
ನವದೆಹಲಿ: ಇಬ್ಭಾಗವಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಎರಡೂ ಬಣಗಳಿಗೆ ಚುನಾವಣಾ ಆಯೋಗವು ಶುಕ್ರವಾರ ಹೊಸ ಹೆಸರು ಹಾಗೂ ಚಿಹ್ನೆಗಳನ್ನು ನೀಡಿದೆ. ದೀದಿ ಬಣಕ್ಕೆ ‘ಮಮತಾ ಆಲ್ ಇಂಡಿಯ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಹಾಗೂ ಫುಟ್‌ಬಾಲ್ ಆಟಗಾರನ ಚಿಹ್ನೆಯನ್ನು ನೀಡಲಾಗಿದೆ. ಇನ್ನು ಋತಬ್ರತ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಬಂಡಾಯವೆದ್ದಿದ್ದ ಅರುಪ್ ರಾಯ್ ಅಧ್ಯಕ್ಷತೆಯ ತಂಡಕ್ಕೆ ಲಕೋಟೆಯ ಗುರುತಿನೊಂದಿಗೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಸಿಕ್ಕಿದೆ. ಭಾರತೀಯ ಚುನಾವಣಾ ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮೂಲ ಪಕ್ಷದ ಗುರುತು ಮತ್ತು ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸುವುದರ ವಿರುದ್ಧ ನ್ಯಾಯಾಂಗ ಹಸ್ತಕ್ಷೇಪ ಮಾಡಬೇಕೆಂದು ಕೋರಿ ಸೆಪ್ಟೆಂಬರ್ 18 ರಂದು ರಿಟ್ ಅರ್ಜಿ ಸಲ್ಲಿಸಿದ್ದು, ಚುನಾವಣಾ ಆಯೋಗ ಮತ್ತು ಋತಬ್ರತ ಬ್ಯಾನರ್ಜಿ ನೇತೃತ್ವದ ಪ್ರತಿಸ್ಪರ್ಧಿ ಬಣವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅ.6ರಂದು ನಡೆಯಲಿರುವ 2 ವಿಧಾನಸಭೆ (ನಂದಿಗ್ರಾಮ ಹಾಗೂ ರೆಜಿನಗರ) ಮತ್ತು 1 ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಗೊಂದಲ ಆಗದಿರಲಿ ಎಂದು ಈ ಕ್ರಮ ಕೈಗೊಳ್ಳಲಾಗಿದೆ. ಯಾವ ಬಣ ಅಸಲಿ ಟಿಎಂಸಿ ಎಂಬ ವಿವಾದ ಬಗೆಹರಿಯುವ ತನಕ, ಇದೀಗ ನೀಡಲಾಗಿರುವ ಹೆಸರು ಮತ್ತು ಗುರುತನ್ನು ಬಳಸಬೇಕಾಗುತ್ತದೆ.
ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋತ ಬಳಿಕ, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೊರಿಸಿ ಶಾಸಕ ಋತಬ್ರತರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆದರೆ ಜೂನ್‌ನಲ್ಲಿ 80 ಶಾಸಕರ ಪೈಕಿ 58 ಮಂದಿ ಋತಬ್ರತರನ್ನೇ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇದರಿಂದ ಪಕ್ಷದಲ್ಲಿ ಸ್ಪಷ್ಟ ಬಿರುಕು ಮೂಡಿ, ಅಧಿಕೃತ ಟಿಎಂಸಿ ಸ್ಥಾನಕ್ಕೆ ಕಿತ್ತಾಟ ಆರಂಭವಾಗಿತ್ತು.
ಇನ್ನು ಸೆ.17ರಂದು ಚುನಾವಣಾ ಆಯೋಗ ಹೊರಡಿಸಿದ ಟಿಎಂಸಿ ಅಧಿಕೃತ ಚಿಹ್ನೆ ಜಪ್ತಿ ವಿಚಾರಕ್ಕೆ ಮಮತಾ ಕಿಡಿಕಾರಿದ್ದರು, ‘ಆಯೋಗವನ್ನು ಬಳಸಿಕೊಂಡು ಬಿಜೆಪಿಗೆ ಪಕ್ಷಗಳನ್ನು ಹಾಳು ಮಾಡುವ ಚಟವಿದೆ. ಈ ಹಿಂದೆ ಎನ್‌ಸಿಪಿ, ಶಿವಸೇನೆಯನ್ನು ಒಡೆದಿತ್ತು. ಈಗ ಶಿವಸೇನೆಯನ್ನು ಒಡೆದಿದೆ. 28 ವರ್ಷದಿಂದ ಇದ್ದ ಚಿಹ್ನೆಯನ್ನು ಹೇಗೆ ಆಯೋಗ ಮುಟ್ಟುಗೋಲು ಹಾಕಿಕೊಳ್ಳುತ್ತದೆ? ಇದು ಪ್ರಜಾಸತ್ತೆಯ ಕರಾಳ ದಿನ. ಇದಕ್ಕೆ ನಾವು ತಲೆಬಾಗಲ್ಲ. ಹೆದರಲ್ಲ. ಎಲ್ಲ ವಿಪಕ್ಷಗಳು ಸೇರಿ ಬಿಜೆಪಿ ವಿರುದ್ಧ ಹೋರಾಡುತ್ತೇವೆ’ ಎಂದಿದ್ದರು.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೆಂಬಲ ಪಡೆದ ಕೆಲವೇ ಗಂಟೆಗಳ ಬಳಿಕ, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಶುಕ್ರವಾರ, ಹಳೆಯ ಕೊ*ಲೆ ಪ್ರಕರಣ ಸೇರಿ ನಂದಿಗ್ರಾಮ ಹೋರಾಟದ 12 ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ನಂದಿಗ್ರಾಮದಲ್ಲಿ ಮಮತಾ ಬಣದಿಂದ ಕಣಕ್ಕಿಳಿಸಲ್ಪಟ್ಟಿದ್ದ ಸಂಚಿತಾ ಪ್ರಧಾನ್ ಡೇ ಅವರು ಶುಕ್ರವಾರ ಸಂಜೆ ಕಣದಿಂದ ಹಿಂದೆ ಸರಿದಿದ್ದರು. ನಂತರ ಮಮತಾ ಖುದ್ದು ಮಿಲನ್ ಪ್ರಧಾನ್ ಅವರಿಗೆ ತಮ್ಮ ಬೆಂಬಲ ಪ್ರಕಟಿಸಿದ್ದರು. ಇದಾದ ಕೆಲವೇ ತಾಸಿನಲ್ಲಿ ಪ್ರಧಾನ್ ಅವರನ್ನು ಬಂಧಿಸಲಾಗಿರುವುದು ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್ ಪ್ರಧಾನ್ ಖುದ್ದು ವಿರೋಧಿಸಿದ್ದು, ‘19 ವರ್ಷ ಬಳಿಕ ಈ ಪ್ರಕರಣಗಳು ನೆನಪಾದವೆ? ಇದು ಸೇಡಿನ ಕ್ರಮ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ