಂದಿಗೆ ಈಗಾಗಲೇ ಮದುವೆಯಾಗಿದ್ದು, ಅವರು ತಮ್ಮ ಮಕ್ಕಳನ್ನು ಹೊಂದಿದ್ದಾರೆ.
ಅವರ ಮಗಳು ಶಿಲಾ ಕಲ್ಬೆಲಿಯಾ ಕುಟುಂಬದ ಹೋರಾಟಗಳನ್ನು ತಿಳಿಸಿದ್ದಾರೆ "ನಾವೆಲ್ಲರೂ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ನಮ್ಮ ತಾಯಿಗೆ ಇಷ್ಟೊಂದು ಮಕ್ಕಳಿದ್ದಾರೆ ಎಂದು ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ" ಎಂದು ಅವರು ಹೇಳಿದರು.
ರೇಖಾ ಅವರ ಪತಿ ಕಾವ್ರಾ ಕಲ್ಬೆಲಿಯಾ, ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ಎತ್ತಿ ತೋರಿಸಿದರು. ನಮಗೆ ಸ್ವಂತ ಮನೆ ಇಲ್ಲ. ಪ್ರತಿದಿನದ ಜೀವನ ಸಾಗಿಸಲು ಬಹಳಷ್ಟು ಕಷ್ಟಪಡುತ್ತಿದ್ದೇವೆ ಎಂದು ಹೇಳಿದ್ದಾರೆ. "ನಮ್ಮ ಮಕ್ಕಳನ್ನು ಪೋಷಿಸಲು, ನಾನು ಬಡ್ಡಿದಾರರಿಂದ ಶೇಕಡಾ 20 ರಷ್ಟು ಬಡ್ಡಿಗೆ ಹಣವನ್ನು ಸಾಲ ಪಡೆದುಕೊಳ್ಳಬೇಕಾಯಿತು. ನಾನು ಲಕ್ಷಾಂತರ ರೂಪಾಯಿಗಳನ್ನು ಮರುಪಾವತಿಸಿದ್ದೇನೆ, ಆದರೆ ಸಾಲದ ಬಡ್ಡಿಯನ್ನು ಇನ್ನೂ ಸಂಪೂರ್ಣವಾಗಿ ಪಾವತಿಸಲಾಗಿಲ್ಲ" ಎಂದು ಅವರು ಹೇಳಿದರು.
ಕಬ್ಬಿಣ, ಪ್ಲಾಸ್ಟಿಕ್ ಸಂಗ್ರಹಿಸುವ ಮೂಲಕ ಬದುಕು ಸಾಗಿಸುತ್ತಿರುವ ಈ ಕುಟುಂಬವು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಸಹ ಸಾಧ್ಯವಾಗುತ್ತಿಲ್ಲ. "ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಮಂಜೂರಾಗಿದ್ದರೂ, ಭೂಮಿ ನಮ್ಮ ಹೆಸರಿನಲ್ಲಿಲ್ಲದ ಕಾರಣ ನಾವು ನಿರಾಶ್ರಿತರಾಗಿಯೇ ಉಳಿದಿದ್ದೇವೆ. ಆಹಾರ, ಮದುವೆ ಅಥವಾ ಶಿಕ್ಷಣಕ್ಕೆ ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿಲ್ಲ. ಈ ಸಮಸ್ಯೆಗಳು ನಮ್ಮನ್ನು ಪ್ರತಿದಿನ ಕಾಡುತ್ತಿವೆ" ಎಂದು ಕಾವ್ರಾ ಹೇಳಿದ್ದಾರೆ.
"ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ, ಇದು ಅವರ ನಾಲ್ಕನೇ ಮಗು ಎಂದು ಕುಟುಂಬ ಸದಸ್ಯರು ನಮಗೆ ತಿಳಿಸಿದರು. ನಂತರ, ಇದು ಅವರ 17 ನೇ ಮಗು ಎಂದು ತಿಳಿದುಬಂದಿದೆ" ಎಂದು ಜಾಡೋಲ್ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞ ರೋಷನ್ ದರಂಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ