
ನಾಗಾಂವ್/ಗುವಾಹಟಿ : ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸೈರಾಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಡಿಕ್ಕಿಯಾಗಿ 7 ಆನೆಗಳು ಸಾವಿಗೀಡಾದ ಭೀಕರ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಒಂದು ಆನೆಗೆ ತೀವ್ರ ಗಾಯಗಳಾಗಿವೆ. ಡಿಕ್ಕಿ ಪರಿಣಾಮ ರೈಲಿನ 5 ಬೋಗಿಗಳು ಹಳಿ ತಪ್ಪಿದವಾದರೂ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸ್ಥಳದಲ್ಲಿ ಕವಿದಿದ್ದ ದಟ್ಟ ಮಂಜಿನಿಂದ ಗೋಚರತೆ ಕುಸಿದು ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದೆ.
ಘಟನೆಗೆ ವಿಷಾದಿಸಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ, ‘3 ವಯಸ್ಕ ಹಾಗೂ 4 ಮರಿ ಆನೆಗಳ ಸಾವಿನಿಂದ ನೋವಾಗಿದೆ. ವಿವರವಾದ ತನಿಖೆ ನಡೆಸಿ ವನ್ಯಜೀವಿ ಕಾರಿಡಾರ್‌ಗಳನ್ನು ಸುರಕ್ಷಿತಗೊಳಿಸುವಂತೆ ಹಾಗೂ ಕಡಿಮೆ ಗೋಚರತೆಯ ಋತುಗಳಲ್ಲಿ ಮತ್ತಷ್ಟು ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದ್ದೇನೆ’ ಎಂದಿದ್ದಾರೆ.
ಮಿಜೋರಾಂನ ಸೈರಂಗ್‌ನಿಂದ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ಗೆ ನಡುವೆ ರೈಲು ಸಂಚರಿಸುತ್ತಿದ್ದು, ಗುವಾಹಟಿಯಿಂದ 126 ಕಿ.ಮೀ. ದೂರದಲ್ಲಿ ಅಪಘಾತ ಸಂಭವಿಸಿದೆ.
ಈಶಾನ್ಯ ರೈಲ್ವೆಯ ವಕ್ತಾರ ಮಾತನಾಡಿ, ‘ಆನೆಗಳ ಕಾರಿಡಾರ್ ಆಗಿರದ ಜಾಗದಲ್ಲಿ ಅಪಘಾತ ಸಂವಿಸಿದೆ. ಅಚಾನಕ್ಕಾಗಿ ಆನೆಗಳ ಹಿಂಡನ್ನು ನೋಡುತ್ತಿದ್ದಂತೆ ಚಾಲಕ ತುರ್ತು ಬ್ರೇಕ್ ಹಾಕಿದರೂ ಅಷ್ಟರಲ್ಲಿ ರೈಲು ಡಿಕ್ಕಿ ಹೊಡೆದಿದೆ’ ಎಂದಿದ್ದಾರೆ.
ಅತ್ತ ನಾಗಾಂವ್‌ನ ವಿಭಾಗೀಯ ಅರಣ್ಯ ಅಧಿಕಾರಿ ಸುಹಾಸ್ ಕದಂ ಪ್ರತಿಕ್ರಿಯಿಸಿ, ‘ದಟ್ಟ ಮಂಜಿನಿಂದ ಗೋಚರತೆ ಸಮಸ್ಯೆ ಉಂಟಾಗಿ ರೈಲು ಡಿಕ್ಕಿಯಾಗಿರಬಹುದು. ಮೃತ ಆನೆಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಗಾಯಗೊಂಡಿದ್ದ ಮರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವುಗಳನ್ನು ಘಟನಾಸ್ಥಳದ ಸಮೀಪವೇ ಹೂಳಲಾಗುವುದು’ ಎಂದಿದ್ದಾರೆ.
ಘಟನೆ ಬೆನ್ನಲ್ಲೇ ಆ ಮಾರ್ಗವಾಗಿ ಸಾಗುವ 9 ರೈಲುಗಳನ್ನು ರದ್ದು ಮಾಡಲಾಗಿದೆ. ಅತ್ತ 13 ರೈಲಿಗಳನ್ನು ನಿಯಂತ್ರಿಸಲಾಗುತ್ತಿದೆ ಹಾಗೂ ಎರಡನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಇನ್ನು ಹಳಿ ತಪ್ಪಿದ 5 ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಅನ್ಯ ಬೋಗಿಗಳಿಗೆ ಹತ್ತಿಸಿಕೊಂಡು ಬೆಳಗ್ಗೆ 6 ಗಂಟೆಯ ಸುಮಾರಿಗೆ ರಾಜಧಾನಿ ಎಕ್ಸ್‌ಪ್ರೆಸ್ ಗುವಾಹಟಿಯ ಕಡೆ ಸಾಗಿದೆ.
ವಿಪಕ್ಷ ಕಿಡಿ:
ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್, ‘ಪ್ರಸ್ತುತ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶ ಮಾಡುತ್ತಿದೆ. ಇದರಿಂದ ಕಾಡು ಪ್ರಮಾಣ ತಗ್ಗಿ ಪ್ರಾಣಿಗಳ ವಲಸೆ ಮಾರ್ಗಕ್ಕೆ ಅಡ್ಡಿಯಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಗಮನ ಸರ್ಕಾರ ಗಮನ ಹರಿಸಿಲ್ಲ’ ಎಂದಿದ್ದಾರೆ.‘
ಅಭಿವೃದ್ಧಿ ನೀತಿಗಳು ಅಲ್ಪಾವಧಿಯ ಲಾಭಕ್ಕಿಂತ ಜನರು, ಸಮುದಾಯಗಳು ಮತ್ತು ಪರಿಸರಕ್ಕೆ ಆದ್ಯತೆ ನೀಡಬೇಕು. ಈ ಸಮತೋಲನವನ್ನು ನಿರ್ಲಕ್ಷಿಸುವುದರಿಂದ ಅಸ್ಸಾಂಗೆ ಪರಿಸರ ಹಾನಿ ಮತ್ತು ಸಾಮಾಜಿಕ ವೆಚ್ಚಗಳು ಹೆಚ್ಚಾಗುತ್ತವೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ