
TVK Vijay TN CM 2026 Number plate Viral: ಸಿನಿಮಾ ಪರದೆಯ ಮೇಲೆ ಶಿಳ್ಳೆ-ಚಪ್ಪಾಳೆ ಗಿಟ್ಟಿಸುತ್ತಿದ್ದ 'ದಳಪತಿ' ವಿಜಯ್, ಈಗ ತಮಿಳುನಾಡಿನ ರಾಜಕೀಯ ರಂಗಭೂಮಿಯ ಮಹಾನಾಯಕನಾಗಿ ಉದಯಿಸಿದ್ದಾರೆ. ದಶಕಗಳ ಕಾಲ ದ್ರಾವಿಡ ಕೋಟೆಯನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದ್ದ ಡಿಎಂಕೆಯನ್ನು ಮಣಿಸಿ, ವಿಜಯ್ ನಾಯಕತ್ವದ 'ತಮಿಳಗ ವೆಟ್ರಿ ಕಳಗಂ' (TVK) ಹೊಸ ಇತಿಹಾಸ ಬರೆದಿದೆ.
ಈ ಮಹಾ ಗೆಲುವಿನ ಸುಳಿವು 2024ರಲ್ಲೇ ಸಿಕ್ಕಿತ್ತೇ? ಹೌದು ಎನ್ನುತ್ತಿವೆ ಈಗ ವೈರಲ್ ಆಗುತ್ತಿರುವ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT) ಸಿನಿಮಾದ ದೃಶ್ಯಗಳು. ಆ ಚಿತ್ರದಲ್ಲಿ ವಿಜಯ್ ಓಡಿಸುತ್ತಿದ್ದ ಕಾರಿನ ನಂಬರ್ ಪ್ಲೇಟ್ 'TN 07 CM 2026' ಎಂದಿತ್ತು. ಅಂದು ಅದು ಕೇವಲ ಸಿನಿಮಾ ಪ್ರಚಾರ ಅಂದುಕೊಂಡವರಿಗೆ, ಇಂದು ಅದು ರಾಜಕೀಯ ಭವಿಷ್ಯವಾಣಿಯಾಗಿ ಸಾಬೀತಾಗಿದೆ.
ಅಂದು ವಿಜಯ್ ಅವರ ಸಹನಟ ಪ್ರೇಮ್‌ಗಿ ಅಮರೆನ್ ಆಡಿದ ಮಾತುಗಳು ಈಗ ಅಕ್ಷರಶಃ ಸತ್ಯವಾಗಿವೆ. '2026ರಲ್ಲಿ ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತ, ಕಾದು ನೋಡಿ' ಎಂದಿದ್ದ ಪ್ರೇಮ್‌ಗಿ ಭರವಸೆ ಈಗ ತಮಿಳುನಾಡಿನ ಜನಾದೇಶದ ರೂಪದಲ್ಲಿ ಹೊರಬಂದಿದೆ. ಇದರೊಂದಿಗೆ ತಮಿಳುನಾಡಿನ ಅಧಿಕಾರ ಗದ್ದುಗೆ ಏರುತ್ತಿರುವ ಪ್ರಭಾವಿ ನಟ-ರಾಜಕಾರಣಿಯಾಗಿ ವಿಜಯ್ ಹೊರಹೊಮ್ಮಿದ್ದಾರೆ.
ಚುನಾವಣಾ ಕಣದ ಅಂಕಿ-ಅಂಶಗಳನ್ನು ನೋಡುವುದಾದರೆ, 234 ವಿಧಾನಸಭಾ ಕ್ಷೇತ್ರಗಳ ಪೈಕಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ TVK ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆಯಿದ್ದರೂ, ಮೈತ್ರಿ ಮಾತುಕತೆಗಳು ಜೋರಾಗಿವೆ. ಕಾಂಗ್ರೆಸ್, ಸಿಪಿಐ, ಸಿಪಿಐಎಂ ಮತ್ತು ವಿಸಿಕೆ ಪಕ್ಷಗಳು ದಳಪತಿಯ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ದಟ್ಟವಾಗಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.
ಸ್ವತಃ ವಿಜಯ್ ಅವರು ತಿರುಚ್ಚಿ (ಪೂರ್ವ) ಮತ್ತು ಪೆರಂಬೂರು ಎಂಬ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಅವರು ತಿರುಚ್ಚಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಪೆರಂಬೂರು ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ, ಥಿಯೇಟರ್‌ನಲ್ಲಿ ಮೇಲೆ ಅಬ್ಬರಿಸುತ್ತಿದ್ದ ನಾಯಕ, ಈಗ ತಮಿಳುನಾಡಿನ ಜನರ 'ರಿಯಲ್ ಲೈಫ್' ನಾಯಕನಾಗಿ ಪಟ್ಟಾಭಿಷೇಕಗೊಳ್ಳಲು ಸಜ್ಜಾಗಿದ್ದಾರೆ. ತಮಿಳುನಾಡಿನ ರಾಜಕೀಯ ಚಿತ್ರಣವೇ ಈಗ ಸಂಪೂರ್ಣ ಬದಲಾಗಿದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ