ಟ್ರಾನ್ಸ್‌ಫಾರ್ಮರ್ ಕದಿಯೋಕೆ ಹೋದ್ರು; ಕೆಸರು ‘ನೋ ಎಂಟ್ರಿ’ ಅಂದಿತು! ಕಳ್ಳರ ಕಾರು-ಟ್ರಕ್‌ ಎರಡೂ ಸಿಕ್ಕಿಬಿತ್ತು

Published : Aug 24, 2026, 02:26 PM IST
Transformer Theft Backfires In Punjab As Thieves Car Recovery Truck Get Stuck In Mud

ಸಾರಾಂಶ

ಟ್ರಾನ್ಸ್‌ಫಾರ್ಮರ್ ಕಳ್ಳತನಕ್ಕೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಕಳ್ಳರಿಗೆ ಕೆಸರಿನ ಗದ್ದೆಯೇ ದೊಡ್ಡ ತಡೆಯಾಗಿ ಪರಿಣಮಿಸಿದೆ. ಮೊದಲು ಕಳ್ಳರ ಕಾರು ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಅದನ್ನು ಹೊರತೆಗೆಯಲು ತಂದ ರಿಕವರಿ ಟ್ರಕ್‌ ಕೂಡ ಅದೇ ಜಾಗದಲ್ಲಿ ಸಿಕ್ಕಿಹಾಕಿಕೊಂಡಿದೆ

ಟ್ರಾನ್ಸ್‌ಫಾರ್ಮರ್ ಕಳ್ಳತನಕ್ಕೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಕಳ್ಳರಿಗೆ ಕೆಸರಿನ ಗದ್ದೆಯೇ ದೊಡ್ಡ ತಡೆಯಾಗಿ ಪರಿಣಮಿಸಿದೆ. ಮೊದಲು ಕಳ್ಳರ ಕಾರು ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಅದನ್ನು ಹೊರತೆಗೆಯಲು ತಂದ ರಿಕವರಿ ಟ್ರಕ್‌ ಕೂಡ ಅದೇ ಜಾಗದಲ್ಲಿ ಸಿಕ್ಕಿಹಾಕಿಕೊಂಡಿದೆ. ಪಂಜಾಬ್‌ನ ಮೋಗಾ ಜಿಲ್ಲೆಯ ತಖ್ತುಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಶನಿವಾರ ತಡರಾತ್ರಿ ಮೂವರು ವ್ಯಕ್ತಿಗಳು ರೈತರೊಬ್ಬರ ಹೊಲದಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಕದಿಯುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ.

ಟ್ರಾನ್ಸ್‌ಫಾರ್ಮರ್ ಕದಿಯುವಾಗಲೇ ಸಿಲುಕಿದ ಕಾರು

ರೈತ ಹರ್ಜಿಂದರ್ ಸಿಂಗ್ ನೀಡಿದ ದೂರಿನ ಪ್ರಕಾರ, ಶಂಕಿತರು ಹೊಲದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ ಅನ್ನು ಕಿತ್ತುಹಾಕಲು ಆರಂಭಿಸಿದ್ದರು. ಆದರೆ ಟ್ರಾನ್ಸ್‌ಫಾರ್ಮರ್‌ ಕದಿಯುವ ಮುನ್ನವೇ ಅವರ ಕಾರು ಮೃದುವಾದ, ನೀರು ತುಂಬಿದ ಕೆಸರಿನಲ್ಲಿ ಆಳವಾಗಿ ಸಿಲುಕಿಕೊಂಡಿದೆ. ಕಾರನ್ನು ಹೊರತೆಗೆಯಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಾರು ಬಿಡಿಸಲು ಬಂದ ರಿಕವರಿ ಟ್ರಕ್‌ಗೂ ಅದೇ ಗತಿ

ಆದರೆ ಕಳ್ಳರ ಪ್ರಯತ್ನ ಅಲ್ಲಿಗೇ ಮುಗಿದಿರಲಿಲ್ಲ. ಮರುದಿನ ಬೆಳಗ್ಗೆ ಸಿಲುಕಿಕೊಂಡಿದ್ದ ಕಾರನ್ನು ಹೊರತೆಗೆಯಲು ಅವರು ಭಾರೀ ರಿಕವರಿ ಟ್ರಕ್‌ನೊಂದಿಗೆ ಮತ್ತೆ ಹೊಲಕ್ಕೆ ಬಂದಿದ್ದಾರೆ. ಆದರೆ ವಿಧಿ ಬೇರೆಯೇ ಇತ್ತು. ಕಾರನ್ನು ಹೊರತೆಗೆಯಲು ಮುಂದಾದ ರಿಕವರಿ ಟ್ರಕ್‌ ಕೂಡ ಕೆಸರಿನಲ್ಲಿ ಸಿಲುಕಿಕೊಂಡಿದೆ. ಪರಿಣಾಮ, ಕಳ್ಳರ ಕಾರು ಹಾಗೂ ರಿಕವರಿ ಟ್ರಕ್‌ ಎರಡೂ ಹೊಲದಲ್ಲೇ ಸಿಕ್ಕಿಹಾಕಿಕೊಂಡಿವೆ.

ಗ್ರಾಮಸ್ಥರಿಗೆ ಅನುಮಾನ ಮೂಡಿಸಿತು ಎರಡು ವಾಹನಗಳ ದೃಶ್ಯ

ಹೊಲದಲ್ಲಿ ಎರಡು ವಾಹನಗಳು ಸಿಕ್ಕಿಹಾಕಿಕೊಂಡಿರುವುದನ್ನು ಕಂಡ ಸ್ಥಳೀಯ ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ಶಂಕಿತರು ಅಲ್ಲಿಗೆ ಬಂದಿದ್ದಕ್ಕೆ ಬೇರೆ ಬೇರೆ ಕಾರಣಗಳನ್ನು ಹೇಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಗ್ರಾಮಸ್ಥರು ಅವರನ್ನು ವಿಚಾರಿಸಿದಾಗ ಟ್ರಾನ್ಸ್‌ಫಾರ್ಮರ್ ಕಳ್ಳತನದ ಯೋಜನೆ ಬಯಲಾಗಿದೆ ಎಂದು ವರದಿಯಾಗಿದೆ. ಈ ವೇಳೆ ಬರ್ನಾಲಾ ಜಿಲ್ಲೆಯ ಅಲ್ಕಾಡಾ ಗ್ರಾಮದ ಲವ್‌ಪ್ರೀತ್ ಸಿಂಗ್ ಎಂಬಾತನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂವರ ವಿರುದ್ಧ ಪ್ರಕರಣ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೋಗಾ ಜಿಲ್ಲೆಯ ಖೋಟೆ ಗ್ರಾಮದ ಲವ್‌ಪ್ರೀತ್ ಸಿಂಗ್, ಜಸ್ದೀಪ್ ಸಿಂಗ್ ಹಾಗೂ ಬಟಿಂಡಾ ಜಿಲ್ಲೆಯ ಗೋನಿಯಾನಾದ ವಕೀಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಲವ್‌ಪ್ರೀತ್ ಸಿಂಗ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಾರು ಮತ್ತು ರಿಕವರಿ ಟ್ರಕ್ ಎರಡನ್ನೂ ವಶಪಡಿಸಿಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಹಿಂದಿನ ಕಳ್ಳತನಗಳ ಬಗ್ಗೆಯೂ ತನಿಖೆ

ಡಿಎಸ್‌ಪಿ ನಿಹಾಲ್ ಸಿಂಗ್ ವಾಲಾ ಅನ್ವರ್ ಅಲಿ ದೂರವಾಣಿ ಮೂಲಕ ಪ್ರಕರಣವನ್ನು ದೃಢಪಡಿಸಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ನಡೆದಿರುವ ಟ್ರಾನ್ಸ್‌ಫಾರ್ಮರ್ ಮತ್ತು ವಿದ್ಯುತ್ ಉಪಕರಣಗಳ ಕಳ್ಳತನದ ಹಿಂದಿನ ಪ್ರಕರಣಗಳಲ್ಲೂ ಈ ಆರೋಪಿಗಳು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ಟ್ರಾನ್ಸ್‌ಫಾರ್ಮರ್ ಕದಿಯಲು ಬಂದಿದ್ದ ಆರೋಪಿಗಳ ಕಾರು ಮೊದಲು ಕೆಸರಿನಲ್ಲಿ ಸಿಲುಕಿಕೊಂಡರೆ, ಅದನ್ನು ರಕ್ಷಿಸಲು ಬಂದ ರಿಕವರಿ ಟ್ರಕ್‌ಗೂ ಅದೇ ಗತಿ ಬಂದಿರುವುದು ಈ ಪ್ರಕರಣದ ಅಚ್ಚರಿಯ ತಿರುವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಓಣಂ ಹಬ್ಬಕ್ಕೆ ಕೇರಳಕ್ಕೆ ಹೊರಟ ಪ್ರಯಾಣಿಕರಿಗೆ ಆಘಾತ: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ 6 ಗಂಟೆ ವಿಳಂಬ!
ರೈಲು ಪ್ರಯಾಣಿಕರಿಗೆ ನೆಮ್ಮದಿ ಸುದ್ದಿ: ಸರ್ವರ್ ಸಮಸ್ಯೆಗೆ ಬ್ರೇಕ್, ಇನ್ಮುಂದೆ ನಿಮಿಷಕ್ಕೆ 1 ಲಕ್ಷ ಟಿಕೆಟ್ ಬುಕಿಂಗ್!