
ದೆಹಲಿ: ದಕ್ಷಿಣ ದೆಹಲಿಯ ಸತ್ಯ ನಿಕೇತನದಲ್ಲಿ ಪಿಜಿ ಹಾಸ್ಟೆಲ್ನ ಐದು ಅಂತಸ್ತಿನ ಕಟ್ಟಡ ಭಾನುವಾರ ಮಧ್ಯಾಹ್ನ ಸುಮಾರು 1:30 ರ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಇದುವರೆಗೆ 6 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇಕ್ಕಟ್ಟಾದ ಈ ಕಟ್ಟಡದಲ್ಲಿ ಸುಮಾರು 40 ರಿಂದ 50 ವಿದ್ಯಾರ್ಥಿಗಳು ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಕಟ್ಟಡದ ಬೇಸ್‌ಮೆಂಟ್‌ನಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಹಲವು ವಿದ್ಯಾರ್ಥಿಗಳು ಬದುಕುವ ಆಸೆಯನ್ನೇ ಬಿಟ್ಟವರು. ಅಂಥ ಸಂದರ್ಭದಲ್ಲಿ ಹಲವರಿಗೆ ನೆನಪಾದದ್ದು ತಮ್ಮಿಂದ ಎಷ್ಟೋ ಕಿಲೋಮೀಟರ್ ದೂರ ಇರುವ ಅಪ್ಪ-ಅಮ್ಮ ಹಾಗೂ ಕುಟುಂಬಸ್ಥರು. ಇನ್ನು ಬದುಕುತ್ತೇನೋ ಇಲ್ಲವೋ ಎನ್ನುವ ಸಂಶಯ ಅವರಲ್ಲಿ ಕಾಡುತ್ತಿತ್ತು. ಕೊನೆಯ ಉಸಿರು ಚೆಲ್ಲುವ ಮೊದಲು ಹೆತ್ತವರನ್ನು ನೆನಪಿಸಿಕೊಳ್ಳಬೇಕು ಎಂದು ಅಂದುಕೊಂಡವರು ಈ ಮಕ್ಕಳು. ಇಂಥ ಸಂದರ್ಭದಲ್ಲಿಯೂ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿಯೊಬ್ಬ ಪ್ರಾಣಾಪಾಯದಲ್ಲೂ ಧೈರ್ಯ ಪ್ರದರ್ಶಿಸಿ ಮಾಡಿದ 11 ಸೆಕೆಂಡುಗಳ ಎಸ್‌ಒಎಸ್ (SOS) ವಿಡಿಯೋ ಕಾಲ್ ಮಾಡಿದ್ದಾನೆ. ಇದು ಎಂಥವರ ಮನ ಕಲುಕುವಂತಿದೆ.
ಈ ಎಸ್‌ಒಎಸ್ ವಿಡಿಯೋ ಮಾಡಿದ ವಿದ್ಯಾರ್ಥಿಯನ್ನು ಆದಿತ್ಯ ಎಂದು ಗುರುತಿಸಲಾಗಿದೆ. ಈತ ದೆಹಲಿ ವಿಶ್ವವಿದ್ಯಾಲಯದ ಆತ್ಮಾರಾಮ್ ಸನಾತನ ಧರ್ಮ (ARSD) ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿ. ಕಟ್ಟಡ ಕುಸಿದು ಸಂಪೂರ್ಣವಾಗಿ ಕತ್ತಲೆ ಹಾಗೂ ಅವಶೇಷಗಳಿಂದ ಆವೃತವಾಗಿದ್ದರೂ, ವಿದ್ಯಾರ್ಥಿ ತನ್ನ ಮೊಬೈಲ್ ಮೂಲಕ ವಿಡಿಯೋ ಕಾಲ್ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾನೆ. ಅವನ ಮುಖದ ಮೇಲೆ ಧೂಳು ಮತ್ತು ರಕ್ತದ ಕಲೆಗಳಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ತಾನು ಸಿಲುಕಿರುವ ಅತ್ಯಂತ ಕಿರಿದಾದ ಜಾಗವನ್ನು ತೋರಿಸಿ ರಕ್ಷಿಸುವಂತೆ ಕೇಳಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಆತನ ಬದುಕುವ ಆಸೆಯನ್ನೇ ಬಿಟ್ಟಂತಿದೆ. ಈ ಕಾರಣಕ್ಕೆ ತನ್ನ ಹೆತ್ತವರನ್ನು ನೆನಪಿಸಿಕೊಂಡು ಬೈ ಅಪ್ಪ, ಅಮ್ಮ ಎನ್ನುತ್ತಲೇ ವಿಡಿಯೋ ಮಾಡಿ ಸಹಾಯ ಕೋರಿದ್ದಾನೆ.
ವಿಡಿಯೋ ಕಾಲ್ ಹಾಗೂ ಎಸ್‌ಒಎಸ್ ಸಂದೇಶದ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆದಿತ್ಯನನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವನ ಮುಖವನ್ನು ಧೂಳು ಆವರಿಸಿದೆ. ರಕ್ತದ ಕಲೆಗಳು ಗೋಚರಿಸುತ್ತಿವೆ. ಅವನ ಸುತ್ತಲೂ ಕಾಂಕ್ರೀಟ್ ತುಂಡುಗಳು ಮತ್ತು ತಿರುಚಿದ ಅವಶೇಷಗಳು ಇವೆ. ಆದರೂ, ಈತ ತನ್ನ ಫೋನ್ ಎತ್ತಿಕೊಂಡು ಸಹಾಯ ಕೋರಿದ್ದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಂಜೆ 5.30 ರ ಸುಮಾರಿಗೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‌ಎಸ್‌ಯುಐ) ಎಕ್ಸ್‌ನಲ್ಲಿ ಹಂಚಿಕೊಂಡ 11 ಸೆಕೆಂಡುಗಳ ವೀಡಿಯೊದಲ್ಲಿ, ವಿದ್ಯಾರ್ಥಿ ಅವಶೇಷಗಳ ಕೆಳಗೆ ಮಲಗಿದ್ದು, ಸಹಾಯ ಕೋರುತ್ತಿರುವಾಗ ತಾನು ಸಿಕ್ಕಿಬಿದ್ದಿರುವ ಇಕ್ಕಟ್ಟಾದ ಜಾಗವನ್ನು ತೋರಿಸಲು ತನ್ನ ಫೋನ್ ಕ್ಯಾಮೆರಾವನ್ನು ಚಲಿಸುತ್ತಿರುವುದನ್ನು ಕಾಣಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ