Trump tax war: ತೆರಿಗೆ ಏರಿಕೆ ಮೊದಲೇ ವಸ್ತುಗಳ ಖರೀದಿಗೆ ಮುಗಿಬಿದ್ದ ಅಮೆರಿಕನ್ನರು!

Published : Apr 06, 2025, 06:11 AM ISTUpdated : Apr 06, 2025, 06:12 AM IST
Trump tax war:  ತೆರಿಗೆ ಏರಿಕೆ ಮೊದಲೇ ವಸ್ತುಗಳ ಖರೀದಿಗೆ ಮುಗಿಬಿದ್ದ ಅಮೆರಿಕನ್ನರು!

ಸಾರಾಂಶ

ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಯುದ್ಧದ ಘೋಷಣೆಯ ನಂತರ ಅಮೆರಿಕನ್ನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ವಿದೇಶಿ ಆಮದುಗಳ ಮೇಲಿನ ತೆರಿಗೆ ಹೆಚ್ಚಳದ ನಿರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ಸ್, ಬಟ್ಟೆ, ವಾಹನಗಳು ಮತ್ತು ಆಹಾರ ಪದಾರ್ಥಗಳನ್ನು ಖರೀದಿಸಲು ಜನರು ಮುಂದಾಗಿದ್ದಾರೆ.

ವಾಷಿಂಗ್ಟನ್‌ (ಏ.6): ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಂದ ತೆರಿಗೆ ಯುದ್ಧ ಘೋಷಣೆ ಬೆನ್ನಲ್ಲೇ ಅಮೆರಿಕನ್ನರು ವಾಹನ, ಎಲೆಕ್ಟ್ರಾನಿಕ್‌ ಉತ್ಪನ್ನಗಳು, ಗ್ಯಾಜೆಟ್‌ಗಳು, ಬಟ್ಟೆ, ಶೂ, ಕಾಫಿ, ಚಹಾ, ಫರ್ನೀಚರ್‌ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಈ ವಸ್ತುಗಳು ಬಹುತೇಕ ವಿದೇಶಗಳಿಂದಲೇ ಆಮದಾಗುವ ಹಿನ್ನೆಲೆಯಲ್ಲಿ ಈ ವಸ್ತುಗಳ ಬೆಲೆ ಏರಿಕೆ ಆತಂಕ ಮನೆ ಮಾಡಿದೆ. ಹೀಗಾಗಿ ಟ್ರಂಪ್‌ ತೆರಿಗೆ ನೀತಿ ಜಾರಿಗೆ ಬರುವ ಮೊದಲೇ ಜನರು ಹೆಚ್ಚಿನ ಪ್ರಮಾಣದಲ್ಲಿ ಈ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ. ಟ್ರಂಪ್‌ ಘೋಷಿಸಿರುವ ಹೊಸ ತೆರಿಗೆ ಏ.9ರಿಂದ ಜಾರಿಗೆ ಬರಲಿದೆ.

ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ ಫೋನ್‌:

ತೈವಾನ್‌ ಮೇಲೆ ಶೇ.32 ಮತ್ತು ಚೀನಾ ಮೇಲೆ ಶೇ.52ರಷ್ಟು ಪ್ರತಿ ತೆರಿಗೆ ಘೋಷಣೆ ಬೆನ್ನಲ್ಲೇ ಅಮೆರಿಕನ್ನರು ಟ್ಯಾಬ್‌ಗಳು, ಸ್ಮಾರ್ಟ್‌ಫೋನ್‌ಗಳ ಖರೀದಿಗಿಳಿದಿದ್ದಾರೆ. ಬಹುತೇಕ ಈ ಉತ್ಪನ್ನಗಳು, ಬಿಡಿಭಾಗಗಳು ಚೀನಾ ಅಥವಾ ತೈವಾನ್‌ನಿಂದ ಬರುವ ಹಿನ್ನೆಲೆಯಲ್ಲಿ ಇವುಗಳ ದರ ಏರಿಕೆ ನಿಶ್ಚಿತ ಎಂಬಂತಾಗಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಶೇ.34ರಷ್ಟು ಪ್ರತಿತೆರಿಗೆ ಹೇರಿದ ಚೀನಾ, ನಮ್ಮ ಮೇಲೆ ಒತ್ತಡ ಹಾಕುವ ಪ್ರಯತ್ನ ಎಂದ ಬೀಜಿಂಗ್‌!

ಬಟ್ಟೆ ಮತ್ತು ಶೂಗಳು:

ಅಮೆರಿಕದ ಪ್ರಮಖ ಬಟ್ಟೆ ಬ್ರ್ಯಾಂಡ್‌ಗಳಾದ ಗ್ಯಾಪ್‌ ಮತ್ತು ಎಚ್‌ ಆ್ಯಂಡ್‌ ಎಂನ ಬಟ್ಟೆಗಳಿಗೆ ಬಹುತೇಕ ವಿಯೆಟ್ನಾಂ, ಭಾರತ, ಬಾಂಗ್ಲಾ ಮತ್ತು ಚೀನಾವೇ ಮೂಲ. ಹೀಗಾಗಿ ಜೀನ್ಸ್‌, ಸ್ಪೋರ್ಟ್‌ ವೇರ್‌ ಮತ್ತು ಶೂಗಳನ್ನು ಜನ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿಟ್ಟುಕೊಳ್ಳುತ್ತಿದ್ದಾರೆ.

ಆಟೋಮೊಬೈಲ್‌:ಈ ವರ್ಷ ಆಮದಿತ ವಾಹನಗಳು, ಅದರಲ್ಲೂ ಮುಖ್ಯವಾಗಿ ಇವಿಗಳನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದ ಜನ ಇದೀಗ ದಿಢೀರ್‌ ಆಗಿ ಶೋರೂಂಗಳಿಗೆ ಎಡತಾಕ ತೊಡಗಿದ್ದಾರೆ. ತೆರಿಗೆ ನೀತಿಯಿಂದ ವಿದೇಶದಿಂದ ಆಮದಾದ ವಾಹನಗಳ ಬೆಲೆ ಭಾರೀ ಏರಿಕೆಯಾಗುವ ಹಿನ್ನೆಲೆಯಲ್ಲಿ ಇಂಥ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾ ಹೆಸರು ಹೇಳದೆಯೇ ಚಾಟಿ!

ವಿದೇಶಿ ಆಹಾರಗಳು, ಎಲೆಕ್ಟ್ರಿಕ್‌ ವಸ್ತುಗಳು:

ಕಾಫಿ, ಕಾಂಡಿಮೆಂಟ್ಸ್‌ ಮತ್ತು ಇತರೆ ದಿನನಿತ್ಯದ ಬಳಕೆ ವಸ್ತುಗಳು ಹಾಗೂ ವಾಷಿಂಗ್‌ ಮೆಷಿನ್‌ಗಳು, ಫ್ರಿಡ್ಜ್‌ಗಳು, ಮೈಕ್ರೋವೇವ್‌ಗಳು ಮತ್ತು ಡಿಶ್‌ವಾಷರ್‌ಗಳಂಥ ಉತ್ಪನ್ನಗಳಿಗೂ ಇದೀಗ ಅಮೆರಿಕದಲ್ಲಿ ದಿಢೀರ್ ಬೇಡಿಕೆ ಹೆಚ್ಚಾಗಿದೆ. ಇವುಗಳಲ್ಲಿ ಬಳಸುವ ಬಹುತೇಕ ಬಿಡಿಭಾಗಗಳು ಚೀನಾ, ತೈವಾನ್‌ನಂಥ ದೇಶಗಳಿಂದ ಆಮದಾಗುತ್ತವೆ.

ಏ.1ರಿಂದ ಟ್ರಂಪ್‌ ತೆರಿಗೆ ಯುದ್ಧ । ದರ ಏರಿಕೆ ಆತಂಕ: ಖರೀದಿಗೆ ಮುಗಿಬಿದ್ದ ಜನ- ವಾಹನ, ಎಲೆಕ್ಟ್ರಾನಿಕ್‌ ಉತ್ಪನ್ನ, ಗ್ಯಾಜೆಟ್‌, ಬಟ್ಟೆ, ಶೂ ಕೊಂಡುಕೊಳ್ಳಲು ಧಾವಂತ

ಐಫೋನ್‌ ತವರು ಅಮೆರಿಕದಲ್ಲೇ 43% ದುಬಾರಿ!

ವಾಷಿಂಗ್ಟನ್‌: ಆ್ಯಪಲ್‌ ಕಂಪನಿ ಅಮೆರಿಕದ್ದೇ ಆಗಿದ್ದರೂ ಟ್ರಂಪ್‌ ತೆರಿಗೆ ಏರಿಕೆ ಹೊಡೆತದಿಂದ ಅದರ ಜನಪ್ರಿಯ ಐಫೋನ್‌ಗಳು ಶೇ.43ರಷ್ಟು ದುಬಾರಿ ಆಗುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಚೀನಾದ ಮೇಲೆ ಶೇ.52, ತೈವಾನ್‌ ಮೇಲೆ ಶೇ.32 ಹಾಗೂ ಭಾರತದ ಮೇಲೆ ಶೇ.26 ತೆರಿಗೆ ಹೇರಿದ್ದಾರೆ. ಬಹುತೇಕ ಐಫೋನ್‌ಗಳು, ಅದರ ಬಿಡಿಭಾಗಗಳು ಈ ಮೂರೂ ದೇಶದಲ್ಲೇ ತಯಾರಾಗುತ್ತವೆ. ಹೀಗಾಗಿ ಅಮೆರಿಕದಲ್ಲಿ ಐಫೋನ್‌ ಅಗ್ಗ ಎಂಬುದು ಇನ್ನು ಸುಳ್ಳಾಗಲಿದೆ.

ಭಾರತ- ಅಮೆರಿಕತೆರಿಗೆ ಸಮರಕ್ಕೆಏ.9ರಂದು ಬ್ರೇಕ್‌?

ನವದೆಹಲಿ: ಡೊನಾಲ್ಡ್‌ ಟ್ರಂಪ್‌ ಅವರ ಶೇ.26ರಷ್ಟು ಪ್ರತಿ ತೆರಿಗೆ ಅನುಷ್ಠಾನಕ್ಕೂ ಮೊದಲೇ ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದವೊಂದಕ್ಕೆ ಸಹಿ ಬೀಳುವ ನಿರೀಕ್ಷೆ ಇದೆ. ಇದರಿಂದ ಈಗ ಆರಂಭವಾಗಿರುವ ತೆರಿಗೆ ಸಮರಕ್ಕೆ ಬ್ರೇಕ್‌ ಬಿದ್ದು, ಅಗ್ಗದ ತೆರಿಗೆಯಲ್ಲಿ ಆಮದು-ರಫ್ತು ಸಾಧ್ಯವಾಗಬಹುದು ಎಂದು ಅಮೆರಿಕ ಮಾಧ್ಯಮ ‘ಸಿಎನ್‌ಎನ್’ ವರದಿ ಮಾಡಿದೆ.

ಮುಂದೆ ಒಳ್ಳೇದಾಗುತ್ತೆಈಗ ನಿಮಗೆ (ಅಮೆರಿಕ ಜನರಿಗೆ) ಕಷ್ಟ ಆಗಬಹುದು. ಆದರೆ ನಾನು ಕೈಗೊಂಡ ಕ್ರಮಗಳು ಐತಿಹಾಸಿಕ ಫಲಿತಾಂಶ ನೀಡಲಿವೆ.- ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ