*2 ದಿನದಿಂದ ಅನ್ನ, ನೀರು ಇಲ್ಲದೇ ಬಿಸಿಲಲ್ಲಿ ಬಸವಳಿದ ಯುವಕ
*ಕೇರಳದಲ್ಲೊಂದು ಆಘಾತಕಾರಿ ಘಟನೆ: ಸೇನೆ ನೆರವು ಕೋರಿಕೆ
ಪಾಲಕ್ಕಾಡ್ (ಫೆ. 09): ಬೃಹತ್ ಬೆಟ್ಟಹತ್ತುವ ಸಾಹಸ ಯಶಸ್ವಿಯಾದ ಬಳಿಕ ಕಾಲುಜಾರಿ ಬಿದ್ದ ಯುವಕನೊಬ್ಬ ದೊಡ್ಡ ಬೆಟ್ಟದ ನಡುವಿನ ಸಣ್ಣ ಜಾಗದಲ್ಲಿ ಸಿಕ್ಕಿಹಾಕಿಕೊಂಡಿರುವ ಘಟನೆಯೊಂದು ಕೇರಳದಲ್ಲಿ (Kerala) ನಡೆದಿದೆ. ಸುಡು ಬಿಸಿಲಿನಲ್ಲೇ 2 ದಿನಗಳಿಂದ ಅನ್ನ, ನೀರು ಇಲ್ಲದೇ ಯುವಕ ಸಂಕಷ್ಟದಲ್ಲಿದ್ದು, ಆತನ ರಕ್ಷಣೆಗಾಗಿ ಕೇರಳ ಸರ್ಕಾರ ಸೇನೆಯ ನೆರವು ಕೋರಿದೆ. ಬಾಬು ಎಂಬ ಯುವಕ ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಸೋಮವಾರ ಪಾಲಕ್ಕಾಡ್ (Palakkad) ಸಮೀಪದ ಕುರುಂಬಚ್ಚಿ ಬೆಟ್ಟಏರಲು ತೆರಳಿದ್ದ. ಉಳಿದಿಬ್ಬರು ಮಾರ್ಗಮಧ್ಯದಲ್ಲೇ ಇದು ತಮ್ಮ ಕೈಲಾಗದು ಎಂದು ಸುಮ್ಮನಾಗಿದ್ದರು. ಆದರೆ ಬಾಬು ಬೆಟ್ಟದ ತುದಿ ಏರಿದ್ದ. ಅಲ್ಲಿಂದ ಇನ್ನೇನು ಕೆಳಗೆ ಇಳಿಯಬೇಕು ಎನ್ನುವಷ್ಟರಲ್ಲಿ ಕಡಿದಾದ ಬೆಟ್ಟದ ತುದಿಯಿಂದ ಕಾಲು ಜಾರಿ ಕೆಳಕ್ಕೆ ಉರುಳಿದ್ದ.
ಅದೃಷ್ಟವಶಾತ್ ಆತ ಪೂರ್ಣ ಕೆಳಕ್ಕೆ ಉರುಳುವ ಬದಲು ನಡುವೆ ಸಣ್ಣದಾದ ಜಾಗವೊಂದಲ್ಲಿ ಸಿಕ್ಕಿಹಾಕಿಕೊಂಡಿದ್ದ. ಆತ ಮೇಲೆ ಹತ್ತಿ ಬರುವಂತೆಯೂ ಇರಲಿಲ್ಲ, ಸ್ನೇಹಿತರು ರಕ್ಷಿಸುವ ಸಾಧ್ಯತೆಯೂ ಇರಲಿಲ್ಲ. ಹೀಗಾಗಿ ಅವರು ಕೆಳಗೆ ಬಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಯತ್ನ ಮಾಡಿದರೂ ಯುವಕನ ಸಮೀಪ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸೋಮವಾರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
undefined
ಇದನ್ನೂ ಓದಿ: Viral News: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ, ಮುಂದೇನಾಯ್ತು.?
ಮಂಗಳವಾರ ಬೆಳಗ್ಗೆ ಕರಾವಳಿ ಕಾವಲು ಪಡೆಯ ಕಾಪ್ಟರ್‌ಗಳು ಯುವಕನ ರಕ್ಷಣೆಗೆ ಧಾವಿಸಿತ್ತಾದರೂ, ಯುವಕ ಸಿಕ್ಕಿಬಿದ್ದ ಸ್ಥಳ ಅತ್ಯಂತ ಕಡಿದಾಗಿದ್ದ ಕಾರಣ ಅಲ್ಲಿಗೆ ತೆರಳಲಾಗದೇ ಮರಳಿವೆ. ಹೀಗಾಗಿ ಸೋಮವಾರ ಬೆಳಗ್ಗೆಯಿಂದಲೂ ಯುವಕ ತಾನು ಕೂರಬಹುದಾದಷ್ಟೇ ಸಣ್ಣ ಜಾಗದಲ್ಲಿ ಸುಡು ಬಿಸಿಲು, ರಾತ್ರಿಯ ಚಳಿಯ ನಡುವೆ, ಅನ್ನ, ನೀರು ಇಲ್ಲದೇ ಸಂಕಷ್ಟಸ್ಥಿತಿಯಲ್ಲಿ ಕುಳಿತುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಯುವಕನ ರಕ್ಷಣೆಗಾಗಿ ಸೇನೆಯ ನೆರವು ಕೋರಿದೆ. ಸೇನೆ ಮತ್ತು ವಾಯುಪಡೆ ತಂಡಗಳು ಇದೀಗ ಪಾಲಕ್ಕಾಡ್‌ನತ್ತ ಧಾವಿಸುತ್ತಿವೆ.