ಟ್ರಾಫಿಕ್ ಪೊಲೀಸರಾಗಿ ಕರ್ತವ್ಯ ನಿರ್ವಹಿಸುವುದು ಸುಲಭದ ಕೆಲಸವಲ್ಲ. ಧೂಳು, ಬಿಸಿಲು ಮಳೆಯನ್ನು ಲೆಕ್ಕಿಸದೇ ದಿನವಿಡೀ ರಸ್ತೆ ಪಕ್ಕ ನಿಂತುಕೊಂಡು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡುವುದು ಸುಲಭದ ಕೆಲಸವೇನಲ್ಲಾ. ಅದಾಗ್ಯೂ ಓರ್ವ ಟ್ರಾಫಿಕ್ ಪೊಲೀಸರೊಬ್ಬರು ತಮ್ಮ ಸೇವೆಯನ್ನು ತುಸು ಹೆಚ್ಚೇ ಮಾಡಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಟ್ರಾಫಿಕ್ ಪೊಲೀಸೊಬ್ಬರು ಜಲ್ಲಿ ಕಲ್ಲುಗಳಿಂದ ತುಂಬಿದ್ದ ರಸ್ತೆಯನ್ನು ಗುಡಿಸುತ್ತಿರುವ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಗಳಲ್ಲಿ ಇರುವ ಸಣ್ಣಪುಟ್ಟ ಕಲ್ಲುಗಳು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತವೆ. ಈ ವಿಚಾರ ಮನಗಂಡಿರುವ ಪೊಲೀಸ್ ಪೇದೆ ವಾಹನ ದಟ್ಟಣೆಯಿಂದ ತುಂಬಿರುವ ರಸ್ತೆಯಲ್ಲಿ ಈ ಕಲ್ಲುಗಳನ್ನು ಗುಡಿಸಿ ತೆರವು ಮಾಡುತ್ತಿದ್ದಾರೆ.
ಛತ್ತೀಸ್‌ಗಡ ಕೇಡಾರ್‌ನ (Chhattisgarh Cadre) ಐಎಎಸ್ ಅಧಿಕಾರಿ (IAS Officer) ಅವನೀಶ್ ಶರಣ್ (Awanish Sharan) ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಗುಲಾಬಿ ಬಣ್ಣದ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಆ ದಾರಿಯಲ್ಲಿ ಸಾಗುವ ವಾಹನ ಸವಾರರಿಗೆ ಕೈ ಸನ್ನೆ ಮೂಲಕ ನಿಧಾನವಾಗಿ ಸಾಗುವಂತೆ ಮನವಿ ಮಾಡುತ್ತಿದ್ದು, ಆತನ ಪಕ್ಕದಲ್ಲಿ ಪೊಲೀಸ್ ಪೇದೆ ನಿಧಾನವಾಗಿ ಸಾಗುವಂತೆ ವಾಹನ ಸವಾರರಿಗೆ ಮನವಿ ಮಾಡುತ್ತಿದ್ದಾರೆ.
ಟ್ರಾಫಿಕ್ ಪೊಲೀಸ್ ಜೊತೆ ಯುವಕನ ಚಮ್ಮಕ್ ಚಲ್ಲೋ: ಧೂಮ್ ಸ್ಟೈಲಲ್ಲಿ ಎಸ್ಕೇಪ್ ಆದ ಯುವಕ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರು ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಒಂಭತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ 54,000 ಹೆಚ್ಚು ಜನ ಲೈಕ್ ಮಾಡಿದ್ದಾರೆ. ಜನರ ಸುರಕ್ಷತೆಗೋಸ್ಕರ ಈ ಕಾರ್ಯ ಮಾಡುತ್ತಿರುವ ಟ್ರಾಫಿಕ್ ಪೊಲೀಸರಿಗೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಕೋಲ್ಕತ್ತಾದ ಟ್ರಾಫಿಕ್ ಪೊಲೀಸ್ ಒಬ್ಬರು ರಸ್ತೆ ಬದಿ ನಿರ್ಗತಿಕ ಮಗುವಿಗೆ ಪಾಠ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನ ಮನ್ನಣೆ ಗಳಿಸಿದ್ದರು.
ಟ್ರಾಫಿಕ್ ಪೊಲೀಸರನ್ನು ನೋಡಿದ ಕೂಡಲೇ ದೂರ ಓಡುವವರೇ ಹೆಚ್ಚು. ನಿಯಮ ಮೀರಿದವರ ಮೇಲೆ ಮನ ಬಂದಂತೆ ದಂಡ ಹಾಕಿ ಸುಲಿಗೆ ಮಾಡುತ್ತಾರೆ ಎಂಬುದು ಟ್ರಾಫಿಕ್ ಪೊಲೀಸರ ಮೇಲೆ ಬಹುಜನರ ಆರೋಪ. ಅದಾಗ್ಯೂ ಒಳ್ಳೆಯವರು ಹಾಗೂ ಕೆಟ್ಟವರು ಎಲ್ಲೆಡೆ ಇರುವಂತೆ ಪೊಲೀಸ್ ಇಲಾಖೆಯಲ್ಲೂ ಒಳ್ಳೆಯವರು ಇದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಬೇಕಂತಲೇ ರೂಲ್ಸ್ ಬ್ರೇಕ್ ಮಾಡೋರಿಗೆ ಬೆಂಗ್ಳೂರು ಟ್ರಾಫಿಕ್ ಪೊಲೀಸ್ ಹೊಸ ತಂತ್ರ
ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಜಾಲತಾಣವಾದ ಟ್ವಿಟ್ಟರ್ ಪೇಜ್ ಯಾವಾಗಲೂ ವಿವಿಧ ಸುರಕ್ಷತಾ ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಚಮತ್ಕಾರಿ ವಿಧಾನದಲ್ಲಿ ಜನರಿಗೆ ನೆನಪಿಸುವ ಕಾರ್ಯಕ್ಕೆ ಹಾಗೂ ಹಾಸ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ಗಳಿಸುತ್ತಿದೆ. ಕಳೆದ ವರ್ಷ ಮುಂಬೈ ಟ್ರಾಫಿಕ್ ಪೋಲೀಸ್ ಒಬ್ಬರು, ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗೆ ರಸ್ತೆ ದಾಟಲು ಸಹಾಯ ಮಾಡುತ್ತಿರುವ ಹೃದಯಸ್ಪರ್ಶಿ ವೀಡಿಯೊವನ್ನು ಮುಂಬೈ ಪೊಲೀಸರು ಟ್ವಿಟ್ಟರ್ ಪೇಜ್‌ನಲ್ಲಿ ಶೇರ್ ಮಾಡಿದ್ದರು. ಈ ಪೋಸ್ಟ್‌ಗೆ ನೆಟ್ಟಿಗರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋದಲ್ಲಿ ಮುಂಬೈನ ಹೆಡ್ ಕಾನ್‌ಸ್ಟೇಬಲ್ ರಾಜೇಂದ್ರ ಸೋನಾವಾನೆ ಅವರು ವಿಶೇಷ ಚೇತನ ವ್ಯಕ್ತಿಗೆ ಸಹಾಯ ಹಸ್ತ ನೀಡುತ್ತಿರುವ ದೃಶ್ಯವಿದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (CSMT) ರಸ್ತೆಯ ಜನನಿಬಿಡ ಜಂಕ್ಷನ್ ಅನ್ನು ದಾಟಲು ಕಷ್ಟ ಪಡುತ್ತಿದ್ದ ವಿಶೇಷ ಚೇತನ ವ್ಯಕ್ತಿಯ ಕೈ ಹಿಡಿದ ಸೋನಾವಾನೆ ಆತನನ್ನು ರಸ್ತೆ ದಾಟಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ