5 ಕೋಟಿ ಹಣ ಕೊಡದ ಕಾರಣಕ್ಕೆ ಟಿಎಂಸಿ ನನಗೆ ಟಿಕೆಟ್‌ ನಿರಾಕರಿಸಿತ್ತು ಎಂದ ಟೀಮ್‌ ಇಂಡಿಯಾ ಮಾಜಿ ಪ್ಲೇಯರ್‌

Published : May 05, 2026, 06:26 PM IST
Manoj Tiwary

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ನಂತರ, ಮಾಜಿ ಸಚಿವ ಮನೋಜ್ ತಿವಾರಿ ಟಿಎಂಸಿ ತೊರೆದಿದ್ದಾರೆ. ಶಿಬ್‌ಪುರ ಕ್ಷೇತ್ರದಿಂದ ಟಿಕೆಟ್‌ಗಾಗಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದೇ ಪಕ್ಷ ತೊರೆಯಲು ಕಾರಣ ಎಂದು ಅವರು ಆರೋಪಿಸಿದ್ದಾರೆ.

ಕೋಲ್ಕತ್ತಾ (ಮೇ.5): ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತ ಅಂತ್ಯಗೊಂಡು, ಬಿಜೆಪಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಮಾಜಿ ಸಚಿವ ಮನೋಜ್ ತಿವಾರಿ ಪಕ್ಷ ತೊರೆದಿದ್ದಾರೆ. ಹೌರಾದ ಶಿಬ್‌ಪುರ ಕ್ಷೇತ್ರದಿಂದ ತಮಗೆ ಟಿಕೆಟ್ ನಿರಾಕರಿಸಲು 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದೇ ಕಾರಣ ಎಂದು ಅವರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ (PTI) ಜೊತೆ ಮಾತನಾಡಿದ 40 ವರ್ಷದ ತಿವಾರಿ, ಟಿಎಂಸಿ ಸೋಲಿನ ಬಗ್ಗೆ ತಮಗೆ ಅಚ್ಚರಿಯಾಗಿಲ್ಲ ಎಂದಿದ್ದಾರೆ. "ಇಡೀ ಪಕ್ಷವೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಮತ್ತು ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದಿದ್ದಾಗ ಇಂತಹ ಪತನ ಅನಿವಾರ್ಯ. ಭಾರಿ ಹಣ ನೀಡಿದವರಿಗೆ ಮಾತ್ರ ಟಿಕೆಟ್ ಮಾರಾಟ ಮಾಡಲಾಗಿದೆ. ಈ ಬಾರಿ ಕನಿಷ್ಠ 70 ರಿಂದ 72 ಅಭ್ಯರ್ಥಿಗಳು ತಲಾ 5 ಕೋಟಿ ರೂಪಾಯಿ ನೀಡಿ ಟಿಕೆಟ್ ಖರೀದಿಸಿದ್ದಾರೆ. ನನಗೂ ಹಣ ಕೇಳಲಾಗಿತ್ತು, ಆದರೆ ನಾನು ನಿರಾಕರಿಸಿದೆ," ಎಂದು ಅವರು ಕಿಡಿಕಾರಿದ್ದಾರೆ.

ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದಾಗ ತಮಗೆ ರಾಜಕೀಯಕ್ಕೆ ಬರುವ ಆಸೆ ಇರಲಿಲ್ಲ ಎಂದು ತಿವಾರಿ ಹೇಳಿದ್ದಾರೆ. "2019ರಲ್ಲೇ ದೀದಿ (ಮಮತಾ ಬ್ಯಾನರ್ಜಿ) ನನಗೆ ಲೋಕಸಭಾ ಟಿಕೆಟ್ ಆಫರ್ ಮಾಡಿದ್ದರು, ಆಗ ನಾನು ನಯವಾಗಿ ತಿರಸ್ಕರಿಸಿದ್ದೆ. ಆದರೆ 2021ರ ಚುನಾವಣೆಯ ವೇಳೆ ಅರೂಪ್ ಬಿಸ್ವಾಸ್ ಮೂಲಕ ಸಂದೇಶ ಕಳುಹಿಸಿ ಶಿಬ್‌ಪುರದಿಂದ ಸ್ಪರ್ಧಿಸಲು ಸೂಚಿಸಿದರು. ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದು ಎಂಬ ಆಶಯದೊಂದಿಗೆ ನಾನು ಅಂದು ಒಪ್ಪಿದ್ದೆ," ಎಂದು ಅವರು ನೆನಪಿಸಿಕೊಂಡಿದ್ದಾರೆ.

ಮೆಸ್ಸಿ ಇವೆಂಟ್‌ ಅವಾಂತರ

ಇತ್ತೀಚೆಗೆ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮವು ಭಾರಿ ಅವ್ಯವಸ್ಥೆಯಿಂದಾಗಿ ಸುದ್ದಿಯಾಗಿತ್ತು. ಈ ಬಗ್ಗೆ ಮಾತನಾಡಿದ ತಿವಾರಿ, ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರಿಗೆ ಕ್ರೀಡೆಯ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ಟೀಕಿಸಿದ್ದಾರೆ.

"ಅರೂಪ್ ದಾ ಅವರಿಗೆ ಕ್ರೀಡೆಯ 'A, B, C, D' ಕೂಡ ಗೊತ್ತಿಲ್ಲ. ಕಾರ್ಯಕ್ರಮಗಳಲ್ಲಿ ನನ್ನ ಫೋಟೋಗಳು ಕ್ರೀಡಾ ಪುಟಗಳಲ್ಲಿ ಮಿಂಚಿದರೆ, ಮುಂದಿನ ಬಾರಿ ನನಗೆ ಆಮಂತ್ರಣವೇ ನೀಡುತ್ತಿರಲಿಲ್ಲ. ಡ್ಯೂರಾಂಡ್ ಕಪ್ ಉದ್ಘಾಟನೆಯಲ್ಲೂ ನನ್ನನ್ನು ವೇದಿಕೆಗೆ ಕರೆಯುತ್ತಿರಲಿಲ್ಲ," ಎಂದು ಅಳಲು ತೋಡಿಕೊಂಡಿದ್ದಾರೆ. ಮೆಸ್ಸಿ ಕಾರ್ಯಕ್ರಮದಲ್ಲಿ ಜನರನ್ನು ದಾರಿ ತಪ್ಪಿಸಲಾಗುತ್ತದೆ ಎಂದು ಮೊದಲೇ ತಿಳಿದಿದ್ದರಿಂದ ನಾನು ಅಲ್ಲಿಗೆ ಹೋಗಿರಲಿಲ್ಲ. ರಾಜ್ಯಕ್ಕೆ ಒಂದು ಸರಿಯಾದ ಕ್ರೀಡಾ ನೀತಿ ತನ್ನಿ ಎಂದು ನಾನು ಎಷ್ಟು ಕೇಳಿಕೊಂಡರೂ ಅರೂಪ್ ಬಿಸ್ವಾಸ್ ಕೇಳಲಿಲ್ಲ ಎಂದು ತಿವಾರಿ ಆರೋಪಿಸಿದ್ದಾರೆ.

ಮನೋಜ್ ತಿವಾರಿ ಯಾರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೋ, ಆ ಸಚಿವ ಅರೂಪ್ ಬಿಸ್ವಾಸ್ ಅವರು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಾಪಿಯಾ ಅಧಿಕಾರಿ ವಿರುದ್ಧ 6,000 ಮತಗಳ ಅಂತರದಿಂದ ಸೋಲನ್ನಪ್ಪಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ, ಸೋಲಲ್ಲ ಇದು ಪಿತೂರಿ': ಬಂಗಾಳ ಚುನಾವಣಾ ಸೋಲಿನ ನಂತರ ಮಮತಾ ಬ್ಯಾನರ್ಜಿ ಆಕ್ರೋಶ
Kalita Majhi: ₹2,500 ಸಂಬಳಕ್ಕೆ ಮುಸುರೆ ತಿಕ್ಕುವ ಕೆಲಸ ಮಾಡುತ್ತಿದ್ದ ಮಹಿಳೆ ಈಗ ಶಾಸಕಿ! ಬಿಜೆಪಿ ಗೆಲುವಿನ ರಹಸ್ಯ ಇರೋದೇ ಇಲ್ಲಿ!