
ದೀಪಾವಳಿ ಬಂತೆಂದರೆ ಸಾಕು ದೇಶಕ್ಕೆ ದೇಶವೇ ಬೆಳಕಿನ ಹಬ್ಬಕ್ಕೆ ಸಜ್ಜಾಗುತ್ತೆ. ಮಾರ್ಕೆಟಿನಿಂದ ಹಣತೆ, ವಿದ್ಯುತ್ ದೀಪಾಲಂಕಾರಗಳನ್ನ ತಂದು ಮನೆ, ಕಟ್ಟಡ, ಅಂಗಡಿಗಳನ್ನ ದೀಪಗಳಿಂದ ಸಿಂಗಾರಗೊಳಿಸಲಾಗುತ್ತೆ. ಆದರೆ ದೀಪಾವಳಿಯ ಇತಿಹಾಸವನ್ನ ಒಮ್ಮೆ ತಿರುವಿಹಾಕಿದಾಗ ಬೆಳಕಿನ ಹಬ್ಬದಂದೇ ಅಂದರೆ 1857ರ ಅಕ್ಟೋಬರ್ 15ರಂದು ನಡೆದ ಭೀಕರ, ಕರಾಳ ಘಟನೆಯೊಂದು ಕಣ್ಮುಂದೆ ಬರುತ್ತದೆ. ಈ ಘಟನೆಯನ್ನು ಯಾರೂ ಸುಲಭವಾಗಿ ಮರೆಯಲಾರರು.
1857ರ ಕಾಲ. ಮುಂಬೈನಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಆದರೆ ಹಬ್ಬದ ಮೊದಲ ದಿನವೇ ಆಘಾತಕಾರಿ ಘಟನೆ ನಡೆದುಹೋಯ್ತು. ಇಡೀ ದೇಶ ಹಬ್ಬದ ಸಂಭ್ರಮದಲ್ಲಿದ್ದರೆ ಅತ್ತ ದೀಪಾವಳಿಯ ಮೊದಲ ದಿನವೇ ಬ್ರಿಟಿಷರು ಇಬ್ಬರು ಭಾರತೀಯ ಸೈನಿಕರನ್ನು ಫಿರಂಗಿಗಳ ನಳಿಕೆಗಳಿಗೆ ಕಟ್ಟಿ ಉಡಾಯಿಸಿ ಭೀಕರವಾಗಿ ಕೊಂದುಬಿಟ್ಟಿದ್ದ ರಾಕ್ಷಸರು! ಮುಂಬೈನ ಎಸ್ಪ್ಲನೇಡ್ ಎಂಬ ವಿಶಾಲ ಮೈದಾನದಲ್ಲಿ ಈ ಘಟನೆ ನಡೆದಿತ್ತು. ಅಂದು ಪಿರಂಗಿ ಬಾಯಿಗೆ ಕಟ್ಟಿ ಭಾರತೀಯ ಸೈನಿಕರನ್ನು ಕೊಂದ ಸ್ಥಳವೇ ಇಂದಿನ ಆಜಾದ್ ಮೈದಾನ.
ಬ್ರಿಟಿಷರ ವಿರುದ್ಧ ದೇಶಾದ್ಯಂತ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಕೊಂಡಿದ್ದ ಸಮಯ ಅದು. ಬ್ರಿಟಿಷರ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಕೊಂಡಿದ್ದ ಸಮಯವದು. ಮೀರತ್ನಲ್ಲಿ ಶುರುವಾದ ಬ್ರಿಟಿಷರ ವಿರುದ್ಧ ಸೈನಿಕರ ಹೋರಾಟ ಮುಂದೆ ಅದು ಉತ್ತರ ಮತ್ತು ಮಧ್ಯ ಭಾರತಕ್ಕೂ ವಿಸ್ತರಿಸಿತ್ತು. ಈ ಹೋರಾಟ ಎಷ್ಟು ಕ್ಷಿಪ್ರವಾಗಿ ಹಬ್ಬಿತ್ತು ಎಂದರೆ ಅದು ಮುಂಬೈಗೂ ಈ ಹೋರಾಟ ತಲುಪಬಹುದು ಎಂಬ ಭಯ ಬ್ರಿಟಿಷರನ್ನು ಕಾಡುತ್ತಿತ್ತು. ಇಂಥ ಪರಿಸ್ಥಿತಿಯಲ್ಲೇ ಬ್ರಿಟಿಷರ ಸರ್ಕಾರ ಉರುಳಿಸಲು ಸಂಚು ರೂಪಿಸಿದ್ದಾರೆಂಬ ಆರೋಪದ ಮೇಲೆ ಮರೀನ್ ಬೆಟಾಲಿಯನ್ನ ಡ್ರಿಲ್ ಹವಾಲ್ದಾರ್ ಸಯ್ಯದ್ ಹುಸೇನ್ ಮತ್ತು 10ನೇ ರೆಜಿಮೆಂಟ್ನ ಭಾರತೀಯ ಕಾಲಾಳುಪಡೆಯ ಸೈನಿಕ ಮಂಗಲ್ ಗುಡ್ಡರಿಯಾ ಅವರನ್ನು ಬಂಧಿಸಲಾಯಿತು. ಬ್ರಿಟಿಷ್ ಆಡಳಿತದ ವಿರುದ್ಧ ಸಂಚು ರೂಪಿಸಿದ ಆರೋಪದಲ್ಲಿ ಮಿಲಿಟರಿ ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಿತು.
ಮುಂಬೈನಲ್ಲಿ ನಡೆಯುತ್ತಿದ್ದ ಈ ಸಂಚಿನ ಸುಳಿವು ಪೊಲೀಸರಿಗೆ ಸಿಕ್ಕಿದ್ದು ಚಾರ್ಲ್ಸ್ ಫೋರ್ಜೆಟ್ ಎಂಬುವವನಿಂದ. ಆಗ ಅವನು ಬಾಂಬೆ ಪೊಲೀಸ್ ಇಲಾಖೆಯ ಅಧೀಕ್ಷಕನಾಗಿದ್ದ. ಬಂಡಾಯಗಾರರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅವನು ಸಾಮಾನ್ಯ ವ್ಯಕ್ತಿಯಂತೆ ವೇಷ ಬದಲಿಸಿಕೊಂಡು ನಗರದ ವಿವಿಧೆಡೆ ಸುತ್ತಾಡುತ್ತಿದ್ದ. ಹೀಗೆ ಸುತ್ತಾಡುವಾಗಲೇ ಈ ಇಬ್ಬರ ಸೈನಿಕರ ಬಗ್ಗೆ ಅನುಮಾನ ಬಂದು ಮಾಹಿತಿ ಕಲೆಹಾಕಿದ್ದ. 1857ರ ಬಂಡಾಯದ ಸಮಯದಲ್ಲಿ ಮುಂಬೈನಲ್ಲಿ ಭಯ ಮತ್ತು ಅನುಮಾನದ ವಾತಾವರಣ ಹೇಗಿತ್ತು ಎಂಬುದು ಫೋರ್ಜೆಟ್ 1877ರಲ್ಲಿ ಪ್ರಕಟಿಸಿದ 'ಅವರ್ ರಿಯಲ್ ಡೇಂಜರ್ ಇನ್ ಇಂಡಿಯಾ' ಪುಸ್ತಕದಲ್ಲಿ ವಿವರಿಸಿದ್ದಾರೆ.
ಮೊದಲಬಾರಿಗೆ ಮೇ 10ರಂದು ಮೀರತ್ನಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಭಾರತೀಯ ಸೈನಿಕರು ಬಂಡಾಯ ಎದ್ದಿದ್ದರು. ಬಳಿಕ ಅವರು ದೆಹಲಿಗೆ ತೆರಳಿ ಮೊಘಲ್ ದೊರೆ ಬಹದ್ದೂರ್ ಷಾ ಜಫರ್ ಅವರನ್ನು ತಮ್ಮ ನಾಯಕ ಎಂದು ಘೋಷಿಸಿದ್ದರು. ಆ ಬಳಿಕ ಈ ಹೋರಾಟ ಕಾನ್ಪುರ, ಲಖನೌ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಿಗೆ ಹಬ್ಬಿತು. ಇದರಿಂದ ಮುಂಬೈನಲ್ಲಿದ್ದ ಬ್ರಿಟಿಷರಿಗೆ ಆತಂಕ ಶುರುವಾಯ್ತು. ಇಲ್ಲಿನ ಸೇನಾ ಪಡೆಗಳೂ ಬಂಡಾಯದಲ್ಲಿ ಕೈಜೋಡಿಸಬಹುದು ಎಂಬ ಭಯ ಅವರಲ್ಲಿತ್ತು. ಅಲ್ಲಿಂದ ಭಾರತೀಯ ಸೈನಿಕರ ಮೇಲೆ ಅನುಮಾನ ಶುರುವಾಗತೊಡಗಿತು. ಬ್ರಿಟಿಷರ ಅನುಮಾನ ಕೇವಲ ಸೈನಿಕರು, ಅವರ ವಸತಿ ಪ್ರದೇಶಗಳು ಮಾತ್ರವಾಗಿರಲಿಲ್ಲ; ಅಂದಿನ ಖ್ಯಾತ ಉದ್ಯಮಿ, ಸಮಾಜ ಸೇವಕರಾಗಿದ್ದ ಜಗನ್ನಾಥ್ ಶಂಕರಶೆಟ್ ಅವರ ಮೇಲೂ ಕೆಲ ಯುರೋಪಿಯನ್ನರು ಅನುಮಾನ ವ್ಯಕ್ತಪಡಿಸಿದ್ದರು. ಅವರು ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಎಸ್.ಎಂ. ಎಡ್ವರ್ಡ್ಸ್ ಎಂಬುವವರು 1923ರಲ್ಲಿ ಪ್ರಕಟಿಸಿದ 'ದಿ ಬಾಂಬೆ ಸಿಟಿ ಪೊಲೀಸ್: ಎ ಹಿಸ್ಟಾರಿಕಲ್ ಸ್ಕೆಚ್, 1672-1916' ಪುಸ್ತಕದಲ್ಲಿ ಬರೆದಿರುವಂತೆ, ಆಗಿನ ಗವರ್ನರ್ ಲಾರ್ಡ್ ಎಲ್ಫಿನ್ಸ್ಟೋನ್ ಈ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಫೋರ್ಜೆಟ್ ಎಂಬುವವನಿಗೆ ಸೂಚಿಸಿದ್ದರು. ತನಿಖೆ ನಡೆಸಿದ ಫೋರ್ಜೆಟ್ ಶಂಕರಶೆಟ್ ವಿರುದ್ಧದ ಆರೋಪಗಳು ಸುಳ್ಳು ಎಂದು ಅವರ ಪರವಾಗಿ ನಿಂತಿದ್ದನು.
ಮೀರತ್, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬ್ರಿಟಿಷರ ವಿರುದ್ಧದ ಬಂಡಾಯದ ಯಾವುದೇ ಸುಳಿವು ಮುಂಬೈಗೆ ಸಿಗದಂತೆ ನಗರದ ಮೇಲೆ ಫೋರ್ಜೆಟ್ ಹದ್ದಿನ ಕಣ್ಣಿಟ್ಟಿದ್ದರು. ಎಷ್ಟೆಂದರೆ ಒಂದು ವೇಳೆ ಅಂಥ ಬಂಡಾಯದಲ್ಲಿ ತೊಡಗಿದ್ದ ವ್ಯಕ್ತಿಗಳು ಕಂಡುಬಂದರೆ ಮರಣದಂಡನೆಗೆ ಪೊಲೀಸ್ ಕಚೇರಿಯ ಆವರಣದಲ್ಲೇ ಗಲ್ಲುಶಿಕ್ಷೆ ನೀಡಲು ಬಳಸುವ ಗಲ್ಲುಗಂಬವನ್ನೇ ನೆಟ್ಟುಬಿಟ್ಟಿದ್ದ. ಒಂದು ವೇಳೆ ಮುಂಬೈ ನಗರಕ್ಕೆ ಬಂಡಾಯ ತಲುಪಿದರೆ ಅದರ ನೇತೃತ್ವ ವಹಿಸಬಹುದು ಎಂಬ ಅನುಮಾನ ಅವನಿಗಿತ್ತು. ಹೀಗಾಗಿ ಇಂಥ ಬಂಡಾಯದಲ್ಲಿ ತೊಡಗಿದ ವ್ಯಕ್ತಿಗಳು ಕಂಡುಬಂದರೆ, ಸರ್ಕಾರದ ವಿರುದ್ಧ ಸಂಚು ರೂಪಿಸಿದರೆ ಗಲ್ಲಿಗೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದ. ಅಷ್ಟೇ ಅಲ್ಲ, ವೇಷ ಬದಲಿಸಿಕೊಂಡು ನಗರದ ಜನರ ತಿರುಗಾಡುತ್ತಿದ್ದ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾತಾಡುವುದನ್ನು ಸೂಕ್ಷ್ಮವಾಗಿ ಕೇಳಿಸಿಕೊಂಡು ಮಾಹಿತಿ ಸಂಗ್ರಹಿಸುತ್ತಿದ್ದ. ಯಾರಾದರೂ ಬ್ರಿಟಿಷರ ವಿರುದ್ಧ ಪ್ರಚೋದನಕಾರಿ ಮಾತುಗಳನ್ನಾಡಿದರೆ ಆಗ ಅವನು ನಿಜ ರೂಪ ತೋರಿಸಿ ಅಂಥವರನ್ನು ಬಂಧಿಸುತ್ತಿದ್ದ ಬಗ್ಗೆ ಫೋರ್ಜೆಟ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಹೀಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ ಧೋಬಿ ತಲಾವ್ ಪ್ರದೇಶದ ಸೋನಾಪುರದಲ್ಲಿರುವ ಗುಂಗಾ ಪ್ರಸಾದ್ ಎಂಬುವವರ ಮನೆಯಲ್ಲಿ ಸೈನಿಕರು ರಹಸ್ಯ ಸಭೆ ನಡೆಸುತ್ತಿರುವ ವಿಷಯ ಫೋರ್ಜೆಟ್ ಅವರಿಗೆ ತಿಳಿಯಿತು.
ಮುಂದುವರಿಯುತ್ತದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ