
ತಿರುಮಲ: ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇಗುಲಕ್ಕೆ ಕಲಬೆರಕೆ ತುಪ್ಪ ಪೂರೈಸಿದ ಪ್ರಕರಣದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಸುಕೃತಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಪ್ರವರ್ತಕ ಕೈಲಾಶ್ ಚಂದ್ ಮಂಗ್ಲಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ. ಅವರ ಕಂಪನಿ ₹96 ಕೋಟಿ ಮೌಲ್ಯದ ತುಪ್ಪವನ್ನು ತಾಳೆ ಎಣ್ಣೆ, ಪಾಮೋಲಿನ್ ಮತ್ತು ವಿವಿಧ ರಾಸಾಯನಿಕ ಬಳಸಿ ತಯಾರಿಸಿತ್ತು ಎಂದು ಸಂಸ್ಥೆ ಆರೋಪಿಸಿದೆ. ಆದರೆ ಈ ಹಿಂದೆ ಟಿಟಿಡಿ ಆರೋಪಿಸಿದಂತೆ ‘ಪ್ರಾಣಿಯ ಕೊಬ್ಬಿನಿಂದ ಲಡ್ಡು ತಯಾರಾಗಿತ್ತು’ ಎಂದು ಇ.ಡಿ. ಹೇಳಿಲ್ಲ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂದು ಈ ಹಿಂದೆ ಭಾರಿ ಚರ್ಚೆಯಾಗಿತ್ತು. ಆದರೆ, ಇ.ಡಿ. ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪ್ರಾಣಿ ಕೊಬ್ಬಿನ ಬದಲು ಸಂಸ್ಕರಿಸಿದ ತಾಳೆ ಎಣ್ಣೆ , ಪಾಮೋಲಿನ್ ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ನಕಲಿ ಹಸುವಿನ ತುಪ್ಪವನ್ನು ತಯಾರಿಸಲಾಗಿತ್ತು ಎಂಬ ಆಘಾತಕಾರಿ ಸತ್ಯ ಬಹಿರಂಗವಾಗಿದೆ.
ಇ.ಡಿ. ಮಾಹಿತಿ ಪ್ರಕಾರ, 2019 ರಿಂದ 2024 ರ ಅವಧಿಯಲ್ಲಿ ಟಿಟಿಡಿಗೆ ಒಟ್ಟು ₹230 ಕೋಟಿ ಮೌಲ್ಯದ ಕಳಪೆ ಹಾಗೂ ನಕಲಿ ತುಪ್ಪವನ್ನು ವಂಚನೆಯಿಂದ ಪೂರೈಸಲಾಗಿತ್ತು. ಈ ಪೈಕಿ ಬಂಧಿತ ಕೈಲಾಶ್ ಚಂದ್ ಮಂಗ್ಲಾ ತನ್ನ ಕಾರ್ಖಾನೆಯಲ್ಲಿ ₹96 ಕೋಟಿ ಮೌಲ್ಯದ ಕಲಬೆರಕೆ ತುಪ್ಪವನ್ನು ಸ್ವತಃ ತಯಾರಿಸಿ ಪೂರೈಸಿದ್ದ ಎಂದು ಆರೋಪಿಸಲಾಗಿದೆ.
ನಕಲಿ ತುಪ್ಪವನ್ನು ನೈಜ ಹಸುವಿನ ತುಪ್ಪದಂತೆ ಬಿಂಬಿಸಲು ಮಂಗ್ಲಾ ಹಾಗೂ ಆತನ ಸಹ-ಸಂಚುಕೋರರು MG-90, ಮೊನೊಗ್ಲಿಸರೈಡ್‌ಗಳು, ಮೈವಾಸೆಟ್ ಸಾಫ್ಟ್ 400 ಮತ್ತು ಅಸಿಟಿಕ್ ಆಸಿಡ್ ಎಸ್ಟರ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಬಳಸುತ್ತಿದ್ದರು. ಈ ಮಿಶ್ರಣವನ್ನು ‘ಅಗ್‌ಮಾರ್ಕ್ (Agmark) ಸ್ಪೆಷಲ್ ಗ್ರೇಡ್ ಹಸುವಿನ ತುಪ್ಪ’ ಎಂಬ ನಕಲಿ ಪ್ರಮಾಣಪತ್ರದೊಂದಿಗೆ ಟಿಟಿಡಿಗೆ ಸರಬರಾಜು ಮಾಡಲಾಗುತ್ತಿತ್ತು.
ಶ್ರೀ ವೈಷ್ಣವಿ ಡೈರಿ ಸ್ಪೆಷಾಲಿಟೀಸ್, ಮಾಲ್ಗಂಗಾ ಮಿಲ್ಕ್ & ಆಗ್ರೋ ಪ್ರಾಡಕ್ಟ್ಸ್ ಮತ್ತು ಎಆರ್ ಡೈರಿ ಫುಡ್ಸ್ ಸೇರಿದಂತೆ ವಿವಿಧ ನಕಲಿ (Front) ಕಂಪನಿಗಳ ಮೂಲಕ ಈ ಕಲಬೆರಕೆ ಜಾಲವನ್ನು ಕಾರ್ಯಾಚರಿಸಲಾಗುತ್ತಿತ್ತು. ನೈಜ ಹಸುವಿನ ಹಾಲಿನಿಂದಲೇ ತುಪ್ಪ ತಯಾರಿಸಲಾಗುತ್ತಿದೆ ಎಂದು ತೋರಿಸಿಕೊಳ್ಳಲು ಮಂಗ್ಲಾ ಕೃತಕ ಖರೀದಿಯ ಸುಳ್ಳು ದಾಖಲೆಗಳು ಹಾಗೂ ಬಿಲ್‌ಗಳನ್ನು ಸೃಷ್ಟಿಸಿದ್ದ ಎಂದು ಇ.ಡಿ. ಆರೋಪಿಸಿದೆ.
ಸೆಪ್ಟೆಂಬರ್ 17 ರಂದು ಹೈದರಾಬಾದ್‌ನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 19 ರ ಅಡಿಯಲ್ಲಿ ಮಂಗ್ಲಾ ಅವರನ್ನು ಬಂಧಿಸಲಾಗಿದ್ದು, ವಿಶಾಖಪಟ್ಟಣಂನ ವಿಶೇಷ ಪಿಎಮ್‌ಎಲ್‌ಎ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಪ್ರಕರಣದಲ್ಲಿ ಇ.ಡಿ. ಈಗಾಗಲೇ ಭೋಲೆ ಬಾಬಾ ಆರ್ಗಾನಿಕ್ ಡೈರಿಯ ಪ್ರವರ್ತಕ ವಿಪಿನ್ ಜೈನ್ ಅವರನ್ನು ಸಹ ಬಂಧಿಸಿದ್ದು, ತನಿಖೆ ತೀವ್ರಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ