
ಅರುಣಾಚಲ ಪ್ರದೇಶ(ಡಿ.11) ಕಾರ್ಮಿಕರ ಹೊತ್ತು ಸಾಗಿದ್ದ ಟ್ರಕ್ ಅಪಘಾತ ಘಟನೆ ಮನಕಲುಕುವಂತಿದೆ. ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿ ಪ್ರದೇಶದಲ್ಲಿ ನಡೆದಿದೆ. ಬರೋಬ್ಬರಿ 10,000 ಅಡಿಗಳ ಎತ್ತರದಲ್ಲಿರುವ ಪರ್ವತಗಳ ಪ್ರದೇಶದಲ್ಲಿ ಈ ದುರಂತ ನಡೆದಿದೆ. ಚಗ್ಲಾಗಾಮ್ ಬಾರ್ಡರ್ ರಸ್ತೆಯಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ 22 ಕಾರ್ಮಿಕರ ಹೊತ್ತು ಸಾಗಿದ ಟ್ರಕ್ ಪ್ರಪಾತಕ್ಕೆ ಉರುಳಿದೆ. ದುರಂತ ಎಂದರೆ ಅಪಘಾತ ಸೋಮವಾರ (ಡಿ.08) ನಡೆದಿದೆ. ಯಾರಿಗೂ ಗೊತ್ತೇ ಆಗಿಲ್ಲ.ತೀವ್ರವಾಗಿ ಗಾಯಗೊಂಡು ಹಲವರು ಮೃತಪತ್ತರೆ, ಗಂಭೀರವಾಗಿ ಗಾಯಗೊಂಡವರು ಚಿಕಿತ್ಸೆ ಸಿಗದೆ ನರಳಾಡಿದ್ದಾರೆ. ಈ ಪೈಕಿ ತೀವ್ರ ಗಾಯಗೊಂಡ ವ್ಯಕ್ತಿ ತೆವಳುತ್ತಾ ಪ್ರಪಾತದಿಂದ ಮೇಲೆ ಬಂದು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಭೀಕರ ಅಪಘಾತ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಎನ್‌ಡಿಆರ್‌ಎಫ್ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಇನ್ನುಳಿದವರ ಪರಿಸ್ಥಿತಿ ಗಂಭೀರವಾಗಿದೆ.
ಅಪಘಾತ ನಡೆದ ಸ್ಥಳ ಭಾರತ ಹಾಗೂ ಚೀನಾ ಗಡಿಯಿಂದ 45 ಕಿಲೋಮೀಟರ್ ದೂರದಲ್ಲಿದೆ. ಕೆಲಸದ ನಿಮಿತ್ತ ಟ್ರಕ್ ಮೂಲಕ 22 ಕಾರ್ಮಿಕರು ಚಗ್ಲಗಾಮ್ ಬಾರ್ಡರ್ ರಸ್ತೆಯಲ್ಲಿ ಸಾಗಿದ್ದಾರೆ. ಈ ಬಾರ್ಡರ್ ವಲಯದ, ಕಾಮಗಾರಿ ಸ್ಥಳಗಳಲ್ಲಿ ಸಂಪೂರ್ಣ ನೆಟ್‌ವರ್ಕ್ ಲಬ್ಯವಿಲ್ಲ. ಕಾರ್ಮಿಕರು ಟ್ರಕ್ ಮೂಲಕ ಪ್ರಯಾಣ ಮಾಡುತ್ತಿದ್ದಂತೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ಸಿಗ್ನಲ್ ಇದ್ದರೆ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕುಟುಂಬಸ್ಥರು ಕರೆ ಮಾಡುವ ಪ್ರಯತ್ನ ಮಾಡಲಿಲ್ಲ. ಇತ್ತ ಟ್ರಕ್ ದುರ್ಗಮ ಹಾದಿಯಲ್ಲಿ ಸಾಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಟ್ರಕ್ ನೇರವಾಗಿ ಪ್ರಪಾತಕ್ಕೆ ಉರುಳಿದೆ. ಭೀಕರ ಅಪಘಾತದಲ್ಲಿ ಟ್ರಕ್ ಸಂಪೂರ್ಣ ನಜ್ಜು ಗುಜ್ಜಾಗಿದೆ.
ಅಪಘಾತದ ತೀವ್ರತೆಗೆ ಹಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕೆಲವರು ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಈ ಪೈಕಿ ತೀವ್ರಗಾಯಗೊಂಡಿದ್ದ ಕಾರ್ಮಿಕ ಪ್ರಪಾತದಿಂದ ಮೆಲ್ಲನೆ ತೆವಳುತ್ತಾ ಮೇಲೆ ಬಂದಿದ್ದಾನೆ. ಬಾರ್ಡರ್ ರಸ್ತೆ ಮೇಲೆ ಬಂದರೂ ಈ ರಸ್ತೆಯಲ್ಲಿ ಯಾರೂ ಪತ್ತೆಯಾಗಲಿಲ್ಲ. ಹೀಗಾಗಿ ಹತ್ತಿರದ ಪಟ್ಟಣದ ವರೆಗೆ ತೆರಳಿ ಅದಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈತನ ಮಾಹಿತಿ ಕೇಳಿ ಅಧಿಕಾರಿಗಳು ಆಘಾತಗೊಂಡಿದ್ದಾರೆ. ಗಾಯಗೊಂಡ ಕಾರ್ಮಿಕನ ಮಾಹಿತಿ ಪಡೆದು ತಕ್ಷಣವೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಇತ್ತ ಕಾರ್ಮಿಕನ ಆಸ್ಪತ್ರೆ ದಾಖಲಿಸಲಾಗಿದೆ.
ಘಟನೆಯಲ್ಲಿ 22 ಕಾರ್ಮಿಕರ ಪೈಕಿ 17 ಮಂದಿ ಮೃತಪಟ್ಟಿದ್ದಾರೆ. ಇನ್ನುಳಿದವರ ಪೈಕಿ ಕೆಲವು ಕಾರ್ಮಿಕರ ಆರೋಗ್ಯ ಗಂಭೀರವಾಗಿದೆ. ನಾಲ್ಕು ದಿನಗಳಿಂದ ಚಿಕಿತ್ಸೆ, ಆಹಾರ ಏನೂ ಇಲ್ಲದೆ ನರಕಯಾತನೆ ಅನುಭವಿಸಿದ ಭೀಕರ ದುರಂತ ಇದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ